23/12/2024

Law Guide Kannada

Online Guide

ದೇಶದ ಗಮನ ಸೆಳೆದ ಕನ್ನಡಿಗರಾದ ನ್ಯಾ.ನಾಗರತ್ನ

ನವದೆಹಲಿ: ದೇಶದಲ್ಲಿ ಗಮನ ಸೆಳೆದಿರುವ ಗುಜರಾತಿನ ಬಿಲ್ಕಿಸ್ ಬಾನೋ ಅತ್ಯಾಚಾರ ಹಾಗೂ ಆಕೆಯ ಕುಟುಂಬದವರ ಸಾಮೂಹಿಕ ಹತ್ಯೆ ಪ್ರಕರಣದ ಅಪರಾಧಿಗಳನ್ನು ಅವಧಿಗೆ ಮುನ್ನ ಬಿಡುಗಡೆ ಮಾಡಿದ್ದ ಗುಜರಾತ್ ಸರಕಾರದ ಕ್ರಮವನ್ನು ರದ್ದುಪಡಿಸಿ ಸುಪ್ರೀಂಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಈ ಮಹತ್ವದ ತೀರ್ಪು ನೀಡಿದ್ದಾರೆ.

ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಎಲ್ಲ 11 ಮಂದಿ ಅಪರಾಧಿಗಳು ಇನ್ನು ಎರಡು ವಾರದ ಒಳಗಾಗಿ ಪೊಲೀಸರಿಗೆ ಶರಣಾಗಬೇಕೆಂದು ನ್ಯಾಯಮೂರ್ತಿ ನಾಗರತ್ನ ಅವರು ಆದೇಶಿಸಿದ್ದಾರೆ.

ನ್ಯಾಯಮೂರ್ತಿ ನಾಗರತ್ನ ಅವರು ಕನ್ನಡಿಗರು ಎಂಬುದು ಹೆಮ್ಮೆಯ ಸಂಗತಿಯಾಗಿದೆ. ನಾಗರತ್ನ ಅವರು ಈ ಹಿಂದೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಇ.ಎಸ್.ವೆಂಕಟರಾಮಯ್ಯ ಅವರ ಪುತ್ರಿ. ಮೂಲತಃ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಇಂಗಳಗುಪ್ಪೆ ಎಂಬ ಗ್ರಾಮದವರು.

ನಾಗರತ್ನ ಅವರು ಬೆಂಗಳೂರಿನಲ್ಲಿ ಸುಮಾರು 20 ವರ್ಷಗಳ ಕಾಲ ವಕೀಲರಾಗಿ ನಂತರ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದರು. ಈಗ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿದ್ದಾರೆ.

ನಾಗರತ್ನ ಅವರು ವಕೀಲ ವೃತ್ತಿಯನ್ನು ಬೆಂಗಳೂರಿನಲ್ಲಿ 1987ರಲ್ಲಿ ಆರಂಭಿಸಿದರು. ವಕೀಲರಾಗಿದ್ದಾಗ ಅವರ ತಂದೆ ಇ.ಎಸ್.ವೆಂಕಟರಾಮಯ್ಯ ಅವರು ಸುಪ್ರೀಂಕೋರ್ಟ್ನಲ್ಲಿ ಮುಖ್ಯ ನ್ಯಾಯಮೂರ್ತಿ ಆಗಿದ್ದರು. , ನಾಗರತ್ನ ನಂತರ ನ್ಯಾಯಮೂರ್ತಿಗಳಾದರು. ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ನಲ್ಲಿ ನ್ಯಾಯಮೂರ್ತಿಗಳಾಗಿ ನಾಗರತ್ನ ಅವರು ನೀಡಿರುವ ತೀರ್ಪುಗಳು ಗಮನ ಸೆಳೆದಿವೆ.

ಮಾಧ್ಯಮದ ಮೇಲೆ ನಿಯಂತ್ರಣ ಹಾಗೂ ನಕಲಿ ಸುದ್ದಿಗಳ ನಿಯಂತ್ರಣಕ್ಕೆ ನ್ಯಾಯಮೂರ್ತಿ ನಾಗರತ್ನ ಅವರು ನೀಡಿರುವ ಸೂಚನೆಗಳು ಗಮನ ಸೆಳೆದಿವೆ. ವಾಹನಗಳಿಗೆ ಜೀವಮಾನ ತೆರಿಗೆ ರದ್ದು, ದೇವಾಲಯದ ನೌಕರರ ಕುರಿತು ಅವರು ನೀಡಿರುವ ತೀರ್ಪು ಗಮನ ಸೆಳೆದಿತ್ತು.

Copyright © All rights reserved. | Newsphere by AF themes.