ಅರ್ಜಿ ಸಲ್ಲಿಕೆಗೆ ನಿರ್ದಿಷ್ಟ ನಿಯಮ : ಆಗಸ್ಟ್ 16ರಿಂದ ಕರ್ನಾಟಕ ಹೈಕೋರ್ಟ್ನಲ್ಲಿ ಕಟ್ಟುನಿಟ್ಟಿನ ಕ್ರಮ
ಇನ್ನು ಮುಂದೆ ಕರ್ನಾಟಕ ಹೈಕೋರ್ಟ್ನಲ್ಲಿ ಅವ್ಯವಸ್ಥಿತ ರೀತಿಯಲ್ಲಿ ಬೇಕಾಬಿಟ್ಟಿಯಾಗಿ ಅರ್ಜಿಯ ದಾವೆ ಹಾಕುವಂತಿಲ್ಲ. ನಿರ್ದಿಷ್ಟ ನಿಯಮಗಳ ಪ್ರಕಾರ ನಿರ್ದಿಷ್ಟ ಗಾತ್ರದ ಅಕ್ಷರಗಳೊಂದಿಗೆ ಬಿಳಿ ಹಾಳೆಯಲ್ಲಿ ಒಂದೇ ಬದಿಯಲ್ಲಿ ಟೈಪ್ ಅಥವಾ ಪ್ರಿಂಟ್ ಮಾಡಿ ಅಥವಾ ನೀಟಾದ ಕೈ ಬರಹದೊಂದಿಗೆ ಬರೆದು ನ್ಯಾಯಪೀಠಕ್ಕೆ ಸಲ್ಲಿಸಬಹುದು. ಈ ಹೊಸ ನಿಯಮಗಳು ಆಗಸ್ಟ್ 16, 2023ರಿಂದ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ.
ನಿಯಮಗಳಲ್ಲಿ ಸೂಚಿಸಲಾದ ರೀತಿಯಲ್ಲಿ ಅರ್ಜಿಗಳನ್ನು ಹಾಕದೇ ಇದ್ದರೆ, ಅಂತಹ ಅರ್ಜಿಗಳನ್ನು ನ್ಯಾಯಪೀಠ ಪರಿಗಣಿಸದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಕರ್ನಾಟಕ ಹೈಕೋರ್ಟ್ ನಿಯಮಗಳು -1959 ಅನ್ವಯ ಈ ಸುತ್ತೋಲೆಯನ್ನು ಹೊರಡಿಸಲಾಗಿದೆ.
ಅಧ್ಯಾಯ XII ನಿಯಮ 2ನ್ನು ಹೈಕೋರ್ಟ್ ಪೂರ್ಣಪೀಠ ತಿದ್ದುಪಡಿ ಮಾಡಿದೆ. ಈ ಪ್ರಕಾರ, ನ್ಯಾಯಪೀಠಕ್ಕೆ ಸಲ್ಲಿಸುವ ಯಾವುದೇ ಜ್ಞಾಪನ, ಅರ್ಜಿ, ಮೇಲ್ಮನವಿ, ಮನವಿ, ಅಫಿಡವಿಟ್, ಮಧ್ಯಂತರ ಅರ್ಜಿಯನ್ನು ಒಂದೇ ಬದಿಯಲ್ಲಿ ಟೈಪ್ ಅಥವಾ ನೀಟಾಗಿ ಬರೆದಿರುವ ಎ4 ಸೈಜಿನ ಬಿಳಿ ಹಾಳೆಯಲ್ಲಿ ಸಲ್ಲಿಸತಕ್ಕದ್ದು. ಅದರ ಉದ್ದ ಮತ್ತು ಅಗಲವನ್ನೂ ನಿರ್ದಿಷ್ಟವಾಗಿ ನಿಗದಿಪಡಿಸಿದ್ದು, ದೃಢ ಬಾಳಿಕೆಯ 75 ಜಿಎಸ್ಎಂ ತೂಕ ಇರಬೇಕು. ಟೈಪಿಂಗ್ ಸಾಲುಗಳ ನಡುವೆ 1.5 ಸಾಲಿನ ಅಂತರ ಇರಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಒಟ್ಟು ಅರ್ಜಿ ಕಡತವನ್ನು ಬುಕ್ನಂತೆ ಹೊಲಿಗೆ ಮಾಡಿ ವಕಾಲತ್ತು ಶೀರ್ಷಿಕೆ ಪುಟ (ಇಂಡೆಕ್ಸ್), ಆರ್ಡರ್ ಶೀಟ್ ಮತ್ತು ಅರ್ಜಿಗಳ ಜೊತೆಗೆ ಸಲ್ಲಿಸಬೇಕು. ಸುತ್ತೋಲೆಯ ಪ್ರಕಾರ ನಿಯಮ ಉಲ್ಲಂಘಿಸಿದ ಯಾವುದೇ ಅರ್ಜಿಗಳನ್ನು ಹೈಕೋರ್ಟ್ ಕಚೇರಿ ಸ್ವೀಕರಿಸುವುದಿಲ್ಲ ಎಂದು ಸೂಚಿಸಲಾಗಿದೆ.
ಲಾಗೈಡ್ ವರದಿ