23/12/2024

Law Guide Kannada

Online Guide

ಆನ್ ಲೈನ್ ನಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳ ವೀಕ್ಷಣೆ ಅಪರಾಧವಲ್ಲ ಆದೇಶ ಹಿಂಪಡೆದ ಹೈಕೋರ್ಟ್

ಬೆಂಗಳೂರು: ಮಕ್ಕಳ ಅಶ್ಲೀಲ ಚಿತ್ರಗಳನ್ನು ಆನ್‌ ಲೈನ್‌ ನಲ್ಲಿ ವೀಕ್ಷಿಸುವುದು ಅಪರಾಧವಲ್ಲ ಎಂಬುದಾಗಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ವಾಪಸ್ ಪಡೆದಿದೆ.
ಆನ್‌ಲೈನ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರ ವೀಕ್ಷಿಸುವುದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 ಬಿ ಅಡಿಯಲ್ಲಿ ಅಪರಾಧವಲ್ಲ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಆದೇಶಿಸಿತ್ತು.

ಇದೀಗ ಆನ್‌ಲೈನ್‌ನಲ್ಲಿ ಮಕ್ಕಳ ಅಶ್ಲೀಲ ದೃಶ್ಯಗಳನ್ನು (ಚೈಲ್ಡ್‌ ಪೋರ್ನೋಗ್ರಫಿ) ನೋಡುವುದು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 67ರ ‘ಬಿ’ ಅಧಿ ನಿಯಮ ಅನ್ವಯ ಅಪರಾಧವಲ್ಲವೆಂದು ಜುಲೈ 10ರಂದು ನೀಡಿದ್ದ ಆದೇಶವನ್ನು ಹೈಕೋರ್ಟ್‌ ಹಿಂಪಡೆದಿದೆ.

ಅಲ್ಲದೆ, ಸ್ವತಃ ನ್ಯಾಯಮೂರ್ತಿಗಳೇ ಆದೇಶ ನೀಡುವಾಗ ತಪ್ಪಾಗಿದೆ, ಹಾಗಾಗಿ ಅದನ್ನು ವಾಪಸ್ ಪಡೆದು ಹೊಸ ಆದೇಶ ಹೊರಡಿಸಿರುವುದಾಗಿ ತಿಳಿಸಿದ್ದಾರೆ.

ನ್ಯಾಯಾಲಯವು ಐಟಿ ಕಾಯಿದೆ ಸೆಕ್ಷನ್‌ 67 (ಬಿ) (ಬಿ)ಯನ್ನು ಪರಿಶೀಲಿಸದೆ ಈ ಆದೇಶ ನೀಡಿತ್ತು. ಹಾಗಾಗಿ, ಹಿಂದಿನ ಆದೇಶ ವಾಪಸ್‌ ಪಡೆದು ಹೊಸ ಅದೇಶ ಹೊರಡಿಸಿರುವುದಲ್ಲದೆ, ಅರ್ಜಿದಾರರ ವಿರುದ್ಧ ತನಿಖೆ ಮುಂದುವರಿಸಲು ಸೂಚಿಸಿದೆ.

ನ್ಯಾಯಾಲಯ “ನ್ಯಾಯಮೂರ್ತಿಗಳು ಕೂಡ ಮನುಷ್ಯರೇ. ಹೀಗಾಗಿ, ಸಹಜವಾಗಿ ಕೆಲವೊಮ್ಮೆ ತಪ್ಪುಗಳಾಗುತ್ತವೆ. ತಪ್ಪು ಮಾಡದಿರುವುದು ಮಾನವೀಯತೆಗೆ ತಿಳಿದಿಲ್ಲ. ನ್ಯಾಯಮೂರ್ತಿಗಳೂ ಸಹ ದೋಷರಹಿತರಲ್ಲ. ದೋಷವು ನಾವು ನಿರ್ವಹಿಸುವ ಕಾರ್ಯಗಳಿಗೆ ಹೋಲುತ್ತದೆ.

ಆದ್ದರಿಂದ ಈ ನ್ಯಾಯಾಲಯ ನೀಡಿದ ಆದೇಶದಲ್ಲಿ ತಪ್ಪಾಗಿದೆ ಎಂಬುದನ್ನು ತಿಳಿದ ನಂತರ ಆ ತಪ್ಪನ್ನು ಮುಂದುವರಿಸುವುದು ನಾಯಕತ್ವವಲ್ಲ” ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಆದೇಶದಲ್ಲಿ ಹೇಳಿದೆ. ಅಲ್ಲದೆ, ಪ್ರಕರಣ ರದ್ದುಗೊಳಿಸಿದ್ದ ಹಿಂದಿನ ಆದೇಶ ಮಾರ್ಪಾಡು ಮಾಡಿ ಪ್ರಕರಣದಲ್ಲಿ ತನಿಖೆಯನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಿದೆ.
ಕಾಯಿದೆಯ 67 (b) ವಿಭಾಗವು ಪಠ್ಯ ಅಥವಾ ಡಿಜಿಟಲ್ ಚಿತ್ರಗಳನ್ನು ರಚಿಸುವುದು, ಸಂಗ್ರಹಿಸುವುದು, ಹುಡುಕುವುದು, ಬ್ರೌಸ್ ಮಾಡುವುದು, ಡೌನ್‌ಲೋಡ್ ಮಾಡುವುದು, ಜಾಹೀರಾತು ಮಾಡುವುದು, ಪ್ರಚಾರ ಮಾಡುವುದು, ವಿನಿಮಯ ಮಾಡುವುದು ಅಥವಾ ಮಕ್ಕಳನ್ನು ಅಶ್ಲೀಲ ಅಥವಾ ಅಸಭ್ಯ ಅಥವಾ ಲೈಂಗಿಕವಾಗಿ ಅಶ್ಲೀಲ ರೀತಿಯಲ್ಲಿ ಚಿತ್ರಿಸುವುದು ಸೆಕ್ಷನ್ 67 (b) ಅಡಿಯಲ್ಲಿ ವಿಚಾರಣೆಗೆ ಮುಕ್ತವಾಗಿರುತ್ತದೆ ಎಂದು ಹೇಳಲಾಗಿದೆ.

ಅರ್ಜಿದಾರರ ಪರ ವಕೀಲರು, ಒಮ್ಮೆ ಆದೇಶವನ್ನು ಹೊರಡಿಸಿದ ನಂತರ ನ್ಯಾಯಾಲಯ ಆ ಆದೇಶವನ್ನು ವಾಪಸ್‌ ಪಡೆಯಲು ಸಾಧ್ಯವಿಲ್ಲ. ಸಿಆರ್‌ಪಿಸಿ ಸೆಕ್ಷನ್‌ 362ರಡಿ ಆದೇಶ ಮರುಪರಿಶೀಲನೆಗೆ ನಿರ್ಬಂಧವಿದೆ ಎಂದು ಆಕ್ಷೇಪ ಎತ್ತಿದ್ದರು. ಆದರೆ ಅದನ್ನು ನ್ಯಾಯಾಲಯ ತಳ್ಳಿ ಹಾಕಿ ನ್ಯಾಯಾಲಯಕ್ಕೆ ತನ್ನದೇ ಆದೇಶವನ್ನು ಮಾರ್ಪಾಡು ಮಾಡುವ ಅಧಿಕಾರವಿದೆ ಎಂದು ಪರಿಷ್ಕೃತ ಆದೇಶವನ್ನು ಹೊರಡಿಸಿ ನ್ಯಾಯಮೂರ್ತಿಗಳು ತಮ್ಮಿಂದ ತಪ್ಪಾಗಿದೆ, ಅದನ್ನು ತಿದ್ದಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಏನಿದು ಪ್ರಕರಣ….? ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಎನ್‌. ಇನಾಯತ್‌ವುಲ್ಲಾ ಎಂಬುವವರು 2022ರ ಮಾರ್ಚ್ 23ರಂದು ಆನ್ ಲೈನ್ ನಲ್ಲಿ ಮಕ್ಕಳ ಅಶ್ಲೀಲ ದೃಶ್ಯಗಳನ್ನು ನೋಡುತ್ತಿದ್ದರು ಎನ್ನಲಾಗಿತ್ತು.

ಘಟನೆ ನಡೆದ ಎರಡು ತಿಂಗಳ ಬಳಿಕ ಅಂದರೆ 2023ರ ಮೇ 3ರಂದು ಸೆನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದು ಐಟಿ ಕಾಯಿದೆ 67ರ ಸೆಕ್ಷನ್‌ ‘ಬಿ’ ಪ್ರಕಾರ ಅಪರಾಧವೆಂದು ಆರೋಪ ಕೇಳಿ ಬಂದಿತ್ತು. ಈ ಮಧ್ಯೆ ಅರ್ಜಿದಾರರು ಪ್ರಕರಣ ರದ್ದು ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದರು.

ಆರೋಪಿ ಇನಾಯತ್‌ವುಲ್ಲಾ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, “ಅರ್ಜಿದಾರರ ವಿರುದ್ಧ ಆನ್‌ಲೈನ್‌ನಲ್ಲಿ ಮಕ್ಕಳ ಅಶ್ಲೀಲ ದೃಶ್ಯಗಳನ್ನು ನೋಡುತ್ತಿದ್ದರೆಂಬ ಆರೋಪವಿದೆ. ಅದು ಅಶ್ಲೀಲ ದೃಶ್ಯಗಳನ್ನು ಪ್ರಸಾರ ಮಾಡುವುದು ಅಥವಾ ಬೇರೆಯವರಿಗೆ ಕಳುಹಿಸಿದಂತಾಗುವುದಿಲ್ಲ. ಹಾಗಾಗಿ, ಅದು ಐಟಿ ಕಾಯಿದೆ ಸೆಕ್ಷನ್‌ 67ರ ‘ಬಿ’ ವ್ಯಾಪ್ತಿಗೆ ಒಳಪಡುವುದಿಲ್ಲ, ಅಪರಾಧವೂ ಆಗುವುದಿಲ್ಲ” ಎಂದು ಆದೇಶಿಸಿತ್ತು. ಅಲ್ಲದೆ, ಇನಾಯತ್‌ವುಲ್ಲಾ ವಿರುದ್ಧದ ಪ್ರಕರಣವನ್ನು ರದ್ದು ಮಾಡಿತ್ತು.

“ಅರ್ಜಿದಾರರು ಬಹುಶಃ ಅಶ್ಲೀಲ ದೃಶ್ಯಗಳನ್ನು ನೋಡುವ ಚಟಕ್ಕೆ ದಾಸರಾಗಿರಬಹುದು. ಹಾಗಾಗಿ, ಅವರು ಅದನ್ನು ನೋಡಿದ್ದಾರೆನಿಸುತ್ತದೆ. ಅದು ಬಿಟ್ಟರೆ ಅವರ ವಿರುದ್ಧ ಬೇರೆ ಆರೋಪಗಳು ಇಲ್ಲ. ಅದಕ್ಕೆ ಸಾಕ್ಷ್ಯವೂ ಇಲ್ಲ. ಹಾಗಾಗಿ, ಅವರ ವಿರುದ್ಧದ ಕ್ರಿಮಿನಲ್‌ ಪ್ರಕರಣ ಮುಂದುವರಿಸಲಾಗದು. ಒಂದು ವೇಳೆ ಮುಂದುವರಿಸಿದರೆ ಅದು ಕಾನೂನಿನ ದುರ್ಬಳಕೆಯಾಗಲಿದೆ” ಎಂದು ನ್ಯಾಯಾಲಯ ಅರ್ಜಿ ಮಾನ್ಯ ಮಾಡಲಾಗಿತ್ತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.