ಗಂಡನಿಂದ ತಿಂಗಳಿಗೆ 6 ಲಕ್ಷ ರೂ. ಜೀವನಾಂಶಕ್ಕೆ ಬೇಡಿಕೆ ಇಟ್ಟ ಮಹಿಳೆ: ನ್ಯಾಯಾಧೀಶರೇ ದಂಗು..!
ವಿಚ್ಚೇದಿತ ಗಂಡನಿಂದ ತಿಂಗಳಿಗೆ ಆರು ಲಕ್ಷ ರೂ. ಜೀವನಾಂಶ ನೀಡುವಂತೆ ನಿರ್ದೇಶಿಸಬೇಕು ಎಂದು ಮಹಿಳೆ ಕರ್ನಾಟಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ವೇಳೆ, ಸ್ವತಃ ನ್ಯಾಯಾಧೀಶರೇ ದಂಗಾದ ಘಟನೆ ನಡೆದಿದೆ.
ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಪೀಠ, ಅಷ್ಟೊಂದು ಖರ್ಚು ಮಾಡುವುದಿದ್ದರೆ ಆಕೆಯೇ ದುಡಿಯಲಿ ಎಂದು ಮೌಖಿಕವಾಗಿ ಎಚ್ಚರಿಕೆ ನೀಡಿದೆ. ಪ್ರಕರಣದ ವಿಚಾರಣೆಯ ಕುರಿತ ವೀಡಿಯೋ ವೈರಲ್ ಆಗಿದೆ.
ಕೌಟುಂಬಿಕ ನ್ಯಾಯಾಲಯ ಪತ್ನಿಗೆ ಮಾಸಿಕ ರೂ. 5000/- ಜೀವನಾಂಶ ನಿಗದಿಪಡಿಸಿತ್ತು. ಆದರೆ ಇದಕ್ಕೆ ಒಪ್ಪದೆ ಐಷಾರಾಮಿ ಜೀವನ ನಡೆಸುವ ಕಾರಣಕ್ಕೆ ತನಗೆ ತಿಂಗಳಿಗೆ 6 ಲಕ್ಷ ರೂ. ಜೀವನಾಂಶ ಕೊಡಿಸಬೇಕೆಂದು ಕೋರಿ ಮಹಿಳೆ ಮೇಲ್ಮನವಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾ. ಲಲಿತಾ ಕನ್ನೆಘಂಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ನ್ಯಾಯಾಲಯ ಪ್ರಕ್ರಿಯೆ ದುರ್ಬಳಕೆ ಮಾಡುವುದರ ಬಗ್ಗೆ ಅರ್ಜಿದಾರರನ್ನು ಎಚ್ಚರಿಸಿತು. ಈ ಪ್ರಕರಣದ ಮೂಲಕ ಕಾನೂನು ದುರ್ಬಳಕೆ ಮಾಡುವವರಿಗೆ ಸ್ಪಷ್ಟ ಸಂದೇಶ ಹೊರಡಿಸಲಾಗುವುದು ಎಂದು ಖಡಕ್ ಆಗಿ ಹೇಳಿತು.
ಅರ್ಜಿದಾರ ಮಹಿಳೆಯ ಪರ ವಾದ ಮಂಡಿಸಿದ ವಕೀಲರು, ಅರ್ಜಿದಾರರ ಪತಿ ಬ್ಯಾಂಡೆಡ್ ಡ್ರೆಸ್, ಶೂಗಳನ್ನು ಧರಿಸುತ್ತಾರೆ. ಹಾಗಾಗಿ, ಮಹಿಳೆಗೂ ಪ್ರತಿ ತಿಂಗಳು ರೂ. 15000/- ಶೂ ಹಾಗೂ ಉಡುಪಿ ಖರೀದಿಗೆ ಬೇಕು. ಅರ್ಜಿದಾರರಿಗೆ ಪೌಷ್ಟಿಕ ಆಹಾರದ ಅಗತ್ಯವಿದೆ. ಮನೆಯಲ್ಲಿ ತಯಾರಿಸುವ ಆಹಾರಕ್ಕಾಗಿ ಆಕೆಗೆ ತಿಂಗಳಿಗೆ 60 ಸಾವಿರ ರೂ. ಬೇಕು, ಇನ್ನು ಒಂದಷ್ಟು ಸಾವಿರ ಮನೆಯ ಹೊರಗಿನ ತಿಂಡಿ-ತಿನಿಸುಗಳಿಗೆ ಬೇಕಾಗುತ್ತದೆ. ಇನ್ನು ಪ್ರತಿ ತಿಂಗಳಿಗೆ ನಾಲ್ಕರಿಂದ ಐದು ಲಕ್ಷ ರೂ. ಮೊಣಕಾಲಿನ ನೋವಿಗೆ ಔಷಧಿ ಮತ್ತು ಫಿಸಿಯೋಥೆರಪಿಗೆ ಖರ್ಚಾಗುತ್ತದೆ ಎಂದು ಪಟ್ಟಿ ಮಾಡಿದ್ದಾರೆ.
ಇಷ್ಟೆಲ್ಲ ಪಟ್ಟಿ ನೀಡಿದ ಬಳಿಕ, ಕನಿಷ್ಟ ಐದು ಲಕ್ಷ ರೂ.ಗಳನ್ನಾದರೂ ನೀಡುವಂತೆ ವಿಚ್ಚೇದಿತ ಪತಿಗೆ ನಿರ್ದೇಶಿಸಬೇಕು ಎಂದು ಮಹಿಳೆಯ ಪರ ವಕೀಲರು ನ್ಯಾಯಪೀಠವನ್ನು ಕೋರಿಕೊಂಡರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, ಚೌಕಾಸಿ ಮಾಡಲು ಇದು ಮಾರುಕಟ್ಟೆಯಲ್ಲ. ಅವರಿಗೆ ನೀವಾದರೂ ತಿಳಿ ಹೇಳಿ, ಆಕೆಯ ನೈಜ ಅವಶ್ಯಕತೆಗಳಿಗೆ ಎಷ್ಟು ಬೇಕು ಎಂದು ಸ್ಪಷ್ಟಪಡಿಸಿದರೆ ಪರಿಹಾರ ನಿರ್ಧರಿಸಬಹುದು. ಇಲ್ಲದಿದ್ದರೆ ಅರ್ಜಿಯನ್ನು ವಜಾ ಮಾಡುವುದಾಗಿ ನ್ಯಾಯಪೀಠ ಎಚ್ಚರಿಸಿತು.
ಅರ್ಜಿದಾರರು ತಿಂಗಳಿಗೆ 6,16,300/- ರೂ. ಪ್ರತಿ ತಿಂಗಳು ಜೀವನಾಂಶವಾಗಿ ಬೇಕು ಎಂದು ಬೇಡಿಕೆ ಇಟ್ಟಿರುವ ಬಗ್ಗೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು. ಜೀವನಾಂಶ ಯಾವುದೇ ಕಾರಣಕ್ಕೂ ಗಂಡನಿಗೆ ಶಿಕ್ಷೆಯಾಗಬಾರದು. ಅಷ್ಟೊಂದು ಹಣ ಖರ್ಚು ಮಾಡಲು ಬಯಸಿದರೆ ಆಕೆಯೇ ಸಂಪಾದಿಸಲಿ. ಗಂಡನ ಮೇಲೆ ಏಕೆ ಅವಲಂಬಿತರಾಗಬೇಕು. ಆಕೆಗೆ ಕುಟುಂಬದ ಅನ್ಯ ಯಾವುದೇ ಜವಾಬ್ದಾರಿ ಇಲ್ಲ. ಮಕ್ಕಳನ್ನು ಸಾಕಬೇಕೆಂದಿಲ್ಲ. ಸ್ವಂತ ಖರ್ಚಿಗೆ ಇಷ್ಟೊಂದು ದೊಡ್ಡ ಮೊತ್ತದ ಬೇಡಿಕೆ ಇಟ್ಟಿರುವುದು ಅಸಮಂಜಸ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ