ನ್ಯಾಯಾಲಯ ಕಲಾಪದ ವೀಡಿಯೋ ಪ್ರಸಾರ ನಿಲ್ಲಿಸಿ-ಸೋಶಿಯಲ್ ಮೀಡಿಯಾ, ಮಾಧ್ಯಮ ಸಂಸ್ಥೆಗಳಿಗೆ ಹೈಕೋರ್ಟ್ ಚಾಟಿ
ಬೆಂಗಳೂರು: ಕರ್ನಾಟಕ ಹೈಕೋರ್ಟ್ ಕಲಾಪದ ನೇರ ಪ್ರಸಾರದ ವೀಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ಸಾಮಾಜಿಕ ಮಾಧ್ಯಮ, ಸುದ್ಧಿ ಪ್ರಸಾರದ ಸಂಸ್ಥೆಗಳಿಗೆ ಹೈಕೋರ್ಟ್ ಚಾಟಿ ಬೀಸಿದೆ.
ಕೋರ್ಟ್ ಕಲಾಪದ ವೀಡಿಯೋ ಪ್ರಸಾರ ಮಾಡಬಾರದು; ಮಾಡಿದ್ದರೆ ತಕ್ಷಣವೇ ತೆಗೆದುಹಾಕಬೇಕು ಎಂದು ಸೋಶಿಯಲ್ ಮೀಡಿಯಾ, ಮಾಧ್ಯಮ ಸಂಸ್ಥೆಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿ ಬಿಸಿ ಮುಟ್ಟಿಸಿದೆ.
ಹಣ ಗಳಿಸುವ ಉದ್ದೇಶದಿಂದ ಹೈಕೋರ್ಟ್ ಲೈವ್ ಸ್ಟ್ರೀಮ್ ವೀಡಿಯೋಗಳನ್ನು ಮನ ಬಂದಂತೆ ಎಡಿಟ್ ಮಾಡಿ ಪ್ರಸಾರ ಮಾಡಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿ ಬೆಂಗಳೂರು ವಕೀಲರ ಸಂಘ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ನ್ಯಾಯಪೀಠವು, ಹೈಕೋರ್ಟ್ ಲೈವ್ ಸ್ಟ್ರೀಮಿಂಗ್ ವೀಡಿಯೋಗಳನ್ನು ಬಳಸಬಾರದು ಮತ್ತು ಈಗಾಗಲೇ ಬಳಕೆ ಮಾಡಿರುವ ವೀಡಿಯೋಗಳನ್ನು ತಕ್ಷಣದಿಂದ ತೆಗೆಯುವಂತೆ ಎಲ್ಲ ಮಾಧ್ಯಮಗಳಿಗೆ ನಿರ್ದೇಶಿಸಿತು.
ಯೂಟ್ಯೂಬ್, ಫೇಸ್ಬುಕ್ ಮತ್ತು ಎಕ್ಸ್ ಕಾರ್ಪ್(ಟ್ವಿಟ್ಟರ್)ಗಳಿಗೂ ಕರ್ನಾಟಕ ಹೈಕೋರ್ಟ್ ತನ್ನ ಆದೇಶದ ಮೂಲಕ ಲೈವ್ ಸ್ಟ್ರೀಮಿಂಗ್ ವೀಡಿಯೋಗಳನ್ನು ತೆಗೆದುಹಾಕುವಂತೆ ಸೂಚಿಸಿತು. ಇದರ ಜೊತೆಗೆ, ಯಾವುದೇ ಖಾಸಗಿ ವೇದಿಕೆಗಳು, ಸಾಮಾಜಿಕ ಜಾಲತಾಣದ ಖಾತೆಗಳು ಮತ್ತು ಟ್ವಿಟ್ಟರ್ ಹ್ಯಾಂಡಲ್ಗಳಲ್ಲಿ ಹೈಕೋರ್ಟ್ ಲೈವ್ ಕಂಟೆಂಟ್ ನ ತುಣುಕುಗಳನ್ನು ಬಳಸಬಾರದು ಎಂಬ ನಿರ್ಬಂಧವನ್ನು ಹೇರಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ