‘ಇದು ಕಾಫಿ ಶಾಪ್ ಅಲ್ಲ ಕೋರ್ಟ್ ಕೊಠಡಿ’: ‘Yeah’ ಪದ ಬಳಸಿದ ವಕೀಲರಿಗೆ ಸಿಜೆಐ ಚಂದ್ರಚೂಡ್ ಚಾಟಿ
ನವದೆಹಲಿ: ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನು ಪ್ರತಿವಾದಿಯನ್ನಾಗಿ ಮಾಡಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ‘ಹೌದು’ ಎನ್ನುವ ಬದಲು’ಯೆಹ್’ (Yeah) ಎಂಬ ಪದ ಬಳಸಿದ ವಕೀಲರೊಬ್ಬರಿಗೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಛೀಮಾರಿ ಹಾಕಿದ್ದಾರೆ.
ಸುಪ್ರೀಂಕೋರ್ಟ್ ಸಿಜೆಐ ಚಂದ್ರಚೂಡ್ ನೇತೃತ್ವದ ನ್ಯಾಯಪೀಠಕ್ಕೆ ವಿವರಣೆ ನೀಡುವಾಗ ವಕೀಲರೊಬ್ಬರು ‘ಹೌದು’ ಎನ್ನಲು ಅನೌಪಚಾರಿಕವಾದ ‘ಯೆಹ್’ (Yeah) ಪದ ಬಳಸಿದ್ದಾರೆ. ಈ ವೇಳೆ ಗರಂ ಆದ ಸಿಜೆಐ ಚಂದ್ರಚೂಡ್ ಅವರು, ‘ಇದು ಕಾಫಿ ಶಾಪ್ ಅಲ್ಲ ಕೋರ್ಟ್ ಕೊಠಡಿ ಎನ್ನುವುದನ್ನು ಗಮನದಲ್ಲಿಡಿ’ ಈ ರೀತಿಯ ಹಾವಭಾವಗಳೆಂದರೆ ತಮಗೆ ಅಲರ್ಜಿ ಚಾಟಿ ಬೀಸಿದರು.
ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನು ಪ್ರತಿವಾದಿಯನ್ನಾಗಿ ಸೇರಿಸಿದ್ದ 2018ರ ಅರ್ಜಿಯೊಂದರ ವಿಚಾರಣೆ ನಡೆಯಿತು. ವಕೀಲರು ನ್ಯಾಯಪೀಠದ ಮುಂದೆ ಈ ಅರ್ಜಿ ಪ್ರಸ್ತಾಪಿಸಿದ್ದರು. “ಆದರೆ ಇದು 32ನೇ ವಿಧಿಯ ಅರ್ಜಿಯೇ? ನ್ಯಾಯಾಧೀಶರನ್ನು ಪ್ರತಿವಾದಿಯನ್ನಾಗಿಸಿ ನೀವು ಹೇಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತೀರಿ?” ಎಂದು ಸಿಜೆಐ ಚಂದ್ರಚೂಡ್ ಪ್ರಶ್ನಿಸಿದ್ದರು. ತಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ನಾಗರಿಕರು ಸಂವಿಧಾನಾತ್ಮಕ ಪರಿಹಾರ ಕೋರುವ ಹಕ್ಕಿನ ಕುರಿತು 32ನೇ ವಿಧಿಯು ಸಾಂವಿಧಾನಿಕ ಖಾತರಿಯನ್ನು ನೀಡಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ವಕೀಲರು, ‘”ಹೌದು, ಹೌದು (ಯಾ, ಯಾ) ಆಗಿನ ಸಿಜೆಯ ರಂಜನ್ ಗೊಗೊಯ್… ನನಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು…” ಎಂದು ಹೇಳಿದರು. ಆದರೆ ವಕೀಲರ ಯಾ, ಯಾ ಎಂಬ ಪದ ಬಳಕೆಗೆ ಗರಂ ಆದ ಸಿಜೆಐ ಡಿವೈ ಚಂದ್ರಚೂಡ್ ಅವರು, “ಇದು ಕಾಫಿ ಶಾಪ್ ಅಲ್ಲ. ಕೋರ್ಟ್ ಕೊಠಡಿ. ಏನಿದು ಯಾ ಯಾ? ಈ ಯಾ ಯಾ ಎಂದರೆ ನನಗೆ ಅಲರ್ಜಿ. ಇದಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ” ಎಂದು ಖಾರವಾಗಿ ನುಡಿದರು.
“ನ್ಯಾ ಗೊಗೊಯ್ ಅವರು ಈ ನ್ಯಾಯಾಲಯದ ಮಾಜಿ ನ್ಯಾಯಾಧೀಶರು. ನೀವು ನ್ಯಾಯಾಧೀಶರೊಬ್ಬರ ವಿರುದ್ಧ ಹೀಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಮತ್ತು ಆಂತರಿಕ ತನಿಖೆಗೆ ಕೋರುವಂತೆ ಇಲ್ಲ. ಏಕೆಂದರೆ ನೀವು ಪೀಠದ ಮುಂದೆ ವಾದ ಮಂಡಿಸಲು ವಿಫಲರಾಗಿದ್ದೀರಿ” ಎಂದು ಸಿಜೆಐ ಚಂದ್ರಚೂಡ್ ಹೇಳಿದರು.
ಈ ವೇಳೆ ಪ್ರತಿಕ್ರಿಯಿಸಿದ ವಕೀಲ, ನಾನು ಕಾನೂನುಬಾಹಿರವಾಗಿ ನಡೆದುಕೊಂಡಿರುವ ಆರೋಪದ ಕುರಿತಾದ ಹೇಳಿಕೆ ಆಧಾರದಲ್ಲಿ ನನ್ನ ಅರ್ಜಿಯನ್ನು ನ್ಯಾ ರಂಜನ್ ಗೊಗೊಯ್ ಅವರು ವಜಾಗೊಳಿಸಿದ್ದರು. ನಾನು ಯಾವ ತಪ್ಪೂ ಮಾಡಿರಲಿಲ್ಲ. ಕಾರ್ಮಿಕ ಕಾನೂನುಗಳ ಬಗ್ಗೆ ತಿಳಿವಳಿಕೆ ಇರುವ ಪೀಠದ ಮುಂದೆ ನನ್ನ ಪರಾಮರ್ಶನಾ ಅರ್ಜಿಯನ್ನು ವರ್ಗಾಯಿಸುವಂತೆ ಸಿಜೆಐ ಠಾಕೂರ್ ಅವರಿಗೆ ಮನವಿ ಮಾಡಿದ್ದೆನಷ್ಟೆ. ಆದರೆ ಅದು ಸಾಧ್ಯವಾಗಲಿಲ್ಲ. ಬದಲಾಗಿ ಅರ್ಜಿಯನ್ನು ವಜಾಗೊಳಿಸಲಾಯಿತು” ಎಂದು ತಿಳಿಸಿದರು.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿರುವ ಸಂದರ್ಭದಲ್ಲಿ ನ್ಯಾಯಾಧೀಶರನ್ನು ವಿರೋಧಿಸಲು ಸಾಧ್ಯವಿಲ್ಲ. ಈ ಅರ್ಜಿಯನ್ನು ರಿಜಿಸ್ಟ್ರಿ ಪರಿಶೀಲಿಸಲಿದೆ ಎಂದ ಸಿಜೆಐ ಡಿವೈ ಚಂದ್ರಚೂಡ್, ಮಾಜಿ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ಹೆಸರನ್ನು ಅರ್ಜಿಯಿಂದ ಅಳಿಸಿ ಹಾಕುವಂತೆ ವಕೀಲರಿಗೆ ಸೂಚಿಸಿದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ