24/12/2024

Law Guide Kannada

Online Guide

ಸಂಗಾತಿ ಜೊತೆ ಸೇರಿದ ಯುವತಿ: ಸಲಿಂಗಿಗಳ ಸಹಜೀವನ ಹಕ್ಕು ಎತ್ತಿಹಿಡಿದ ಹೈಕೋರ್ಟ್

ಹೈದರಾಬಾದ್: ಸಲಿಂಗ ಯುವತಿಯರ ಸಹಜೀವನದ ಹಕ್ಕನ್ನು ಎತ್ತಿಹಿಡಿದಿರುವ ಆಂಧ್ರ ಪ್ರದೇಶ ಹೈಕೋರ್ಟ್, ವಯಸ್ಕರಾದವರಿಗೆ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವಿದೆ. ಕುಟುಂಬ ಸದಸ್ಯರ ಹಸ್ತಕ್ಷೇಪ ಇಲ್ಲದೆ ಅವರು ಮತ್ತೆ ಒಂದಾಗುವಂತೆ ನೋಡಿಕೊಳ್ಳಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದೆ.

ತನ್ನ ಸಂಗಾತಿಯನ್ನು ಆಕೆಯ ಕುಟುಂಬ ತನ್ನಿಂದ ಬಲವಂತವಾಗಿ ದೂರ ಮಾಡಿದೆ ಎಂದು ಆರೋಪಿಸಿ 25 ವರ್ಷದ ಯುವತಿ ಸಲ್ಲಿಸಿದ್ದ ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆರ್. ರಘುನಂದನ್ ರಾವ್ ಮತ್ತು ಮಹೇಶ್ವರ ರಾವ್ ಕುಂಚೇಮ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.

ಕುಟುಂಬದ ವಶದಲ್ಲಿ ಇರುವ ಯುವತಿಯನ್ನು ತನ್ನ ಮುಂದೆ ಹಾಜರುಪಡಿಸುವಂತೆ ಡಿಸೆಂಬರ್ 12ರಂದು ನ್ಯಾಯಾಲಯ ಆದೇಶ ನೀಡಿತ್ತು. ಅದರಂತೆ ಡಿಸೆಂಬರ್ 17ರಂದು ಯುವತಿ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಗೌಪ್ಯವಾಗಿ ಆಕೆಯ ಜೊತೆಗೆ ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ ಆಕೆ ಸ್ವ- ಇಚ್ಚೆಯಿಂದ ಅರ್ಜಿದಾರರ ಜೊತೆಗೆ ತೆರಳುವ ಬಯಕೆ ಹೊಂದಿರುವುದಾಗಿ ತಿಳಿಸಿದ್ದರು. ಹೀಗಾಗಿ ಆಕೆಯ ನಿರ್ಧಾರದಲ್ಲಿ ಮಧ್ಯಪ್ರವೇಶ ಮಾಡಬಾರದು ಎಂದು ಯುವತಿಯ ಕುಟುಂಬದವರಿಗೆ ನ್ಯಾಯಪೀಠ ಸೂಚನೆ ನೀಡಿದೆ.

ಈ ಪ್ರಕರಣದಲ್ಲಿ ಇಬ್ಬರೂ ವಯಸ್ಕರಾಗಿದ್ದು, ತಮ್ಮ ಜೀವನದ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳಲು ಸ್ವತಂತ್ರರು ಮತ್ತು ಶಕ್ತರು. ಹೀಗಾಗಿ ಈ ಜೋಡಿಯ ಸಂಬಂಧದಲ್ಲಿ ಮಧ್ಯಪ್ರವೇಶಿಸಬಾರದು ಕುಟುಂಬದ ವಶದಲ್ಲಿರುವ ಯುವತಿ ಅರ್ಜಿದಾರರೊಂದಿಗೆ ತೆರಳುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಅರ್ಜಿದಾರರೊಂದಿಗೆ ತೆರಳಲು ಇಲ್ಲವೇ ಕುಟುಂಬದ ವಶದಲ್ಲಿ ಇರುವ ಯುವತಿ ತಾನು ಬಯಸಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಮುಕ್ತರಾಗಿದ್ದಾರೆ ಎಂದು ತಿಳಿಸಿದೆ.

ಕುಟುಂಬದ ವಶದಲ್ಲಿ ಇರುವ ಯುವತಿ ಸುರಕ್ಷಿತವಾಗಿ ಅರ್ಜಿದಾರರ ಮನೆಗೆ ತೆರಳುವಂತೆ ಪೊಲೀಸರು ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ. ಆಕೆಯ ನಿರ್ಧಾರದಲ್ಲಿ ಆಕೆಯ ಕುಟುಂಬದವರು ಮಧ್ಯಪ್ರವೇಶಿಸುವಂತೆ ಇಲ್ಲ ಎಂಬುದನ್ನೂ ಆದೇಶದಲ್ಲಿ ತಿಳಿಸಲಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.