23/12/2024

Law Guide Kannada

Online Guide

ಚಿನ್ನದ ಅಡಮಾನ ಸಾಲ ಸಂಪೂರ್ಣ ತೀರಿಸಿದರೂ ಗ್ರಾಹಕನಿಗೆ ಸಿಗದ ‘ಬಂಗಾರ’: ಕೋರ್ಟ್ ಮೆಟ್ಟಿಲೇರಿದ್ರೂ ಕೈಹಿಡಿಯದ ಆದೇಶ

ಉಡುಪಿ: ಗ್ರಾಹಕನು ಸ್ಥಿರಾಸ್ತಿ ಅಡಮಾನ ಸಾಲ ಪಡೆದು ಸುಸ್ತಿದಾರನಾದಾಗ ಅದೇ ಸಂಸ್ಥೆಯಲ್ಲಿ ಅಡಮಾನವಿರಿಸಿದ ಬಂಗಾರದ ಸಾಲ ಸಂದಾಯ ಮಾಡಿದರೂ, ಅಡವಿರಿಸಿದ ಚಿನ್ನ ವಾಪಸ್ ಪಡೆಯಲು ಅರ್ಹನಲ್ಲ ಎಂದು ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮಹತ್ತರ ತೀರ್ಪು ನೀಡಿದೆ.

ಈ ಮೂಲಕ ಚಿನ್ನದ ಅಡಮಾನ ಸಾಲವನ್ನು ಸಂಪೂರ್ಣ ಪಾವತಿ ಮಾಡಿದರೂ ಅಡವಿಟ್ಟ ಬಂಗಾರದ ಆಭರಣವನ್ನು ವಾಪಸ್ ಕೊಡಲ್ಲ ಎಂದ ಸಹಕಾರಿ ಸಂಘದ ವಿರುದ್ಧ ನ್ಯಾಯಾಲಯದ ಕದ ತಟ್ಟಿದ್ದ ಗ್ರಾಹಕನಿಗೆ ಹಿನ್ನಡೆಯಾಗಿದೆ.

ಈ ಬಗ್ಗೆ ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಅದೇ ಸಂಸ್ಥೆಯಲ್ಲಿ ಸುಸ್ತಿಯಾಗಿದ್ದ ಸ್ಥಿರಾಸ್ತಿ ಅಡಮಾನ ಸಾಲ ಪಾವತಿಯಾಗದೆ ಅಡವಿಟ್ಟ ಚಿನ್ನ ಪಡೆಯಲು ಗ್ರಾಹಕ ಅರ್ಹನಲ್ಲ ಎಂದು ತೀರ್ಪು ನೀಡಿದೆ.

ಉಡುಪಿ ಜಿಲ್ಲೆಯ ಗುರು ಮಾಚಿದೇವ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಅದರ ಗ್ರಾಹಕರೊಬ್ಬರು 2018ರಲ್ಲಿ ತಮ್ಮ ಬಂಗಾರದ ಒಡವೆಗಳನ್ನು ಅಡವಿಟ್ಟು 16 ಲಕ್ಷ ರೂ. ಸಾಲವನ್ನು ಪಡೆದುಕೊಂಡಿದ್ದರು. ಇದಕ್ಕೂ ಮುಂಚೆ ಅದೇ ಗ್ರಾಹಕರು 2015ರಲ್ಲಿ ತಮ್ಮ ಸ್ಥಿರಾಸ್ತಿಯನ್ನು ಒತ್ತೆ ಇಟ್ಟು 25 ಲಕ್ಷ ರೂ.ಗಳ ಅಡಮಾನ ಸಾಲ ಪಡೆದುಕೊಂಡಿದ್ದರು.

ಸ್ಥಿರಾಸ್ತಿಯ ಅಡಮಾನ ಸಾಲ ಸುಸ್ತಿಯಾಗಿದ್ದು, ಗುರು ಮಾಚಿದೇವ ವಿವಿಧೋದ್ದೇಶ ಸಹಕಾರಿ ಸಂಘ ಗ್ರಾಹಕರ ವಿರುದ್ಧ ಸಹಕಾರಿ ಸಂಘಗಳ ಉಪ ನಿಬಂಧಕರ ನ್ಯಾಯಾಲಯದಲ್ಲಿ ದಾವೆ ಹೂಡಿ ಡಿಕ್ರಿಯನ್ನೂ ಪಡೆದುಕೊಂಡಿದ್ದರು. ಇದಾದ ಬಳಿಕ, ಗ್ರಾಹಕರು ತಮ್ಮ ಅಡವಿಟ್ಟ ಚಿನ್ನವನ್ನು ಬಿಡಿಸಿಕೊಳ್ಳಲು ಸಹಕಾರಿ ಸಂಘಕ್ಕೆ ಆಗಮಿಸಿದ್ದರು. ಆ ಚಿನ್ನದ ಸಾಲವನ್ನು ಬಡ್ಡಿ ಸಹಿತ ಕಟ್ಟಿದ ಗ್ರಾಹಕರು, ತಾವು ಅಡವಿಟ್ಟ ಚಿನ್ನವನ್ನು ವಾಪಸ್‌ ಕೊಡುವಂತೆ ಕೋರಿಕೊಂಡರು. ಅದಕ್ಕೆ ನಿರಾಕರಿಸಿದ ಗುರು ಮಾಚಿದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧಿಕಾರಿಗಳು ಸುಸ್ತಿಯಾಗಿದ್ದ ಸ್ಥಿರಾಸ್ತಿ ಅಡಮಾನ ಸಾಲವನ್ನು ಪಾವತಿಸುವಂತೆ ಒತ್ತಾಯಿಸಿದರು.

ಇದರಿಂದ ನೊಂದ ಗ್ರಾಹಕರು ಉಡುಪಿ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಸಾಲ ಮರುಪಾವತಿ ಮಾಡಿದ ಕಾರಣ ತಾನು ಅಡವಿಟ್ಟ ಚಿನ್ನವನ್ನು ಮರಳಿ ನೀಡಲು ಆದೇಶಿಸಬೇಕು ಮತ್ತು ತಮಗೆ ಆಗಿರುವ ಮಾನಸಿಕ ವೇದನೆಗೆ ಮೂರು ಲಕ್ಷ ರೂ. ಪರಿಹಾರವನ್ನು 10 ಸಾವಿರ ರೂ.ಗಳ ನೋಟೀಸಿನ ಖರ್ಚಿನ ಜೊತೆಗೆ ಕೊಡಲು ಆದೇಶ ಮಾಡಬೇಕು ಎಂದು ಕೋರಿ ದೂರನ್ನು ದಾಖಲಿಸಿದರು.

ಫಿರ್ಯಾದಿ ಮತ್ತು ಸಹಕಾರಿ ಸಂಘದ ಪರ ವಕೀಲರ ವಾದ ಮತ್ತು ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ, ಗ್ರಾಹಕರ ನ್ಯಾಯಾಲಯವು ಭಾರತೀಯ ಕರಾರು ಕಾಯ್ದೆ (ಇಂಡಿಯನ್ ಕಾಂಟ್ರ್ಯಾಕ್ಟ್ ಆಕ್ಟ್)ನ ಸೆಕ್ಷನ್ 171 ಪ್ರಕಾರ ಸಹಕಾರಿ ಸಂಘದ ಅಧಿಕಾರವನ್ನು ಎತ್ತಿ ಹಿಡಿಯಿತು. ಚಿನ್ನದ ಸಾಲವನ್ನು ಗ್ರಾಹಕರು ಪಾವತಿಸಿದರೂ ಇತರ ಸಾಲದ ಮರುಪಾವತಿಯಾಗದೆ ಒತ್ತೆ ಇಟ್ಟಿದ್ದ ಚಿನ್ನವನ್ನು ವಾಪಸ್ ಕೊಡುವಂತೆ ಆದೇಶ ಹೊರಡಿಸಲಾಗದು ಎಂದು ಮಹತ್ವದ ತೀರ್ಪು ನೀಡಿತು.

ದೂರುದಾರರು ಅಡವಿರಿಸಿದ ಚಿನ್ನಾಭರಣವನ್ನು ಸಂಸ್ಥೆಯಿಂದ ಹಿಂದೆ ಪಡೆಯಲು ಅರ್ಹರಲ್ಲವೆಂದು ಆ ದೂರನ್ನು ವಜಾಗೊಳಿಸಿ ಗ್ರಾಹಕರ ಕೋರ್ಟ್ ಆದೇಶ ನೀಡಿದೆ. ಗುರುಮಾಚಿದೇವ ಸಂಸ್ಥೆಯ ಪರವಾಗಿ ಉಡುಪಿಯ ವಕೀಲ ಎಸ್‌. ಗುರುರಾಜ್‌ ಐತಾಳ್‌ ವಾದ ಮಂಡಿಸಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.