23/12/2024

Law Guide Kannada

Online Guide

ಪರಮಾತ್ಮನಿಗೆ ವಕಾಲತ್ತು ವಹಿಸಿದ ವಕೀಲನಿಗೆ ಛೀಮಾರಿ, ಬಿತ್ತು ಭಾರಿ ದಂಡ.

ನವದೆಹಲಿ: ಶ್ರೀ ಶ್ರೀ ಅನುಕೂಲ ಚಂದ್ರ ಅವರನ್ನು ‘ಪರಮಾತ್ಮ’ ಎಂದು ಘೋಷಿಸಿ ಏಕದೈವ ಪೂಜೆಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದ ವಕೀಲರೊಬ್ಬರಿಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿ ಒಂದು ಲಕ್ಷ ರೂ. ದಂಡ ವಿಧಿಸಿದೆ.

ಸುಪ್ರೀಂಕೋರ್ಟ್ ನ ನ್ಯಾ. ಎಂ.ಆರ್. ಶಾ ಹಾಗೂ ನ್ಯಾ. ಸಿ.ಟಿ. ರವಿಕುಮಾ‌ರ್ ನೇತೃತ್ವದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.

ಭಾರತೀಯರಿಗೆ ಕೋಟ್ಯಂತರ ದೇವರು. ಇದರಿಂದ ಎಲ್ಲರೂ ಗೊಂದಲಕ್ಕೆ ಒಳಗಾಗುತ್ತಾರೆ. ಏನೂ ಪ್ರಯೋಜನವಿಲ್ಲ. ಹಾಗಾಗಿ, ಶ್ರೀ ಅನುಕೂಲ ಚಂದ್ರ ಅವರನ್ನು ಪರಮಾತ್ಮ ಎಂದು ಘೋಷಿಸಿ ಏಕದೈವದ ಪೂಜೆಗೆ ಅವಕಾಶ ಕೊಡಿ ಎಂದು ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಪೀಠ, ವಕೀಲರಿಗೆ ಛೀಮಾರಿ ಹಾಕಿ ಭರ್ಜರಿ ದಂಡ ತೆರುವಂತೆ ವಕೀಲರಿಗೆ ಆದೇಶಿಸಿತು.
ನಮ್ಮದು ಜಾತ್ಯತೀತ ರಾಷ್ಟ್ರ. ಇಲ್ಲಿಯ ಜನರಿಗೆ ಧರ್ಮ ಮತ್ತು ದೇವರ ಆಯ್ಕೆಗೆ ಸ್ವಾತಂತ್ಯ ಇದೆ. ಇಂಥದ್ದೇ ಆಧ್ಯಾತ್ಮ ಗುರುವನ್ನು ಪೂಜಿಸಿ ಎಂದು ನಿರ್ದೇಶನ ನೀಡಲು ಸಾಧ್ಯವೇ..? ಎಂದು ಅರ್ಜಿದಾರರಿಗೆ ಮತ್ತು ಅವರ ವಕೀಲರಿಗೆ ಖಾರವಾಗಿ ಪ್ರಶ್ನಿಸಿದ ನ್ಯಾಯಪೀಠ, ಕೋರ್ಟ್ ಕಲಾಪವನ್ನು ಹೀಗೆ ವ್ಯರ್ಥ ಮಾಡಿರುವ ವಕೀಲರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿತು.

ನಿಮ್ಮದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಲ್ಲ. ಇದೊಂದು ಪ್ರಚಾರ ಹಿತಾಸಕ್ತಿಯ ಅರ್ಜಿ ಎಂದು ಅರ್ಜಿ ಹಾಕಿದ ವಕೀಲರಿಗೆ ನ್ಯಾಯಪೀಠ ಮಂಗಳಾರತಿ ಮಾಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.