ಕೇಸ್ ಡೈರಿ ಪ್ರತಿ ಪುಟಕ್ಕೂ ತನಿಖಾಧಿಕಾರಿಯ ಸಹಿಗೆ ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು : ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯು ತನಿಖಾ ಸಂಸ್ಥೆಗಳು ನಿರ್ವಹಿಸುತ್ತಿರುವ ಕೇಸ್ ಡೈರಿಯನ್ನು ತಿದ್ದುವ ಅಥವಾ ತಿರುಚುವ ಸಾಧ್ಯತೆ ಹಿನ್ನೆಲೆಯಲ್ಲಿ ಅದರ ಪ್ರತಿ ಪುಟಕ್ಕೂ ತನಿಖಾಧಿಕಾರಿಯ ಸಹಿ ಹಾಕುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಎರಡು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿ ಮೊಹಮ್ಮದ್ ಶಿಯಾಬ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾ. ಎನ್.ವಿ.ಅಂಜಾರಿಯಾ ಮತ್ತು ನ್ಯಾ. ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿ ಆದೇಶಿಸಿದೆ.
ಅಲ್ಲದೆ, ನ್ಯಾಯಾಲಯ ಸದ್ಯ ಇರುವ ಕಾನೂನುಗಳಲ್ಲಿ ಕೇಸ್ ಡೈರಿಯಲ್ಲಿ ಸಹಿ ಹಾಕಲು ಅವಕಾಶ ನೀಡುವಂತಹ ನಿಯಮಗಳು ಇಲ್ಲ. ಹೀಗಿರುವಾಗ ಹಾಲಿ ಇರುವ ಕಾನೂನುಗಳನ್ನು ವಿಶ್ಲೇಷಣೆ ಮಾಡಬಹುದೇ ಹೊರತು, ವಿಶ್ಲೇಷಣೆ ಹೆಸರಿನಲ್ಲಿ ನ್ಯಾಯಾಲಯಗಳು ಹೊಸ ಕಾನೂನು ಜಾರಿಗೊಳಿಸಲಾಗದು ಎಂದು ತಿಳಿಸಿದೆ.
ಏನಿದು ಪ್ರಕರಣ…
ವಿಚಾರಣಾ ನ್ಯಾಯಾಲಯ ಕೊಲೆ ಪ್ರಕರಣದ ವಿಚಾರಣೆಗೆ ಕೇಸ್ ಡೈರಿ ಹಾಜರುಪಡಿಸುವಂತೆ ತನಿಖಾಧಿಕಾರಿಗೆ ನಿರ್ದೇಶನ ನೀಡಿತ್ತು. ಅದರಂತೆ ತನಿಖಾಧಿಕಾರಿ ಕೇಸ್ ಡೈರಿ ಸಲ್ಲಿಸಿ ಅದನ್ನು ಮತ್ತೆ ವಾಪಸ್ ಪಡೆದುಕೊಂಡಿದ್ದರು. ಆಗ ಆರೋಪಿ ಮೊಹಮ್ಮದ್ ಶಿಯಾಬ್ ಮೆಮೋ ಸಲ್ಲಿಸಿ, ಕೇಸ್ ಡೈರಿಯಲ್ಲಿ ನಂತರ ಏನಾದರೂ ಸೇರ್ಪಡೆ ಅಥವಾ ತಿದ್ದುಪಡಿ ಮಾಡುವ ಸಾಧ್ಯತೆ ಇದೆ. ಹಾಗಾಗಿ, ತನಿಖಾಧಿಕಾರಿ ಕೋರ್ಟ್ಗೆ ಕೇಸ್ ಡೈರಿ ಸಲ್ಲಿಸಿದಾಗ ಅದರ ಪ್ರತಿ ಪುಟದಲ್ಲೂ ಸಹಿ ಹಾಕುವಂತೆ ನಿರ್ದೇಶನ ನೀಡಬೇಕು ಎಂದು ವಿಚಾರಣಾ ನ್ಯಾಯಾಲಯವನ್ನು ಕೋರಿದ್ದರು.
ಆದರೆ, ವಿಚಾರಣಾ ನ್ಯಾಯಾಲಯ 2022 ರ ನ.16 ರಂದು, ಆ ರೀತಿ ಪ್ರತಿ ಪುಟದಲ್ಲೂ ಸಹಿ ಹಾಕುವಂತೆ ನಿರ್ದೇಶಿಸಲು ಯಾವುದೇ ನಿಯಮಗಳಲ್ಲಿ ಅವಕಾಶವಿಲ್ಲ ಎಂದು ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್ ಏಕಸದಸ್ಯ ಪೀಠದ ಮೊರೆ ಹೋಗಿದ್ದ. ಏಕಸದಸ್ಯ ಪೀಠ ಕೂಡ ವಿಚಾರಣಾ ನ್ಯಾಯಾಲಯದ ಆದೇಶವನ್ನೇ ಎತ್ತಿಹಿಡಿದ ಹಿನ್ನೆಲೆಯಲ್ಲಿ ಆರೋಪಿ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿದ್ದ.
ಇದೀಗ ಈ ಅರ್ಜಿ ವಜಾಗೊಳಿಸಿದ ವಿಭಾಗೀಯ ಪೀಠವು, ”ಅರ್ಜಿದಾರರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿ ಪ್ರಕರಣ ದಾಖಲಿಸಲಾಗಿದೆ. ಆದರೆ, ನಿಯಮದಲ್ಲಿ ಎಲ್ಲೂ ಪ್ರತಿ ಪುಟದಲ್ಲೂ ತನಿಖಾಧಿಕಾರಿ ಸಹಿ ಹಾಕಬೇಕು ಎಂಬ ಉಲ್ಲೇಖವಿಲ್ಲ. ಆದ್ದರಿಂದ ನ್ಯಾಯಾಲಯ ಹಾಗೆ ಮಾಡುವಂತೆ ಪದಗಳನ್ನು ಸೇರ್ಪಡೆ ಮಾಡಲಾಗದು. ಹಾಗಾಗಿ, ಅರ್ಜಿದಾರರ ಮನವಿ ಮಾನ್ಯ ಮಾಡಲಾಗದು,” ಎಂದು ನ್ಯಾಯಾಲಯ ಆದೇಶಿಸಿದೆ.
‘ನ್ಯಾಯಾಲಯಕ್ಕೆ ಶಾಸನಬದ್ಧ ನಿಯಮಗಳನ್ವಯ ಶಾಸನಗಳಲ್ಲಿರುವ ಪದಗಳನ್ನೇ ವ್ಯಾಖ್ಯಾನ ಅಥವಾ ವಿಶ್ಲೇಷಣೆ ಮಾಡುವ ಅಧಿಕಾರವಿದೆ. ಕೋರ್ಟ್ ತನ್ನ ವ್ಯಾಪ್ತಿ ಮೀರಿ ಕಾನೂನು ಸೃಷ್ಟಿಸಲಾಗದು. ಶಾಸನ ರಚಿಸಿದ ನಂತರ ಅದರಲ್ಲಿರುವ ಪದಗಳನ್ನು ಹೊರತುಪಡಿಸಿ ನ್ಯಾಯಾಲಯವೇ ಹೆಚ್ಚುವರಿ ಪದಗಳನ್ನು ಸೇರ್ಪಡೆ ಮಾಡಲಾಗದು,’ ಎಂದು ನ್ಯಾಯಪೀಠ ಹೇಳಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ