ಮಾನ್ಯತೆ ಇಲ್ಲದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ: ಮೆಡಿಕಲ್ ಬಿಲ್ ಮರುಪಾವತಿಗೆ ಸರ್ಕಾರಿ ನೌಕರರು ಅರ್ಹರೆ..?
ಬೆಂಗಳೂರು: ಸರ್ಕಾರದ ಮಾನ್ಯತೆ ಇಲ್ಲದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೇ ಮೆಡಿಕಲ್ ಬಿಲ್ ಮರುಪಾವತಿಗೆ ಸರ್ಕಾರಿ ನೌಕರರು ಅರ್ಹರಾಗಿರುತ್ತಾರೆಯೇ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ರಾಜ್ಯದ ಸರಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ತುರ್ತು ಸಂದರ್ಭಗಳಲ್ಲಿ ಸರಕಾರದಿಂದ ಮಾನ್ಯತೆ ಹೊಂದಿರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೇ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮರುಪಾವತಿಗೆ ಅರ್ಹರಾಗಿರುತ್ತಾರೆ ಎಂದು ಹೈಕೋರ್ಟ್ ನ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಆದೇಶ ಹೊರಡಿಸಿದೆ.
ಪ್ರಕರಣದ ವಿವರ…
ಕರ್ನಾಟಕ ಹೈಕೋರ್ಟ್ ನಲ್ಲಿ ಸಹಾಯಕ ನ್ಯಾಯಾಲಯ ಅಧಿಕಾರಿಯಾಗಿರುವ ನಾಗಭೂಷಣ ಬಿ. ಎಂಬವರು ಪಲ್ಮನರಿ ಹೈಪರ್ ಟೆನ್ಷನ್ ಕಾಯಿದೆಯಿಂದ ಬಳಲುತ್ತಿದ್ದರು. ಈ ನಡುವೆ ಚಿಕಿತ್ಸೆಗಾಗಿ ಬೆಂಗಳೂರು ಮಲ್ಲೇಶ್ವರಂನ ಕೆ.ಸಿ.ಜನರಲ್ ಹಾಸ್ಪಿಟಲ್ ಆವರಣದಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾದರು. ನಂತರ ಆಸ್ಪತ್ರೆಯ ವೈದ್ಯಾಧಿಕಾರಿಗಳ ಶಿಫಾರಸ್ಸಿನ ಮೇರೆಗೆ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯುವ ಸಲುವಾಗಿ ಮಾನ್ಯತೆ ಪಡೆಯದ ಖಾಸಗಿ ಆಸ್ಪತ್ರೆ ಮಜುಂದಾರ್ ಮೆಡಿಕಲ್ ಸೆಂಟರ್ ನಲ್ಲಿ ದಾಖಲಾಗಿ ವೈದ್ಯಕೀಯ ಚಿಕಿತ್ಸೆ ಪಡೆದರು.
ಇದಾದ ಬಳಿಕ ವೈದ್ಯಕೀಯ ಚಿಕಿತ್ಸಾ ವೆಚ್ಚ ರೂಪಾಯಿ 2,63,764 ನ್ನು ಮರುಪಾವತಿಸುವಂತೆ ಕೋರಿ ನಾಗಭೂಷಣ ಬಿ. ಅವರು ಕರ್ನಾಟಕ ಹೈಕೋರ್ಟಿನ ರಿಜಿಸ್ಟ್ರಾರ್ ಜನರಲ್ ಅವರಿಗೆ ಮನವಿ ಸಲ್ಲಿಸಿದರು. ಮನವಿಯ ಜೊತೆಗೆ ವೈದ್ಯಕೀಯ ಬಿಲ್ಲುಗಳು, ವೈದ್ಯರ ಚಿಕಿತ್ಸಾ ವರದಿ, ಆಸ್ಪತ್ರೆಯಿಂದ ದಿನಾಂಕ 23.12.2022 ರಂದು ಬಿಡುಗಡೆಯಾದ ವರದಿಯನ್ನು ಸಲ್ಲಿಸಿದರು.
ಅರ್ಜಿದಾರರ ಮನವಿಯನ್ನು ಪರಿಶೀಲಿಸಿದ ಹೈಕೋರ್ಟ್ ನ ರಿಜಿಸ್ಟ್ರಾರ್ ಜನರಲ್ ಅವರು ಸರಕಾರಿ ಆದೇಶ ಸಂಖ್ಯೆ ಸಿಆಸುಇ 31 ಎಸ್ ಎಂಆರ್ 2014 ದಿನಾಂಕ 5.11.2014 ರ ಶರ್ತಗಳನ್ನು ಅರ್ಜಿದಾರರು ಪಾಲಿಸಿದ್ದಾರೆ ಎಂಬ ನಿಷ್ಕರ್ಷೆಗೆ ಬಂದು ಪ್ರಸ್ತಾವನೆಯನ್ನು ಕಾರ್ಯನಿರ್ವಾಹಕ ನಿರ್ದೇಶಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಆರೋಗ್ಯ ಸೌಧ ಮಾಗಡಿ ರಸ್ತೆ ಬೆಂಗಳೂರು ಇಲ್ಲಿಗೆ ಕಳುಹಿಸಿದರು.
ಆದರೆ ಅರ್ಜಿದಾರರ ವೈದ್ಯಕೀಯ ಕ್ಲೈಮ್ ಸರಕಾರದ ಆದೇಶ ಸಂಖ್ಯೆ ಸಿಆಸುಇ 31 ಎಸ್.ಎಂ.ಆರ್ 2024 ದಿನಾಂಕ 5.11.2014 ರಲ್ಲಿ ತಿಳಿಸಿದಂತೆ ತುರ್ತು ಸಂದರ್ಭದ ಪ್ರಕರಣಗಳ ವ್ಯಾಪ್ತಿಗೆ ಒಳಪಟ್ಟಿಲ್ಲವೆಂಬ ಹಿಂಬರಹ ನೀಡಿ ಕ್ಷೇಮನ್ನು ರಿಜಿಸ್ಟ್ರಾರ್ ಜನರಲ್ ಅವರಿಗೆ ಮರಳಿಸಲಾಯಿತು.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೀಡಿದ ಹಿಂಬರಹದಿಂದ ಬಾಧಿತರಾದ ನಾಗಭೂಷಣ್ ಬಿ ಅವರು ಹೈಕೋರ್ಟ್ ಮೆಟ್ಟಿಲೇರಿ ರಿಟ್ ಅರ್ಜಿ ಸಲ್ಲಿಸಿದರು. ತನ್ನ ನ್ಯಾಯ ಸಮ್ಮತ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮರುಪಾವತಿ ಬಿಲ್ಲನ್ನು ಪರಿಗಣಿಸುವಂತೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಹೈಕೋರ್ಟ್ ಗೆ ಮನವಿ ಮಾಡಿದರು.
ಕರ್ನಾಟಕ ಸರಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ಅನ್ವಯ ರಾಜ್ಯದ ಸರಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಸರಕಾರಿ ಆಸ್ಪತ್ರೆಗಳಲ್ಲಿ ಹಾಗೂ ಸರಕಾರದಿಂದ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯ ಚಿಕಿತ್ಸೆಯ ಮರುಪಾವತಿ ವೆಚ್ಚವನ್ನು ಸಕ್ರಮ ಮಂಜೂರಾತಿ ಪ್ರಾಧಿಕಾರಗಳು ಸಿ.ಜಿ.ಹೆಚ್.ಎಸ್. ದರಪಟ್ಟಿ ಅನುಸಾರ ಮಂಜೂರು ಮಾಡಲು ಅಧಿಕಾರ ಹೊಂದಿರುತ್ತಾರೆ.
ಸರ್ಕಾರದ ಆದೇಶಗಳನ್ನು ಪರಿಶೀಲಿಸಿದ ನ್ಯಾಯಪೀಠವು ದಿನಾಂಕ 5.11.2014ರ ಸರಕಾರಿ ಆದೇಶದ ಕಂಡಿಕೆ 5 ರಲ್ಲಿ ತಿಳಿಸಿದ ಅಂಶವನ್ನು ಉಲ್ಲೇಖಿಸಿತು. ಸರಕಾರಿ ನೌಕರನಿಗೆ ತಜ್ಞ ವೈದ್ಯರ ಚಿಕಿತ್ಸೆಯ ಅವಶ್ಯಕತೆ ಇದ್ದು ಸದರಿ ಚಿಕಿತ್ಸೆ ಸರಕಾರಿ ಆಸ್ಪತ್ರೆಯಲ್ಲಿ ಲಭ್ಯ ಇಲ್ಲದೆ ಇದ್ದಲ್ಲಿ ಮಾನ್ಯತೆ ಪಡೆಯದ ಖಾಸಗಿ ಆಸ್ಪತ್ರೆಯಲ್ಲಿ ಸರಕಾರಿ ನೌಕರನು ಚಿಕಿತ್ಸೆ ಪಡೆಯಬಹುದು. ಅಂಥ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಪಡೆದ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮರುಪಾವತಿಗೆ ಸರಕಾರಿ ನೌಕರರು ಅರ್ಹರಾಗಿರುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು. ದಿನಾಂಕ 23.1.2023 ರಂದು ಮೂರನೇ ಪ್ರತ್ಯೇರ್ಜಿದಾರರಾದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೀಡಿದ ಹಿಂಬರಹವನ್ನು ರದ್ದುಪಡಿಸಿತು.
ವೈದ್ಯಕೀಯ ಚಿಕಿತ್ಸಾ ವೆಚ್ಚದ ಮರುಪಾವತಿ ಕ್ಲೈಮ್ ಅನ್ನು ಸಂಪೂರ್ಣ ದಾಖಲಾತಿಗಳೊಂದಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಸಿಗೆ ಸಲ್ಲಿಸುವಂತೆ ರಿಟ್ ಅರ್ಜಿದಾರರಿಗೆ ನ್ಯಾಯಪೀಠ ನಿರ್ದೇಶಿಸಿತು. ಅರ್ಜಿದಾರರು ಎಲ್ಲಾ ಅವಶ್ಯಕ ದಾಖಲೆಗಳೊಂದಿಗೆ ವೈದ್ಯಕೀಯ ಚಿಕಿತ್ಸಾ ಮರುಪಾವತಿ ವೆಚ್ಚದ ಕ್ಲೈಮ್ ಅನ್ನು ಸಲ್ಲಿಸಿದ ದಿನಾಂಕದಿಂದ ಎರಡು ತಿಂಗಳೊಳಗೆ ಸಿ.ಜಿ.ಹೆಚ್.ಎಸ್. ದರಪಟ್ಟಿ ಪ್ರಕಾರ ವೈದ್ಯಕೀಯ ಕ್ರಮನ್ನು ಪರಿಗಣಿಸಿ ನಿಯಮಾನುಸಾರ ಇತ್ಯರ್ಥ ಪಡಿಸುವಂತೆ ಮೂರನೇ ಪ್ರತ್ಯೇರ್ಜಿದಾರರಾದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಗೆ ಸೂಚನೆ ನೀಡಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ