We are all just judges: We should not step outside the framework of law- High Court Khadak opinion
ನಾವೆಲ್ಲಾ ಕೇವಲ ನ್ಯಾಯಾಧೀಶರು: ಕಾನೂನಿನ ಚೌಕಟ್ಟು ಮೀರಿ ನಡೆಯಬಾರದು- ಹೈಕೋರ್ಟ್ ಖಡಕ್ ಅಭಿಪ್ರಾಯ.
ಬೆಂಗಳೂರು: ಗುತ್ತಿಗೆ ಅವಧಿ ವಿಸ್ತರಣೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ನ್ಯಾಯಪೀಠ ಖಡಕ್ ಅಭಿಪ್ರಾಯವೊಂದನ್ನ ವ್ಯಕ್ತಪಡಿಸಿದೆ.
“ನಾವೆಲ್ಲಾ ಕೇವಲ, ಕೇವಲ ನ್ಯಾಯಾಧೀಶರು, ನ್ಯಾಯಮೂರ್ತಿಗಳು ಮಾತ್ರವೇ ಎಂಬುದನ್ನು ಸದಾ ಗಮನದಲ್ಲಿಟ್ಟುಕೊಂಡಿರಬೇಕು. ಕಾನೂನಿನ ಚೌಕಟ್ಟನ್ನು ಮೀರಿ ನಡೆಯಬಾರದು ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅಂಗವಿಕಲ ವ್ಯಕ್ತಿಯೊಬ್ಬರಿಗೆ ನೀಡಲಾಗಿದ್ದ ಮಳಿಗೆಯ ಗುತ್ತಿಗೆ ಅವಧಿ ವಿಸ್ತರಣೆಯನ್ನು ಪ್ರಶ್ನಿಸಿ ಚನ್ನಪಟ್ಟಣ ನಗರಸಭೆ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ವಿಭಾಗೀಯ ನ್ಯಾಯಪೀಠ, “ಅಂಗವಿಕಲರಿಗೆ ನೀಡಲಾದ ಗುತ್ತಿಗೆಯನ್ನು ಅವರ ನಿಧನದ ನಂತರವೂ ಅನುವಂಶಿಯವಾಗಿ ಪರಿಗಣಿಸಲಾಗುವುದಿಲ್ಲ. ಹಂಚಿಕೆದಾರನ ಮರಣದ ನಂತರ ಗುತ್ತಿಗೆ ಕೊನೆಗೊಳ್ಳುತ್ತದೆ. ಹಾಗಾಗಿ, ಪತ್ನಿ ಹಾಗೂ ಮಕ್ಕಳು ಯಾವುದೇ ರೀತಿಯಲ್ಲಿ ಅನುವಂಶಿಯವಾಗಿ ಏನನ್ನೂ ಪಡೆಯಲಾಗುವುದಿಲ್ಲ’ ಎಂದು ತಿಳಿಸಿದೆ.
ಕಾನೂನು ಅಡಿಯಲ್ಲಿ 12 ವರ್ಷ ಮಾತ್ರವೇ ಗುತ್ತಿಗೆ ನವೀಕರಿಸಲು ಅವಕಾಶವಿದೆ. ಆದರೂ ಹೈಕೋರ್ಟ್ನ ಏಕಸದಸ್ಯ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರು ಅದನ್ನು 20 ವರ್ಷಕ್ಕೆ ವಿಸ್ತರಿಸಲು ನಿರ್ಧರಿಸಿ ಆದೇಶಿಸಿತ್ತು.
ಆದರೆ ಏಕಸದಸ್ಯ ಪೀಠದ ಈ ಕ್ರಮವನ್ನು ತನ್ನ ಆದೇಶದಲ್ಲಿ ತೀವ್ರವಾಗಿ ಖಂಡಿಸಿರುವ ನ್ಯಾಯಮೂರ್ತಿ ಕೃಷ್ಣದೀಕ್ಷಿತ್ ನೇತೃತ್ವದ ವಿಭಾಗೀಯ ನ್ಯಾಯಪೀಠವು, ಏಕಸದಸ್ಕ ನ್ಯಾಯಪೀಠದ ಆದೇಶವನ್ನು ತಳ್ಳಿ ಹಾಕಿದೆ.
ಪ್ರಕರಣದ ಹಿನ್ನೆಲೆ…
2009ರ ಸೆಪ್ಟಂಬರ್ ನಲ್ಲಿ ಆಗಿನ ಸರ್ಕಾರ “ಹರಾಜಿನ ಮೂಲಕ ಕೆಲವು ಶಾಪಿಂಗ್ ಮಳಿಗೆಗಳನ್ನು ಗುತ್ತಿಗೆ ನೀಡಲು ಅಧಿಸೂಚನೆ ಹೊರಡಿಸಿತ್ತು. ಈ ನಿಟ್ಟಿನಲ್ಲಿ ಶೇ 80ರಷ್ಟು ಅಂಗ ವೈಕಲ್ಯ ಹೊಂದಿದ್ದ ಚನ್ನಪಟ್ಟಣದ ನಿವಾಸಿ ಸಿದ್ದರಾಮು ಅವರಿಗೆ ಒಂದು ಮಳಿಗೆಯನ್ನು 12 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿತ್ತು. ಈ ಮಧ್ಯೆ ಅವರು, ಗುತ್ತಿಗೆ ಅವಧಿಯನ್ನು 20 ವರ್ಷಗಳವರೆಗೆ ವಿಸ್ತರಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಲೇರಿದ್ದರು.
ಸಿದ್ದರಾಮು ಪರ ವಾದ ಮಂಡಿಸಿದ್ದ ಹಿರಿಯ ವಕೀಲೆ ಜಯ್ನಾ ಕೊಠಾರಿ ಅವರ ವಾದವನ್ನು ಮನ್ನಿಸಿದ್ದ ಏಕಸದಸ್ಯ ನ್ಯಾಯಪೀಠ ಗುತ್ತಿಗೆ ಅವಧಿ ವಿಸ್ತರಿಸಿ ಆದೇಶಿಸಿತ್ತು.
ಏಕಸದಸ್ಯ ನ್ಯಾಯಪೀಠದ ಈ ಅದೇಶವನ್ನು ಪ್ರಶ್ನಿಸಿ ಚನ್ನಪಟ್ಟಣ ನಗರಸಭೆ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ವಿಚಾರಣಾ ಹಂತದಲ್ಲಿ ಇರುವಾಗಲೇ ಸಿದ್ದರಾಮು ನಿಧನರಾಗಿದ್ದರು. ಬಳಿಕ ಅವರ ಪತ್ನಿ ವಿಚಾರಣೆ ಮುಂದುವರಿಸಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ