23/12/2024

Law Guide Kannada

Online Guide

ವಜಾಗೊಂಡ ನ್ಯಾಯಾಧೀಶೆಯರ ಮರುನೇಮಕಕ್ಕೆ ನಕಾರ : ಹೈಕೋರ್ಟ್ ಗೆ ಸುಪ್ರೀಂಕೋರ್ಟ್ ತೀವ್ರ ತರಾಟೆ

ನವದೆಹಲಿ: ಆರು ಮಹಿಳಾ ನ್ಯಾಯಾಧೀಶರ ಕಾರ್ಯಕ್ಷಮತೆ ತೃಪ್ತಿಕರವಾಗಿಲ್ಲ ಎಂಬ ಆರೋಪದ ಮೇಲೆ ವಜಾಗೊಂಡದ್ದ ಆರು ನ್ಯಾಯಾಧೀಶೆಯರ ಮರುನೇಮಕಕ್ಕೆ ನಿರಾಕರಿಸಿದ್ದ ಮಧ್ಯಪ್ರದೇಶ ಹೈಕೋರ್ಟ್ ಗೆ ಸುಪ್ರೀಂಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದೆ.

ಸುಪ್ರೀಂ ಕೋರ್ಟ್ನ ನ್ಯಾ. ಬಿ.ವಿ. ನಾಗರತ್ನ ಹಾಗೂ ನ್ಯಾ. ಎನ್. ಕೋಟೇಶ್ವರ ಸಿಂಗ್ ಅವರಿದ್ದ ದ್ವಿಸದಸ್ಯ ನ್ಯಾಯಪೀಠ, ಮಧ್ಯಪ್ರದೇಶ ಹೈಕೋರ್ಟ್ ತೀರ್ಪಿನ ತೀಕ್ಷ ಪ್ರತಿಕ್ರಿಯೆ ನೀಡಿದ್ದು ಕಟು ಶಬ್ದಗಳ ಮೂಲಕ ಹೈಕೋರ್ಟ್ ನ್ಯಾಯಪೀಠವನ್ನ ತರಾಟೆ ತೆಗೆದುಕೊಂಡಿದೆ.

ಪ್ರಕರಣ ಹಿನ್ನೆಲೆ..
ತರಬೇತಿಯ ಅವಧಿಯಲ್ಲಿ ಆರು ಮಹಿಳಾ ನ್ಯಾಯಾಧೀಶರ ಕಾರ್ಯಕ್ಷಮತೆ ತೃಪ್ತಿಕರವಾಗಿಲ್ಲ ಎಂದು ಆಡಳಿತಾತ್ಮಕ ಸಮಿತಿ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ಪೂರ್ಣ ನ್ಯಾಯಾಲಯದ ಸಭೆ ನಿರ್ಧರಿಸಿದ್ದ ಹಿನ್ನೆಲೆಯಲ್ಲಿ 2023ರ ಜೂನ್ ನಲ್ಲಿ ಮಧ್ಯಪದೇಶ ಸರ್ಕಾರದ ಕಾನೂನು ಇಲಾಖೆ ಆರು ನ್ಯಾಯಾಧೀಶೆಯರನ್ನು ವಜಾಗೊಳಿಸಿತ್ತು.

ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪದ ಮೇಲೆ ನ್ಯಾಯಾಧೀಶೆಯರಾದ ಸರಿತಾ ಚೌಧರಿ, ಪ್ರಿಯಾ ಶರ್ಮಾ, ರಚನಾ ಅತುಲ್ಕರ್ ಜೋಷಿ, ಅದಿತಿ ಕುಮಾರ್ ಶರ್ಮಾ, ಸೋನಾಕ್ಷಿ ಜೋಶಿ ಮತ್ತು ಜ್ಯೋತಿ ಬರ್ಖಾಡೆ ಅವರನ್ನು ವಜಾಗೊಳಿಸಲಾಗಿತ್ತು.

ಈ ನಡುವೆ ಆರು ನ್ಯಾಯಾಧೀಶೆಯರನ್ನ ಮರು ನೇಮಕ ಮಾಡಿಕೊಳ್ಳಬೇಕು ಎಂಬ ನ್ಯಾಯಾಂಗ ಅಧಿಕಾರಿಗಳ ಮನವಿಯನ್ನು ಮಧ್ಯಪ್ರದೇಶದ ಹೈಕೋರ್ಟ್ ತಳ್ಳಿ ಹಾಕಿತ್ತು. ನಂತರ ತನ್ನ ನಿರ್ಧಾರವನ್ನು ಮರು ಪರಿಶೀಲಿಸಲು ಹೈಕೋರ್ಟ್ ಸಿದ್ಧವಾಗಿದೆಯೇ ಎಂದು ಕಳೆದ ಫೆಬ್ರವರಿಯಲ್ಲಿ ನಡೆದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮೌಖಿಕವಾಗಿ ಪ್ರಶ್ನಿಸಿತ್ತು. ಅದೇ ರೀತಿ, ವಜಾಗೊಂಡ ಮಹಿಳಾ ನ್ಯಾಯಾಧೀಶರ ಮನವಿಗೆ ಸಂಬಂಧಿಸಿದಂತೆ ಒಂದು ತಿಂಗಳೊಳಗೆ ನಿರ್ಧಾರ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಜುಲೈನಲ್ಲಿ ಸಲಹೆ ನೀಡಿತ್ತು.

ಆದರೆ ಆರು ನ್ಯಾಯಾಧೀಶೆಯರ ಮರುನೇಮಕಕ್ಕೆ ನಿರಾಕರಿಸಿದ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಪೀಠದ ವಿರುದ್ದ ಕಿಡಿಕಾರಿದ ಸುಪ್ರೀಂಕೋರ್ಟ್ ನ್ಯಾಯಪೀಠ, ಮಧ್ಯಪ್ರದೇಶ ಹೈಕೋರ್ಟ್ ವರ್ತನೆ ಸಂವೇದನಾಶೀಲವಾಗಿಲ್ಲ ಎಂದು ಕಟು ಮಾತಿನ ಟಿಪ್ಪಣಿ ಮಾಡಿದ ನ್ಯಾಯಪೀಠ, ಋತುಮತಿಯಾಗುವ ನೈಸರ್ಗಿಕ ಪ್ರಕ್ರಿಯೆ ಪುರುಷರಿಗೂ ಇದ್ದಿದ್ದರೆ ಅವರಿಗೆ ಇದರ ಕಷ್ಟ ಅರ್ಥವಾಗುತ್ತಿತ್ತು ಎಂದು ಪರೋಕವಾಗಿ ಕುಟುಕಿದೆ.

ಮಹಿಳೆಯರು ಋತುಚಕ್ರ ಹಾಗೂ ಋತುಬಂಧ ಸಂದರ್ಭಗಳಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲುತ್ತಾರೆ. ಆ ಸಂದರ್ಭಗಳಲ್ಲಿ ಅವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅವರನ್ನು ಕೆಲಸದಿಂದಲೇ ತೆಗೆದುಹಾಕಿದರೆ ಹೇಗೆ? ಎಂದು ನ್ಯಾಯಪೀಠ, ಮಧ್ಯಪ್ರದೇಶದ ಆರು ನ್ಯಾಯಾಧೀಶೆಯರ ವಜಾ ಆದೇಶಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿತು. ಪುರುಷ ನ್ಯಾಯಾಧೀಶರು ಮತ್ತು ನ್ಯಾಯಾಂಗ ಅಧಿಕಾರಿಗಳಿಗೆ ಇದೇ ಬಗೆಯ ಮಾನದಂಡವಿದ್ದರೆ ಆಗ ಏನಾಗುತ್ತದೆ ಎಂಬುದನ್ನು ನೋಡೋಣ ಎಂದು ಆಕ್ಷೇಪ ವ್ಯಕ್ತಪಡಿಸಿದ ನ್ಯಾ. ನಾಗರತ್ನ, ನ್ಯಾಯಾಧೀಶೆಯರು ಮಾನಸಿಕವಾಗಿ ಮತ್ತು ದೈಹಿಕವಾಗಿ ಬಳಲುತ್ತಿರುವ ಸಂದರ್ಭದಲ್ಲಿ ಇಂತಿಷ್ಟೇ ಪ್ರಕರಣ ವಿಲೇವಾರಿ ಮಾಡಬೇಕು ಎಂದು ಅಳತೆಗೋಲು ಹಾಕಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಪ್ರಕರಣವನ್ನು ಸಹ ನಾವು ಸುದೀರ್ಘವಾಗಿ ಆಲಿಸುತ್ತಿದ್ದೇವೆ. ಹಾಗೆಂದು ವಕೀಲರು ಅಥವಾ ನ್ಯಾಯಾಲಯ ವಿಳಂಬ ಮಾಡುತ್ತಿದೆ ಎಂದು ಹೇಳಲು ಸಾಧ್ಯವೇ..? ಅದರಲ್ಲಿಯೂ ಮಹಿಳಾ ನ್ಯಾಯಾಧೀಶರು ಮಾನಸಿಕವಾಗಿ ಮತ್ತು ದೈಹಿಕವಾಗಿ ಬಹಳ ಬಳಲಿರುತ್ತಾರೆ. ಅವರ ನ್ಯಾಯಪ್ರಕ್ರಿಯೆ ನಿಧಾನ ಎಂದು ಅವರನ್ನು ನೀವು ಹೀಗೆ ಮನೆಗೆ ಕಳುಹಿಸಬಹುದೇ..? ಪುರುಷರಿಗೂ ಇದೇ ಮಾನದಂಡ ಇರಲಿ. ಆಗ ಏನು ನಡೆಯುತ್ತದೆ ಎಂಬುದನ್ನು ನಮಗೆ ಗೊತ್ತಿದೆ. ಜಿಲ್ಲಾ ನ್ಯಾಯಾಂಗಕ್ಕೆ ಪ್ರಕರಣ ವಿಲೇವಾರಿಯ ಟಾರ್ಗೆಟ್ ನೀಡಲು ಹೇಗೆ ಸಾಧ್ಯ ಎಂದು ನ್ಯಾಯಮೂರ್ತಿ ನಾಗರತ್ನ ಖಾರವಾಗಿ ಪ್ರಶ್ನಿಸಿದರು.

ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿ ಹಿರಿಯ ವಕೀಲರಾದ ಗೌರವ್ ಅಗರ್ವಾಲ್ ನ್ಯಾಯಪೀಠಕ್ಕೆ ನೆರವು ನೀಡಿದ್ದು, ಮಹಿಳಾ ನ್ಯಾಯಾಧೀಶರ ಪರ ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಹಾಗೂ ಆರ್.ವಸಂತ್ ವಾದ ಮಂಡಿಸಿದ್ದಾರೆ. 

ಪ್ರಕರಣದ ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನ್ಯಾಯಪೀಠ ಡಿಸೆಂಬರ್ 12ಕ್ಕೆ ಮುಂದೂಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.