23/12/2024

Law Guide Kannada

Online Guide

ಲೈಂಗಿಕ ಕಿರುಕುಳ: ಜ್ಯೋತಿಷಿ ವಿರುದ್ದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಭವಿಷ್ಯ ಹೇಳುವ ನೆಪದಲ್ಲಿ ವಂಚನೆ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ಅದೇ ರೀತಿ ಜಾತಕದ ದೋಷ ಸರಿಪಡಿಸುವ ಹೆಸರಿನಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇಲೆ ಜ್ಯೋತಿಷಿ ವಿರುದ್ದ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.

ಜಾತಕದಲ್ಲಿ ದೋಷ ಇದೆ ಎಂದು ನಂಬಿಸಿ ಅದನ್ನು ಸರಿಪಡಿಸುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ಜ್ಯೋತಿಷಿ ವಿರುದ್ದದ ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್‌ ನ್ಯಾ. ಎಂ.ಜಿ. ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠವು ನಿರಾಕರಿಸಿದೆ.

ಮದ್ದೂರಿನ ಅನ್ನಪೂರ್ಣೇಶ್ವರಿ ಮಹಾಕಾಳಿ ಜ್ಯೋತಿಷ್ಯಾಲಯದ ಕಾಮುಕ ಆರೋಪಿ/ಅರ್ಜಿದಾರ ಮೋಹನ್ ದಾಸ್ ಆಲಿಯಾಸ್ ಶಿವರಾಮು ಎಂಬಾತನ ವಿರುದ್ದವೇ ಈ ಆರೋಪ ಕೇಳಿ ಬಂದಿರುವುದು. ಈತ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದೆ.

ಪ್ರಕರಣ ಹಿನ್ನೆಲೆ…..
2014ರಲ್ಲಿ ಮದುವೆಯಾಗಿದ್ದ ಪತಿ ಪತ್ನಿಯರ ನಡುವೆ ಹಿತವಾದ ಸಂಬಂಧ ಇರಲಿಲ್ಲ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಜ್ಯೋತಿಷಿಯನ್ನು ಭೇಟಿಯಾಗುವಂತೆ ಪತ್ನಿಯನ್ನು ಪತಿಯ ಕುಟುಂಬದವರು ಒತ್ತಾಯಿಸಿದ್ದರು. ಅದರಂತೆ ಪತಿ ತನ್ನ ಪತ್ನಿಯನ್ನು ಆರೋಪಿ ಜ್ಯೋತಿಷಿ ಬಳಿ ಕುಂಡಲಿ ಪೂಜೆಗಾಗಿ ಕರೆದೊಯ್ದಿದ್ದರು. ಈ ಭೇಟಿ ವೇಳೆ, ಪತ್ನಿಯ ಉಪಸ್ಥಿತಿಯನ್ನು ದುರುಪಯೋಗಪಡಿಸಿಕೊಂಡ ಜ್ಯೋತಿಷಿ, ಆಕೆಯ ದೇಹವನ್ನು ಸ್ಪರ್ಶಿಸಿ ಅನುಚಿತವಾಗಿ ವರ್ತಿಸಿದ್ದರು. ಇದಕ್ಕೆ ಪ್ರತಿರೋಧಿಸದಂತೆ ಪತಿ ತಡೆದರು ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದರು.

ದೂರನ್ನು ದಾಖಲಿಸಿಕೊಂಡ ಮದ್ದೂರು ಪೊಲೀಸರು ಜ್ಯೋತಿಷಿ ಮತ್ತು ಮಹಿಳೆಯ ಪತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿ ಎಫ್‌ಐಆ‌ರ್ ದಾಖಲಿಸಿಕೊಂಡಿದ್ದರು. ಸೆಕ್ಷನ್ 498A, 354, 354A, 508, ಸಹವಾಚಕ 34 ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿ ಆರೋಪಿತ ಜ್ಯೋತಿಷಿ ಹೈಕೋರ್ಟ್‌ ಮೊರೆ ಹೋಗಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.