ಗ್ರಾಮ ನ್ಯಾಯಾಲಯಗಳ ಸ್ಥಾಪನೆಗೆ ಸುಪ್ರೀಂ ಒಲವು: ಸ್ಥಿತಿ ಗತಿ, ಸಮಗ್ರ ಮಾಹಿತಿ ನೀಡುವಂತೆ ಸೂಚನೆ
ನವದೆಹಲಿ: ಮನೆ ಬಾಗಿಲಿಗೆ, ಕೈಗೆಟುಕುವ ಮತ್ತು ತ್ವರಿತ ನ್ಯಾಯವನ್ನು ಜನರಿಗೆ ಒದಗಿಸುವುದರ ಜತೆಗೆ ವಿಚಾರಣಾ ನ್ಯಾಯಾಲಯಗಳ ಮುಂದೆ ಬಾಕಿ ಉಳಿದಿರುವ ಬಾಕಿ ಕೇಸುಗಳ ಪ್ರಮಾಣವನ್ನೂ ಕಡಿಮೆ ಮಾಡುವ ಉದ್ದೇಶದಿಂದ ಗ್ರಾಮ ನ್ಯಾಯಾಲಯಗಳ ಸ್ಥಾಪನೆಗೆ ಸುಪ್ರೀಂ ಕೋರ್ಟ್ ಒಲವು ತೋರಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮ ನ್ಯಾಯಾಲಯಗಳ ಸ್ಥಿತಿ ಗತಿ, ಮೂಲಸೌಕರ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಹೌದು, ಕೆಳ ನ್ಯಾಯಾಲಯಗಳಲ್ಲಿ ಬಾಕಿ ಇರುವ ಕೇಸುಗಳನ್ನು ತಗ್ಗಿಸುವ ಸಲುವಾಗಿ ಮತ್ತು ತ್ವರಿತ ನ್ಯಾಯ ಒದಗಿಸಲು ತಳಮಟ್ಟದಲ್ಲಿ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪನೆ ಮಾಡುವ ಬಗ್ಗೆ ಸುಪ್ರೀಂಕೋರ್ಟ್ ಒಲವು ತೋರಿದೆ. ಈ ಸಂಬಂಧ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗಳಿಂದ ಮಾಹಿತಿ ನೀಡುವಂತೆ ಸೂಚನೆ ನೀಡಿದೆ.
ಸಾಮಾಜಿಕ, ಆರ್ಥಿಕ ಮತ್ತು ವಿಕಲಾಂಗತೆ ಕಾರಣದಿಂದಾಗಿ ನ್ಯಾಯ ಪಡೆಯಲು ವಿಫಲರಾಗುವುದನ್ನು ತಪ್ಪಿಸುವ ಸಲುವಾಗಿ ಗ್ರಾಮ ನ್ಯಾಯಾಲಯಗಳ ಸ್ಥಾಪನೆಗೆ ಸಂಬಂಧಿಸಿದಂತೆ 2008ರಲ್ಲಿ ಸಂಸತ್ತು ಕಾಯ್ದೆಯನ್ನು ಅಂಗೀಕರಿಸಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮ ನ್ಯಾಯಾಲಯಗಳ ಸ್ಥಾಪನೆ, ಸ್ಥಿತಿ-ಗತಿ, ಲಭ್ಯವಿರುವ ಮೂಲಸೌಕರ್ಯ, ಕಾರ್ಯನಿರ್ವಹಣೆ ಸೇರಿ ಸಮಗ್ರ ಮಾಹಿತಿಯನ್ನು 6 ವಾರಗಳಲ್ಲಿ ಅಫಿಡವಿಟ್ ಮೂಲಕ ಸಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿ, ಮುಂದಿನ ವಿಚಾರಣೆಯನ್ನ ಸೆಪ್ಟಂಬರ್ 11ಕ್ಕೆ ನಿಗದಿಪಡಿಸಿದೆ.
ಅರ್ಜಿದಾರ ಆಗಿರುವ ಸರ್ಕಾರೇತರ ಸಂಸ್ಥೆ ನ್ಯಾಷನಲ್ ಫೆಡರೇಶನ್ ಆಫ್ ಸೊಸೈಟೀಸ್ ಫಾರ್ ಫಾಸ್ಟ್ ಜಸ್ಟಿಸ್ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ಕಾಯ್ದೆ ಜಾರಿಯಾಗಿ 16 ವರ್ಷಗಳ ಬಳಿಕ ಕೇವಲ 264 ಗ್ರಾಮ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಸದ್ಯದ ಸ್ಥಿತಿಯಲ್ಲಿ ಕನಿಷ್ಠ 6,000 ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಬೇಕಿತ್ತು ಎಂದರು. ಗ್ರಾಮ ನ್ಯಾಯಾಲಯಗಳ ಕುರಿತಂತೆ 2019ರಲ್ಲೇ ಸುಪ್ರೀಂಕೋರ್ಟ್‌ಗೆ ಈ ಅರ್ಜಿ ಸಲ್ಲಿಸಲಾಗಿತ್ತು. 2008ರ ಗ್ರಾಮ ನ್ಯಾಯಾಲಯ ಕಾಯ್ದೆಯ ಸೆಕ್ಷನ್ 5 ಮತ್ತು 6 ರ ಪ್ರಕಾರ, ರಾಜ್ಯ ಸರ್ಕಾರ ಹೈಕೋರ್ಟ್‌ನೊಂದಿಗೆ ಸಮಾಲೋಚಿಸಿ ಪ್ರತಿ ಗ್ರಾಮ ನ್ಯಾಯಲಯಕ್ಕೆ ನ್ಯಾಯಾಧಿಕಾರಿಯನ್ನು ನೇಮಿಸಬೇಕು.
ಹಾಗೆಯೇ ಇದೇ ವೇಳೆ ಗ್ರಾಮ ನ್ಯಾಯಾಲಯಗಳ ಸ್ಥಾಪನೆಯ ಹಿಂದಿನ ಕಲ್ಪನೆ- ನಾಗರಿಕರಿಗೆ ನ್ಯಾಯವನ್ನು ಸುಲಭದಲ್ಲಿ ದೊರಕುವಂತೆ ಮಾಡುವುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ಅಫಿಡವಿಟ್‌ಗಳನ್ನು ಸಲ್ಲಿಸುವ ಮೊದಲು, ರಾಜ್ಯ ಮುಖ್ಯ ಕಾರ್ಯದರ್ಶಿ ಮತ್ತು ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ಗಳು ಆಯಾ ರಾಜ್ಯಗಳಲ್ಲಿ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸುವ ನೀತಿಗೆ ಸಂಬಂಧಿಸಿದಂತೆ ಸಭೆ ನಡೆಸಿ ಸಮನ್ವಯ ಸಾಧಿಸಬೇಕು ಎಂದು ಸುಪ್ರೀ ಕೋರ್ಟ್ ಸಲಹೆ ನೀಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ