ದಾಂಪತ್ಯ ಜೀವನದಿಂದ ಮುಕ್ತಿಗಾಗಿ ಹೋರಾಟ:ವಿಚ್ಛೇದನಕ್ಕಾಗಿ ಹೊಲ, ಬೆಳೆ, ಚಿನ್ನ ಮಾರಿದ 70 ವರ್ಷದ ರೈತ
ಚಂಡೀಗಢ: ದಾಂಪತ್ಯದಲ್ಲಿ ಪ್ರೀತಿ, ನಂಬಿಕೆ ವಿಶ್ವಾಸಗಳು ಬಹಳ ಮುಖ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಪತಿಪತ್ನಿ ನಡುವಿನ ಸಂಬಂಧಗಳು ಕುಸಿಯುತ್ತಿದ್ದು ಡಿವೋರ್ಸ್ಗಳ ಸಂಖ್ಯೆ ಹೆಚ್ಚುತ್ತಿದೆ. ದಾಂಪತ್ಯದಲ್ಲಿ ನೆಮ್ಮದಿ ಇಲ್ಲದಾಗ ಅಂತಹ ಸಂಬಂಧಗಳು ದೂರವಾಗಿ ನೆಮ್ಮದಿ ಪಡೆಯಲು ಯತ್ನಿಸುತ್ತಾರೆ. ಇತ್ತೀಚೆಗೆ ಹೆಂಡತಿಯ ಕಾಟಕ್ಕೆ ಬೇಸತ್ತು ಬೆಂಗಳೂರಿನ ಟೆಕ್ಕಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು ಸಾಕಷ್ಟು ಚರ್ಚೆಯಾಗಿತ್ತು. ಅಂತೆಯೆ ಇಲ್ಲೊಬ್ಬರು 70 ವರ್ಷದ ರೈತ ಹೆಂಡತಿಯ ಕಾಟಕ್ಕೆ ಬೇಸತ್ತು ದಾಂಪತ್ಯ ಜೀವನದಿಂದ ಮುಕ್ತಿಗಾಗಿ ಡೈವರ್ಸ್ ಪಡೆಯಲು ಹೊಲ, ಬೆಳೆ, ಚಿನ್ನ ಮಾರಿದ್ದಾರೆ.
ಹೌದು, ಹರಿಯಾಣದ ರೈತ ಸುಭಾಷ್ ಚಂದ್ರ ಎಂಬ 70 ವರ್ಷ ರೈತ, ಪತ್ನಿ, ಮಕ್ಕಳ ಸಂಸಾರದಿಂದ ಬಿಡುಗಡೆ ಹೊಂದಲು 18 ವರ್ಷ ಕಾನೂನು ಹೋರಾಟ ಮಾಡಿ 3.50 ಕೋಟಿ ರೂ. ಪರಿಹಾರ ಧನ ಕೊಟ್ಟು ಕೈ ತೊಳೆ ದುಕೊಂಡಿದ್ದಾರೆ.
ಸುಭಾಷ್ ಚಂದ್ ತಂದೆ 44 ವರ್ಷಗಳ ಹಿಂದೆ ಪುತ್ರನ ಮದುವೆ ಮಾಡಲು ಕೆಲವೇ ಸಾವಿರ ಖರ್ಚು ಮಾಡಿದ್ದಿರಬಹುದು, ಆದರೆ, ಅದೇ ಮದುವೆಯನ್ನು ಮುರಿದು ಕೊಳ್ಳಲು ಸುಭಾಷ್ ಚಂದ್ ಕೃಷಿ ಜಮೀನು, ಜಮೀನಿನಲ್ಲಿದ್ದ ಫಸಲು, ಮನೆಯಲ್ಲಿದ್ದ ಚಿನ್ನ ಎಲ್ಲವನ್ನೂ ಮಾರಾಟ ಮಾಡಿದ್ದಾರೆ. ಎಲ್ಲವೂ ಹೋಗಿ ಬರಿಗೈಯ್ಯಾದರೂ ಪರವಾಗಿಲ್ಲ, ಈ ಹೆಂಡತಿ ಮಕ್ಕಳ ಸಹ ವಾಸ ಮಾತ್ರ ಬೇಡ ಎನಿಸಿರಬೇಕು. ಸುಭಾಷ್ ಚಂದ್ ತನ್ನದೆನ್ನುವುದನ್ನೆಲ್ಲಾ ಮಾರಾಟ ಮಾಡಿ ಅದರಿಂದ ಬಂದಿದ್ದೆಲ್ಲವನ್ನೂ ಪತ್ನಿ, ಮಕ್ಕಳಿಗೆ ಕೊಟ್ಟ ವಿಚ್ಛೇದನ ಪತ್ರಕ್ಕೆ ಕಡೆಗೂ ಸಹಿಹಾಕಿಸಿಕೊಂಡು ನಿಟ್ಟುಸಿರುಬಿಟ್ಟಿದ್ದಾರೆ.
ವಿಚ್ಛೇದನ ಪಡೆದುಕೊಂಡಿರುವ ದಂಪತಿ ಆ.27, 1980ರಂದು ಮದುವೆಯಾಗಿದ್ದರು. ಈಗ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಸೇರಿ ಮೂವರು ಮಕ್ಕಳಿದ್ದಾರೆ.
ಇವರಿಬ್ಬರು ಸುದೀರ್ಘ 44 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದಾರೆ. ಆದರೆ ವರ್ಷಗಳು ಕಳೆದಂತೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಅವರ ಸಂಬಂಧ ಮತ್ತಷ್ಟು ಹದಗೆಟ್ಟು 2006, ಮೇ 8ರಿಂದ ತಮ್ಮ ತಮ್ಮ ದಾರಿ ಕಂಡುಕೊಂಡು ಬೇರೆ ಬೇರೆಯಾಗಿ ವಾಸಿಸತೊಡಗಿದ್ದಾರೆ. ಅದಾದ ಬಳಿಕ ಪತಿ ಕೌಟುಂಬಿಕ ಕೋರ್ಟ್ನಲ್ಲಿ ಮಾನಸಿಕ ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾಳೆ. ಆದರೆ 2013ರಲ್ಲಿ ಪತ್ನಿಯ ವಿಚ್ಛೇದನದ ಮನವಿಯನ್ನು ಕರ್ನಾಲ್ ಕೋರ್ಟ್ ತಿರಸ್ಕರಿಸಿತ್ತು.
ನಂತರ, ಸುಭಾಷ್ ಹೈಕೋಟ್ನಲ್ಲಿ ಮೇಲ್ಮನವಿ ಸಲ್ಲಿಸಿದರು. 11 ವರ್ಷ ಕಾಲ ವಿಚಾರಣೆ ಮುಂದೂಡಿಕೆಯಾಗುತ್ತಲೇ ಬಂತು. ನಂತರ ಈ ಕೇಸನ್ನು ಹೈಕೋರ್ಟ್ ಪೀಠ, ಕೊನೆಗೆ ರಾಜಿ ಸಂದಾನ ನಡೆಸುವಂತೆ ಇದೇ ನವೆಂಬರ್ನಲ್ಲಿ ಮಧ್ಯಸ್ಥಿಕೆ ಕೇಂದ್ರಕ್ಕೆ ವಹಿಸಿತು. ಪತ್ನಿ ಸಂತೋಷಿ ಮತ್ತು 3 ಮಕ್ಕಳು ಜೀವನಾಂಶವಾಗಿ 4 ಕೋಟಿ ಕೊಟ್ಟರೆ ವಿಚ್ಛೇದನಕ್ಕೆ ಒಪ್ಪುವುದಾಗಿ ಷರತ್ತು ವಿಧಿಸಿದರು. ಅದಕ್ಕೆ ಒಪ್ಪಿದ ಸುಭಾಷ್, ಜಮೀನಿನಲ್ಲಿದ್ದ ಬೆಳೆ, ಮನೆಯಲ್ಲಿದ್ದ ಚಿನ್ನ-ಬೆಳ್ಳಿ ಎಲ್ಲವನ್ನೂ ಮಾರಿದರು. ಆದರಿಂದ 90 ಲಕ್ಷ ರೂ. ಮಾತ್ರ ಸಿಕ್ಕಿತು. ಕಡೆಗೆ ಜಮೀನನ್ನೂ 2.60 ಕೋಟಿ ರು.ಗೆ ಮಾರಿ, 3.5 ಕೋಟಿ ರು. ಒಟ್ಟುಗೂಡಿಸಿ ಪತ್ನಿ-ಮಕ್ಕಳಿಗೆ ಕೊಟ್ಟು ವಿಚ್ಛೇದನ ಪತ್ರಕ್ಕೆ ಸಹಿ ಪಡೆದರು. ದಾಂಪತ್ಯ ಜೀವನದಿಂದ ಮುಕ್ತಿಗಾಗಿ ಸುದೀರ್ಘ ಹೋರಾಟ ನಡೆಸಿದ ಸುಭಾಷ್, 18 ವರ್ಷಗಳ ಬಳಿಕ ನಿಟ್ಟುಸಿರುಬಿಟ್ಟಿದ್ದಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ