04/01/2025

Law Guide Kannada

Online Guide

ಹೈಕೋರ್ಟ್ ಆದೇಶ ಉಲ್ಲಂಘನೆ: ಜಿಲ್ಲಾ ಸರ್ಕಾರಿ ನೌಕರರ ಸಂಘ, ಚುನಾವಣಾಧಿಕಾರಿ ಮೇಲೆ ನ್ಯಾಯಾಂಗ ನಿಂದನೆಯ ತೂಗುಕತ್ತಿ

ಬೆಂಗಳೂರು: ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಚುನಾವಣಾಧಿಕಾರಿ ಮತ್ತು ಪದಾಧಿಕಾರಿಗಳಿಗೆ ನ್ಯಾಯಾಂಗ ನಿಂದನೆಯ ಆತಂಕ ಎದುರಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಯ ನಿರ್ದೇಶಕರುಗಳ ಹುದ್ದೆಗೆ ನ್ಯಾಯಾಂಗ ಇಲಾಖೆಯಿಂದ ಪ್ರತಿನಿಧಿಗಳ ಆಯ್ಕೆಗೆ ದಿನಾಂಕ 27.12.2024ರ ಒಳಗೆ ಚುನಾವಣೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ಹೊರಡಿಸಿದ ಆದೇಶವನ್ನು ಪಾಲಿಸದ ಚುನಾವಣಾಧಿಕಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಂಘದ ಪದಾಧಿಕಾರಿಗಳಿಗೆ ದಂಡ ವಿಧಿಸಿದೆ.

ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಪದಾಧಿಕಾರಿ ಹಾಗೂ ಚುನಾವಣಾ ಅಧಿಕಾರಿಯು ಮಂಗಳೂರಿನ ಪ್ರಧಾನ ನ್ಯಾಯಾಲಯವು ಹೊರಡಿಸಿದ ಅಜ್ಞಾಪಕ ನಿರ್ಬಂಧಕಾಜ್ಞೆ ಆದೇಶವನ್ನು ಪಾಲಿಸುವ ಬದಲು ಕರ್ನಾಟಕ ಹೈಕೋರ್ಟಿಗೆ ತಪ್ಪು ಮಾಹಿತಿ ನೀಡಿ ಚುನಾವಣೆ ನಡೆಸಬೇಕೆಂಬ ಆದೇಶದ ವಿರುದ್ಧ ತಡೆಯಾಜ್ಞೆ ಪಡೆದಿದ್ದರು. ಆದರೆ ಈ ದುರುದ್ದೇಶ ಪೂರಿತ ಕೃತ್ಯವನ್ನು ಗಂಭೀರವಾಗಿ ಪರಿಣಮಿಸಿದ ಹೈಕೋರ್ಟ್ ರಿಟ್ ಅರ್ಜಿದಾರರಿಗೆ ರೂಪಾಯಿ 5 ಲಕ್ಷ ದಂಡವನ್ನು ವಿಧಿಸಿ ದಿನಾಂಕ 27.12.2024ರ ಒಳಗೆ ಮರು ಚುನಾವಣೆ ನಡೆಸುವಂತೆ ನಿರ್ದೇಶಿಸಿ ದಿನಾಂಕ 13.12.2024 ರಂದು ಆದೇಶ ಹೊರಡಿಸಿತ್ತು.

ದಕ್ಷಿಣ ಕನ್ನಡ ಜಿಲ್ಲಾ ಸಂಘವು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಶೇಷ ಅನುಮತಿ ಅರ್ಜಿ ಸಲ್ಲಿಸಿರುವುದರಿಂದ ನ್ಯಾಯಾಂಗ ಇಲಾಖೆ ನೌಕರರ ಮತಕ್ಷೇತ್ರ ಸಂಖ್ಯೆ 47ರ ಚುನಾವಣೆಯನ್ನು ದಿನಾಂಕ 2.1.2025 ರ ವರೆಗೆ ಕಾಯ್ದಿರಿಸಲಾಗಿದೆ ಎಂಬುದಾಗಿ ಚುನಾವಣಾ ಅಧಿಕಾರಿಯು ದಿನಾಂಕ 25.12.2024ರಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ಮಾನ್ಯ ಕರ್ನಾಟಕ ಹೈಕೋರ್ಟ್ ನ ಆದೇಶದಿಂದ ಚುನಾವಣಾ ಅಧಿಕಾರಿ ಹಾಗೂ ಪದಾಧಿಕಾರಿಗಳು ಯಾವುದೇ ರೀತಿಯಲ್ಲಿ ಬಾಧಿತರಾಗಿಲ್ಲ. ಸಂಘದ ಪದಾಧಿಕಾರಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ವಿಶೇಷ ಅನುಮತಿ ಅರ್ಜಿ ವಿಚಾರಣೆಗೆ ಅಂಗೀಕಾರವಾಗಿ ಹೈಕೋರ್ಟ್ ನ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದಲ್ಲಿ ಮಾತ್ರ ಚುನಾವಣೆಯನ್ನು ಕಾದಿರಿಸಲಾಗಿದೆ ಎಂಬುದಾಗಿ ಚುನಾವಣಾ ಅಧಿಕಾರಿ ಪತ್ರಿಕಾ ಪ್ರಕಟಣೆ ನೀಡಬಹುದಿತ್ತು.

ಆದರೆ ಹೈಕೋರ್ಟ್ ಆದೇಶದ ವಿರುದ್ಧ ಯಾವುದೇ ತಡೆಯಾಜ್ಞೆ ಪಡೆಯದೆ ಇರುವುದರಿಂದ ಹಾಗೂ ವಿಶೇಷ ಅನುಮತಿ ಅರ್ಜಿ ಇನ್ನೂ ಅಂಗೀಕಾರ ಹಂತದಲ್ಲಿರುವುದರಿಂದ ಚುನಾವಣಾ ಅಧಿಕಾರಿಯು ಹೊರಡಿಸಿದ ಪತ್ರಿಕಾ ಪ್ರಕಟಣೆ ಕರ್ನಾಟಕ ಹೈಕೋರ್ಟ್ ನೀಡಿದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದ್ದು ನ್ಯಾಯಾಂಗ ನಿಂದನೆಯಾಗಿದೆ.

ಹೈಕೋರ್ಟಿಗೆ ತಪ್ಪು ಮಾಹಿತಿ ನೀಡಿ ನ್ಯಾಯಾಲಯದ ಅಮೂಲ್ಯ ವೇಳೆಯನ್ನು ಅಪವ್ಯಯ ಮಾಡಿದ ಆರೋಪದ ಮೇಲೆ ಈಗಾಗಲೇ 5 ಲಕ್ಷ ದಂಡ ವಿಧಿಸಿದೆ. ಹೈಕೋರ್ಟ್ ಆದೇಶವನ್ನು ಪಾಲಿಸದೆ ಮಾನ್ಯ ಸುಪ್ರೀಂ ಕೋರ್ಟ್ ನಲ್ಲಿ ವಿಶೇಷ ಅನುಮತಿ ಅರ್ಜಿ ಸಲ್ಲಿಸಿ ಹೈಕೋರ್ಟ್ ಆದೇಶದ ವಿರುದ್ಧ ತಡೆಯಾಜ್ಞೆ ಇಲ್ಲದಿದ್ದರೂ ನ್ಯಾಯಾಂಗ ನೌಕರರನ್ನು ಮತದಾನದ ಸಂವಿಧಾನಾತ್ಮಕ ಹಕ್ಕಿನಿಂದ ವಂಚಿತರನ್ನಾಗಿ ಮಾಡಿರುವ ಪ್ರಕರಣವನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿ ಮತ್ತೆ ದ.ಕ.ಜಿಲ್ಲಾ ಸಂಘದ ಪದಾಧಿಕಾರಿಗಳಿಗೆ ಸೂಕ್ತ ದಂಡನೆ ವಿಧಿಸುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಕಾನೂನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.