08/01/2025

Law Guide Kannada

Online Guide

ಬಸ್ ನಲ್ಲಿ ತಿಗಣೆ ಕಾಟ: ಗ್ರಾಹಕರ ಕೋರ್ಟ್ ಮೆಟ್ಟಿಲೇರಿದ ಚಿತ್ರನಟನ ಪತ್ನಿಗೆ ಸಿಕ್ತು 1 ಲಕ್ಷ ರೂ. ಪರಿಹಾರ

ಬೆಂಗಳೂರು: ತೂಕದಲ್ಲಿ ಅಥವಾ ವಸ್ತುಗಳ ಬೆಲೆಯಲ್ಲಿ ವ್ಯತ್ಯಾಸವಾದರೇ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿ ಅದಕ್ಕೆ ತಕ್ಕ ಪರಿಹಾರವನ್ನು ಪಡೆದ ಹಲವು ಉದಾಹರಣೆಗಳನ್ನ ನೋಡಿದ್ದೇವೆ. ಅಂತೆಯೇ ಚಿತ್ರ ನಟರೊಬ್ಬರ ಪತ್ನಿ ಬಸ್ ನಲ್ಲಿ ಸಂಚರಿಸುವಾಗ ತಿಗಣೆ ಕಾಟ ಇದ್ದ ಹಿನ್ನೆಲೆಯಲ್ಲಿ ಅವರು ಗ್ರಾಹಕರ ಆಯೋಗದ ಮೆಟ್ಟಿಲೇರಿ ಖಾಸಗಿ ಕಂಪನಿಯಿಂದ 1ಲಕ್ಷ ರೂ. ಪರಿಹಾರ ಪಡೆದಿದ್ದಾರೆ.

ಹೌದು, ಚಿತ್ರನಟ ಹಾಗೂ ಕನ್ನಡ ಸೀರಿಯಲ್ ಕಲಾವಿದ ಶೋಭರಾಜ್ ಅವರ ಪತ್ನಿ ದೀಪಿಕ ಸುವರ್ಣ ಅವರು ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ತಿಗಣೆ ಕಾಟದಿಂದಾಗಿ ಅನಾರೋಗ್ಯಕೀಡಾದ ಹಿನ್ನೆಲೆಯಲ್ಲಿ 1 ಲಕ್ಷ ಪರಿಹಾರ ನೀಡುವಂತೆ ಖಾಸಗಿ ಕಂಪನಿಗೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯ ಆಯೋಗ ಆದೇಶಿಸಿದೆ.

ಪ್ರಕರಣದ ವಿವರ…
ದೀಪಿಕ ಸುವರ್ಣ ಅವರು 2022ರ ಆಗಸ್ಟ್ 16ರಂದು ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸಲು ‘ಸೀ ಬರ್ಡ್’ ಕಂಪನಿಯ ಸ್ವೀಪರ್ ಬಸ್ಸಿನಲ್ಲಿ ಟಿಕೆಟ್ ಬುಕ್ ಮಾಡಿದ್ದರು. ರೆಡ್ ಬಸ್ ಆನ್ಸೆನ್ ಆಪ್ ನಲ್ಲಿ ಬಸ್ ಟಿಕೆಟ್ ಬುಕ್ ಮಾಡಿದ್ದಾಗಲೇ ಬಸ್ ಸುವ್ಯವಸ್ಥಿತವಾಗಿ ಇದೆಯೇ ಎಂದು ವಿಚಾರಿಸಿ ಕೇಳಿ ತಿಳಿದುಕೊಂಡಿದ್ದರು. ‘ಸೀ ಬರ್ಡ್’ ಬಸ್ಸಿನಲ್ಲಿ ಉತ್ತಮ ಸೌಲಭ್ಯ ಇದೆ ಎಂದು ರೆಡ್ ಬಸ್ ಸಿಬ್ಬಂದಿ ತಿಳಿಸಿದರು. ಆದರೆ, ಬಸ್ ನಲ್ಲಿ ಪ್ರಯಾಣ ಆರಂಭಿಸಿದ ಕೆಲ ಹೊತ್ತಿನಲ್ಲೇ ತಿಗಣೆ ಕಾಟ ಶುರುವಾಗಿದೆ. ತಿಗಣೆ ಕಾಟ ತಾಳಲಾರದೆ ದೀಪಿಕ ಸುವರ್ಣ ಅವರು ಬಸ್ ಸಿಬ್ಬಂದಿಗೂ ಮಾಹಿತಿ ನೀಡಿದ್ದರು. ಆದರೆ ಬಸ್ ಸಿಬ್ಬಂದಿ ದೀಪಿಕಾ ಅವರ ಮಾತಿಗೆ ಯಾವುದೇ ಬೆಲೆ ಕೊಟ್ಟಿರಲಿಲ್ಲ.

ಮರುದಿನ ಬೆಂಗಳೂರು ತಲುಪಿದಾಗ ದೀಪಿಕಾ ಅವರ ಕುತ್ತಿಗೆ, ಬೆನ್ನು ಸೇರಿದಂತೆ ದೇಹದ ಎಲ್ಲೆಡೆ ನೋವು ಕಾಣಿಸಿಕೊಂಡು ಅವರು ಅನಾರೋಗ್ಯಕ್ಕೀಡಾದರು. ನಂತರ ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತಾಗಿತ್ತು. ದೈಹಿಕ ನೋವಿನಿಂದಾಗಿ 15 ದಿನಗಳ ಕಾಲ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದರು. ಈ ಸಂದರ್ಭದಲ್ಲಿ ಶೋಭರಾಜ್ ಮತ್ತು ದೀಪಿಕ ಸುವರ್ಣ ಜೊತೆಯಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುತ್ತಿದ್ದ ರಾಜರಾಣಿ ರಿಯಾಲಿಟಿ ಶೋ ನಲ್ಲಿ ಪಾಲ್ಗೊಳ್ಳುತ್ತಿದ್ದರು. ಮರುದಿನ ಶೂಟಿಂಗ್ ಇದ್ದುದರಿಂದ ತುರ್ತಾಗಿ ಮಂಗಳೂರಿನಿಂದ ದೀಪಿಕಾ ತೆರಳಿದ್ದರು.

ಆದರೆ. ಬಸ್ ನಲ್ಲಿ ಉಂಟಾದ ತಿಗಣೆ ಕಾಟದ ಪರಿಣಾಮ ಅನಾರೋಗ್ಯದಿಂದಾಗಿ ದೀಪಿಕ ಎರಡು ವಾರಗಳ ಕಾಲ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ದಂಪತಿಗೆ ಆರ್ಥಿಕ ನಷ್ಟವಾಗಿತ್ತು.ರಿಯಾಲಿಟಿ ಶೋನಲ್ಲಿ ಭಾಗವಹಿಸದೆ ಇದ್ದ ಕಾರಣ ಶೋಭರಾಜ್ ಮತ್ತು ದೀಪಿಕಾ ಅವರ ತಂಡ ಇಡೀ ಕಾರ್ಯಕ್ರಮದಿಂದ ಎಲಿಮಿನೇಟ್ ಆಯಿತು. ಹೀಗಾಗಿ ಅವರಿಗೆ ಬರಬಹುದಾಗಿದ್ದ ಆದಾಯಕ್ಕೆ ಕತ್ತರಿ ಬಿತ್ತು. ಶೋಭರಾಜ್ ಮತ್ತು ದೀಪಿಕಾ ದಂಪತಿಗೆ ಒಂದು ಶೋ ಕಾರ್ಯಕ್ರಮಕ್ಕೆ ಕಲರ್ಸ್ ವಾಹಿನಿಯಿಂದ 40,000 ಸಂಭಾವನೆ ಸಿಗುತ್ತಿತ್ತು.

ತಿಗಣೆ ಕಾಟದ ಬಸ್ ಅವ್ಯವಸ್ಥೆಯಿಂದಾಗಿ ಬೇಸತ್ತ ದೀಪಿಕಾ ಸುವರ್ಣ ಮಂಗಳೂರಿನ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಬಸ್ ಕಂಪನಿ ಮತ್ತು ಬಸ್ ಟಿಕೆಟ್ ಬುಕ್ ಮಾಡಿದ್ದ ರೆಡ್ ಬಸ್ ವಿರುದ್ಧ ಅವರು ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ತನಗಾದ ಆಸ್ಪತ್ರೆಯ ವೆಚ್ಚ 18,650ಗಳನ್ನು ವರ್ಷಕ್ಕೆ ಶೇಕಡ 15ರ ಬಡ್ಡಿ ಸಹಿತ ನೀಡಬೇಕು. ಅಲ್ಲದೆ ತನಗಾದ ಮಾನಸಿಕ ಕಿರುಕುಳಕ್ಕೆ ಪ್ರತಿಯಾಗಿ 25 ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕು ಎಂದು ಕೇಳಿಕೊಂಡಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕ ವ್ಯಾಜ್ಯಗಳ ಆಯೋಗದ ಅಧ್ಯಕ್ಷ ಸೋಮಶೇಖರಪ್ಪ ಹಂಡಿಗೋಲ್ ಮತ್ತು ಮಹಿಳಾ ಸದಸ್ಯ ಶಾರದಮ್ಮ ಎಚ್ ಜಿ ಅವರು, ಆಸ್ಪತ್ರೆಗೆ ತಗುಲಿದ 18,650/-ಗಳನ್ನು ಅರ್ಜಿ ದಾಖಲಿಸಿದ 6-4-2023ರಿಂದ ಅನ್ವಯವಾಗುವಂತೆ ವರ್ಷಕ್ಕೆ ಆರು ಶೇಕಡ ಬಡ್ಡಿ ಸಹಿತ ಪಾವತಿ ಮಾಡಬೇಕು. ಅಲ್ಲದೆ ಬಸ್ ಟಿಕೆಟ್ ದುಡ್ಡು 840/-ಗಳನ್ನು ವಾರ್ಷಿಕ ಶೇಕಡ ಆರರ ಬಡ್ಡಿ ಸಹಿತ ಅರ್ಜಿದಾರರಿಗೆ ಪಾವತಿಸಬೇಕು.ದೂರುದಾರಿಗೆ ಆಗಿರುವ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಒಂದು ಲಕ್ಷ ರೂಪಾಯಿಗಳ ಪರಿಹಾರವನ್ನು ವಾರ್ಷಿಕ ಶೇಕಡಾ ಕರ ಬಡ್ಡಿ ದರದೊಂದಿಗೆ ನೀಡಬೇಕು ಎಂದು ಆದೇಶ ನೀಡಿದೆ. ಅರ್ಜಿದಾರರಿಗೆ ದಾವೆ ಖರ್ಚು ಆಗಿ ಹತ್ತು ಸಾವಿರ ರೂಪಾಯಿಗಳ ಪರಿಹಾರ ನೀಡಲು ಘೋಷಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.