ವಿಚಿತ್ರದಲ್ಲಿ ವಿಚಿತ್ರ ಪ್ರಕರಣ : ದಂಡ ಮನ್ನಾಗಾಗಿ ನ್ಯಾಯಮೂರ್ತಿಗಳಿಗೆ ಸಿಟ್ಟು ತರಿಸಿ ಛೀಮಾರಿ ಹಾಕಿಸಿಕೊಂಡ ವಕೀಲರೊಬ್ಬರ ವಿಚಿತ್ರ ಕಹಾನಿ
ಘಟನೆಯ ವಿವರ
ಇದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಘಟನೆ. ವಕೀಲರೊಬ್ಬರು ತನಗೆ ವಿಧಿಸಿದ್ದ ದಂಡವನ್ನು ಮನ್ನಾ ಮಾಡುವಂತೆ ಸುಪ್ರೀಂ ಕೋರ್ಟ್ ಪೀಠಗಳ ತಲೆತಿಂದು ಕೊನೆಗೆ ನ್ಯಾಯಮೂರ್ತಿಗಳ ವಿರುದ್ದವೇ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಗೆ ದೂರು ನೀಡಿದ ವಿಚಿತ್ರ ಘಟನೆ.
ಸುಪ್ರೀಂಕೋರ್ಟ್ ವಕೀಲರನ್ನು ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಿಸಬೇಕು ಎಂದು ಪುಣೆ ಮೂಲದ ವಕೀಲ ಅಶೋಕ್ ಪಾಂಡೆ ಕಳೆದ ವರ್ಷ ಪಿಐಎಲ್ ಸಲ್ಲಿಸಿದ್ದರು. ವಕೀಲರ ಪಿಐಎಲ್ ತಿರಸ್ಕರಿಸಿದ ನ್ಯಾಯಪೀಠ ಅಷ್ಟಕ್ಕೆ ಸುಮ್ಮನಾಗದೆ 50 ಸಾವಿರ ರೂಪಾಯಿ ದಂಡ ವಿಧಿಸಿತು. ಇದನ್ನು ಹಿಂಪಡೆಯುವಂತೆ ವಕೀಲ ಅಶೋಕ್ ಪಾಂಡೆ ನ್ಯಾಯಮೂರ್ತಿ ಅಭಯ್ ಓಕಾ ಮತ್ತು ನ್ಯಾಯಮೂರ್ತಿ ಮನೀಶ್ ಅವರಿದ್ದ ಪೀಠಕ್ಕೆ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಕೋರ್ಟ್ ತೀರ್ಪು ನೀಡಿದ ಬಳಿಕ ನೀವು ವಿದೇಶ ಪ್ರಯಾಣ ಮಾಡಿದ್ದೀರಿ. ಆದ್ದರಿಂದ ಈಗ ಹಣ ಕಟ್ಟಲಾಗುವುದಿಲ್ಲ ಎನ್ನುವಂತಿಲ್ಲ. ನೀವು 2 ವಾರದೊಳಗೆ ದಂಡ ಕಟ್ಟಲೇಬೇಕು ಎಂದು ತಾಕೀತು ಮಾಡಿತು.
ಇದರಿಂದ ಅಸಮಾಧನಗೊಂಡ ಅಶೋಕ್ ಪಾಂಡೆ ತಮ್ಮ ಮೇಲೆ ಕೋರ್ಟ್‌ಗಳು ವಿಧಿಸಿರುವ ದಂಡ ಹಿಂಪಡೆಯುವಂತೆ ಕೋರಿ ವಿವಿಧ ಪೀಠಗಳಲ್ಲಿ ಒಂದೇ ದಿನ ಮನವಿ ಸಲ್ಲಿಸಿದರು. ಇದಕ್ಕೆ ಕೋರ್ಟ್ ಒಪ್ಪಲಿಲ್ಲ. ಇದರಿಂದ ಮತ್ತಷ್ಟು ಅಸಮಾಧಾನಗೊಂಡ ಅವರು ದಂಡ ವಿಧಿಸಿ ತೀರ್ಪುನೀಡಿದ ನ್ಯಾಯಮೂರ್ತಿಗಳ ವಿರುದ್ಧ ಮುಖ್ಯ ನ್ಯಾಯಮೂರ್ತಿಗೆ ದೂರು ನೀಡಿದರು. ಈ ವೇಳೆ ನ್ಯಾಯಪೀಠದ ಮುಂದೆ ಅಶೋಕ್ ಪಾಂಡೆ ನಾನು ಬಡವ, ಯಾವುದೇ ಪ್ರಕರಣಗಳು ನನ್ನ ಕೈಲಿಲ್ಲ ಹೀಗಾಗಿ ಕೋರ್ಟ್ ದಂಡ ಹಿಂಪಡೆಯಬೇಕು ಎಂದು ಕೈ ಮುಗಿದು ಬೇಡಿಕೊಂಡರು. ದಂಡದ ಪ್ರಕರಣದಲ್ಲಿ ನ್ಯಾ.ಬಿ.ಆರ್.ಗವಾಯಿ ಅವರಿದ್ದ ಪೀಠಕ್ಕೆ ಮನವಿ ಸಲ್ಲಿಸಿದ ಪಾಂಡೆ, ನೀವು ಮುಂದಿನ ಸಿಜೆ ಆಗಲಿದ್ದೀರಿ. ನನ್ನ ದಂಡ ಹಿಂಪಡೆಯಿರಿ ಎಂದು ಮನವಿ ಮಾಡಿದರು. ಇದರಿಂದ ಕೋಪಗೊಂಡ ನ್ಯಾಯಮೂರ್ತಿ ಗವಾಯಿ ಅಶೋಕ್ ಪಾಂಡೆಯನ್ನು ಹೊರ ಹೋಗುವಂತೆ ಸೂಚಿಸಿದರು. ಒಂದು ವೇಳೆ ಹೊರ ಹೋಗದಿದ್ದರೆ ಸೆಕ್ಯುರಿಟಿಯನ್ನು ಕರೆಯಲಾಗುವುದು ಎಂದರು. ತಕ್ಷಣ ಅಲ್ಲಿಂದ ಸಿಜೆಐ ಬಳಿ ತೆರಳಿದ ಪಾಂಡೆ, ನನ್ನ ಲೈಸೆನ್ಸ್ ರದ್ದು ಮಾಡುವುದಾಗಿ ಜಡ್ಜ್ ಬೆದರಿಕೆ ಒಡ್ಡಿದ್ದಾರೆಂದು ಅರೋಪ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಚಂದ್ರಚೂಡ್ ಕೋರ್ಟ್ ಸಮಯ ವ್ಯರ್ಥ ಮಾಡದಂತೆ ಪಾಂಡೆಗೆ ಎಚ್ಚರಿಕೆ ನೀಡಿದರು. ಸದ್ಯ ಈ ಪ್ರಕರಣ ನ್ಯಾಯಾಂಗ ವ್ಯವಸ್ಥೆಯಲ್ಲಿ ಅತ್ಯಂತ ವಿಚಿತ್ರ ಪ್ರಕರಣವೆಂದು ದಾಖಲೆಯ ಪುಟ ಸೇರಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ