40 ಸೆಕೆಂಡ್‌ನಲ್ಲಿ ತತ್ಕಾಲ್ ಬುಕಿಂಗ್: ಸಾಫ್ಟ್ ವೇರ್ ಅಭಿವೃದ್ಧಿಪಡಿಸಿದ್ದ ಐಐಟಿ ಪದವೀಧರನ ವಿರುದ್ಧ ಕೇಸ್ ರದ್ದು..
ಬೆಂಗಳೂರು: ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್ ಸಮಯ ಕಡಿಮೆ ಮಾಡಲು ಸಾಫ್ಟ್‌ವೇರ್ ಆವಿಷ್ಕರಿಸಿದ್ದ ಎಂಜಿನಿಯರ್ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್ ಸಮಯವನ್ನು 47 ಸೆಕೆಂಡ್‌ಗೆ ಇಳಿಸುವ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ್ದಕ್ಕೆ ಐಐಟಿ ಪದವೀಧರನ ವಿರುದ್ಧ ರೈಲ್ವೆ ಇಲಾಖೆ ಪ್ರಕರಣವನ್ನು ಹೂಡಿತ್ತು.
ಪ್ರಕರಣ ರದ್ದು ಕೋರಿ ಔರಂಗಾಬಾದ್ ನ ಗೌರವ್ ಢಾಕೆ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ರೈಲ್ವೆ ಕಾಯಿದೆ ಅನ್ವಯ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ
ಅರ್ಜಿದಾರರು ಸ್ಟಾರ್ಟಪ್‌ವೊಂದರ ಸಂಸ್ಥಾಪಕರು. ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್ ಸಮಯ ಕನಿಷ್ಠ 5ರಿಂದ 7 ನಿಮಿಷ ಹಿಡಿಯುತ್ತಿದ್ದರಿಂದ ಅದಕ್ಕೆ ಪರಿಹಾರವಾಗಿ 40 ಸೆಕೆಂಡ್‌ಗಳಲ್ಲಿ ಟಿಕೆಟ್ ಬುಕಿಂಗ್ ಮಾಡುವ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ್ದರು. ಅರ್ಜಿದಾರರು 2020ರ ಆರಂಭದಲ್ಲಿ ಉಚಿತವಾಗಿಯೇ ಬುಕ್ ಮಾಡಿಕೊಡುತ್ತಿದ್ದರು. ನಂತರ 30 ರೂ. ಶುಲ್ಕ ವಿಧಿಸುತ್ತಿದ್ದರು. ಹಾಗಾಗಿ, ರೈಲ್ವೆ ಇಲಾಖೆ ಅವರ ವಿರುದ್ಧ 2020ರ ಸೆ. 29ರಂದು ಅಕ್ರಮವಾಗಿ ರೈಲ್ವೆ ಟಿಕೆಟ್ ಖರೀದಿ ಮತ್ತು ವಿತರಣೆ ಆರೋಪದಡಿ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು. ಮೂರು ವರ್ಷದ ನಂತರ ನ್ಯಾಯಾಲಯಕ್ಕೆ ತನಿಖೆ ಅಂತಿಮ ವರದಿ ಸಲ್ಲಿಸಿತ್ತು.
ಈ ಸಂಬಂಧ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ವಾದ- ಪ್ರತಿವಾದ ಆಲಿಸಿ, ದಾಖಲೆ ಪರಿಶೀಲಿಸಿದ ಬಳಿಕ ನ್ಯಾಯಾಲಯ, ”ಅರ್ಜಿದಾರರು ಟಿಕೆಟ್ ಖರೀದಿಸಿಲ್ಲ ಅಥವಾ ಟಿಕೆಟ್ ಪೂರೈಸಿಲ್ಲ. ಅವರು ಐಆರ್‌ಸಿಟಿಸಿಯ ವೆಬ್ ಸೈಟ್ ಅನ್ನು ಎಕ್ಸ್‌ಟೆಂಡ್ ಮಾಡಿದ್ದಾರೆ. ಅದರಲ್ಲಿ ತತ್ಕಾಲ್‌ನಲ್ಲಿ ಟಿಕೆಟ್ ಬುಕ್ ಮಾಡಲು ತಗಲುತ್ತಿದ್ದ ಸಮಯ 7 ನಿಮಿಷದಿಂದ 40 ಸೆಕೆಂಡ್‌ಗೆ ಇಳಿಸಿರುವುದು ಸಾರ್ವಜನಿಕರಿಗೆ ಅನುಕೂಲಕರವಾಗಿದೆ,” ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ”ಅರ್ಜಿದಾರರು ಟಿಕೆಟ್ ಖರೀದಿ ಮಾಡಿಲ್ಲ ಅಥವಾ ಹಂಚಿಕೆ ಮಾಡಿಲ್ಲ. ಹಾಗಾಗಿ, ಅವರ ವಿರುದ್ಧ ಪ್ರಕರಣ ಮುಂದುವರಿಸಿದರೆ ಅದು ಕಾನೂನಿನ ದುರ್ಬಳಕೆಯಾಗಲಿದೆ,’ ಎಂದಿದ್ದರು.
ಅದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೈಲ್ವೆ ಪರ ವಕೀಲರು, ”ವಿಚಾರಣಾ ನ್ಯಾಯಾಲಯ ಈಗ ಕಾಗ್ನಿಜೆನ್ಸ್ ತೆಗೆದುಕೊಂಡಿದ್ದು, ಪ್ರಕರಣದ ವಿಚಾರಣೆ ಮುಂದುವರಿದಿದೆ. ಈ ಹಂತದಲ್ಲಿ ಪ್ರಕರಣ ರದ್ದುಗೊಳಿಸಬಾರದು. ಅರ್ಜಿದಾರರು ಒಮ್ಮೆ ಟಿಕೆಟ್ ಬುಕಿಂಗ್‌ಗೆ 30 ರೂ. ನಂತೆ 12,49,710 ರೂ. ಲಾಭ ಮಾಡಿಕೊಂಡಿದ್ದಾರೆ. ಹಾಗಾಗಿ, ಪ್ರಕರಣ ಮುಂದುವರಿಸಬೇಕು,” ಎಂದು ಮನವಿ ಮಾಡಿದರು.
ಕೇರಳ ಹೈಕೋರ್ಟ್ ಮ್ಯಾಥ್ಯೂ ಕೆ.ಚೆರಿಯನ್ ಪ್ರಕರಣದಲ್ಲಿ ನೀಡಿರುವ ತೀರ್ಪು ಉಲ್ಲೇಖಿಸಿರುವ ನ್ಯಾಯಾಲಯ, ”ಅರ್ಜಿದಾರರ ವಿರುದ್ಧ ರೈಲ್ವೆ ಮೊಕದ್ದಮೆ ಹೂಡಬಾರದಿತ್ತು. ಜತೆಗೆ, ರೈಲ್ವೆ ಪೊಲೀಸರು ಪ್ರಕರಣ ದಾಖಲಾದ ಮೂರು ವರ್ಷಗಳ ನಂತರ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಮೇಲ್ನೋಟಕ್ಕೆ ಅರ್ಜಿದಾರರ ವಿರುದ್ಧ ಯಾವುದೇ ಅಂಶವಿಲ್ಲ. ಹಾಗಾಗಿ, ಪ್ರಕರಣ ಮುಂದುವರಿಸುವ ಅವಶ್ಯಕತೆ ಇಲ್ಲ,” ಎಂದು ಹೇಳಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ