23/12/2024

Law Guide Kannada

Online Guide

10 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ನೌಕರರು ಖಾಯಂಗೆ ಅರ್ಹರು- ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: 10 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ನೌಕರರು ಖಾಯಂಗೆ ಅರ್ಹರು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಹತ್ತು ವರ್ಷಕ್ಕೂ ಅಧಿಕ ಸಮಯದಿಂದ ಕೆಲಸ ಮಾಡುತ್ತಿದ್ದ ನೌಕರರನ್ನು ಖಾಯಂಗೊಳಿಸಲು ಸಾಧ್ಯವಿಲ್ಲ ಎಂಬ ಸರ್ಕಾರದ ಹಿಂಬರಹವನ್ನು ರದ್ದುಪಡಿಸಿರುವ ಹೈಕೋರ್ಟ್ ನ್ಯಾಯಮೂರ್ತಿ ಬಿ.ಎಂ ಶ್ಯಾಮ್ ಪ್ರಸಾದ್ ಅವರಿದ್ದ ಪೀಠವು, ಈ ನೌಕರರು ಖಾಯಂಮಾತಿಗೆ ಅರ್ಹರಾಗಿದ್ದು, ಮೂರು ತಿಂಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿತು.

ಸೇವೆ ಖಾಯಂಗೊಳಿಸಲು ನಿರಾಕರಿಸಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ನೀಡಿದ್ದ ಹಿಂಬರವನ್ನು ಪ್ರಶ್ನಿಸಿ ಮೈಸೂರಿನ ಶಾಂತಲಕ್ಷ್ಮಿ ಹಾಗೂ ಇತರರು ಹೈಕೋರ್ಟ್ ಗೆ ಪ್ರತ್ಯೇಕವಾಗಿ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದರು. ಈ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ ಶ್ಯಾಮ್ ಪ್ರಸಾದ್ ಅವರಿದ್ದ ಪೀಠವು, ಒಂದೇ ಬಗೆಯ ಉದ್ಯೋಗ ಮಾಡುವವರನ್ನು ಭಿನ್ನ ರೀತಿಯಲ್ಲಿ ನೋಡಲಾಗದು. ಅರ್ಜಿದಾರರು 10 ವರ್ಷಗಳಿಗೂ ಅಧಿಕ ಕಾಲ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸಿದ್ದಾರೆ. ಅವರನ್ನು ಹಂಗಾಮಿ ನೌಕರರಾಗಿಯೇ ಮುಂದುವರಿಸಲಾಗದು. ಅವರಿಗೆ ಅರ್ಹ ವೇತನ/ ಭತ್ಯೆಗಳನ್ನು ನೀಡಬೇಕಾಗುತ್ತದೆ. ಹಾಗಾಗಿ, ಉಮಾದೇವಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಅನುಸಾರ ಇವರು ಸೇವೆ ಖಾಯಂಗೆ ಅರ್ಹರು” ಎಂದು ತಿಳಿಸಿದೆ.
ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದ ಅರ್ಜಿದಾರರನ್ನು ಖಾಯಂಗೊಳಿಸಲು ನಿರಾಕರಿಸಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಹಿಂಬರಹನೀಡಿದ್ದವು. ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದ ಸರ್ಕಾರ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅರ್ಜಿದಾರರನ್ನು ಮಂಜೂರಾದ ಹುದ್ದೆಗಳಿಗೆ ನೇಮಕ ಮಾಡಿಕೊಂಡಿರಲಿಲ್ಲ. ಬದಲಿಗೆ ಅವರನ್ನು ಮಂಜೂರಾಗದ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗಿತ್ತು. ನ್ಯಾಯಾಲಯಗಳ ಅದೇಶದಿಂದಾಗಿ ಅರ್ಜಿದಾರರನ್ನು 10 ವರ್ಷಕ್ಕೂ ಅಧಿಕ ಸಮಯದಿಂದ ದಿನಗೂಲಿ ಸೇವೆಯಲ್ಲಿ ಮುಂದುವರಿಸಲಾಗಿದೆ. ಹಾಗಾಗಿ ಅವರು ಸೇವೆ ಕಾಯಂಗೆ ಅನರ್ಹರು ಎಂದು ವಾದಿಸಿತ್ತು.

ಇದೀಗ ಸರ್ಕಾರದ ವಾದ ತಳ್ಳಿ ಹಾಕಿರುವ ನ್ಯಾಯಪೀಠ, ಈ ಪ್ರಕರಣದಲ್ಲಿ 2002/2005ರ ಯೋಜನೆಗಳಂತೆ ಅರ್ಜಿದಾರರು ಸೇವೆ ಖಾಯಂಮಾತಿಗೆ ಅರ್ಹರಾಗಿದ್ದಾರೆ. ಅವರ ಸೇವೆ ಕಾಯಂಗೊಂಡಿದ್ದು, ಅವರ ಕೆಲಸದ ಸ್ವರೂಪ ಮತ್ತು ಸೇವೆ ಮುಂದುವರಿಕೆ ಬಗ್ಗೆ ನಿರ್ಧರಿಸಬೇಕಿದೆ. ಅರ್ಜಿದಾರರನ್ನು ಇತರೆ ಸಿಬ್ಬಂದಿಯಂತೆ ಸಮಾನವಾಗಿ ಕಾಣಬೇಕಿದೆ ಎಂದು ಅಭಿಪ್ರಾಯಪಟ್ಟಿದೆ. ಅರ್ಜಿದಾರರು ಸೇವೆ ಕಾಯಂಗೆ ಅರ್ಹರಲ್ಲ ಎಂದು 2010ರ ಜೂನ್ 14 ಮತ್ತು 2012ರ ಜೂನ್ 15ರಂದು ನೀಡಿದ್ದ ಹಿಂಬರಹಗಳನ್ನು ರದ್ದುಗೊಳಿಸಿದೆ.

ಅರ್ಜಿದಾರರ ಪರ ವಕೀಲ ವಿ.ಲಕ್ಷ್ಮೀ ನಾರಾಯಣ ವಾದ ಮಂಡಿಸಿದ್ದರು. ಹಾಗೂ ಬಿಎಲ್ ವಿಕ್ರಮ್ ಬಾಲಾಜಿ ವಕಾಲತ್ತು ವಹಿಸಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.