23/12/2024

Law Guide Kannada

Online Guide

ಹೊರಗುತ್ತಿಗೆ ನೌಕರರ ಸೇವೆಗೆ ಅಂಕ ನಿರಾಕರಣೆ, ಸಂವಿಧಾನದ ಹೊಣೆಗೆ ವಿರುದ್ದವಾದದು – ಸುಪ್ರೀಂಕೋರ್ಟ್

ನವದೆಹಲಿ: ಸರ್ಕಾರಿ ಇಲಾಖೆಯ ಹೊರಗುತ್ತಿಗೆ ಸಿಬ್ಬಂದಿಯ ಸೇವಾ ಅನುಭವಕ್ಕೆ ಅಂಕ ನೀಡಲು ನಿರಾಕರಿಸುವುದು ದುರ್ಬಲರಿಗೆ ಸಾಮಾಜಿಕ ನ್ಯಾಯ ಕೊಡಿಸುವ ಹಾಗೂ ಸಮಾನತೆಯನ್ನು ಖಾತರಿಪಡಿಸುವ ಸಂವಿಧಾನಿಕ ಹೊಣೆಗೆ ವಿರುದ್ಧವಾಗಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಮೋನಿಕಾ ಎಂಬುವವರಿಗೆ 0.5ರಷ್ಟು ಅಂಕ ನೀಡಿ ಅವರನ್ನು ಗುಮಾಸ್ತ ಹುದ್ದೆಗೆ ನೇಮಕಾತಿ ಮಾಡಲು ಪರಿಗಣಿಸಬೇಕು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿತ್ತು. ಇದನ್ನು ಹೈಕೋರ್ಟ್ ವಿಭಾಗೀಯ ಪೀಠ ಎತ್ತಿ ಹಿಡಿದಿತ್ತು.

ವಿಭಾಗೀಯ ಪೀಠದ ಆದೇಶವನ್ನು ಪ್ರಶ್ನಿಸಿ ಹರಿಯಾಣದ ಚೌಧರಿ ಚರಣ್ ಸಿಂಗ್ ಹರಿಯಾಣ ಕೃಷಿ ವಿಶ್ವವಿದ್ಯಾನಿಲಯವು ಸುಪ್ರೀಂ ಕೋರ್ಟ್ನಲ್ಲಿ ಮೆಟ್ಟಿಲೇರಿತ್ತು. ಆದರೆ ಅದರೆ ವಿಶ್ವವಿದ್ಯಾನಿಲಯ ಸಲ್ಲಿಸಿದ್ದ ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ನ್ಯಾ. ದೀಪಾಂಕರ್ ದತ್ತ ಮತ್ತು ನ್ಯಾ. ಆರ್. ಮಹಾದೇವನ್ ಅವರಿದ್ದ ವಿಭಾಗೀಯ ಪೀಠವು , ಸರ್ಕಾರಿ ಇಲಾಖೆಯ ಹೊರಗುತ್ತಿಗೆ ಸಿಬ್ಬಂದಿಯ ಕೆಲಸದ ಅನುಭವವನ್ನು ಗುರುತಿಸಲು ನಿರಾಕರಿಸುವುದು, ದೇಶದ ಸಂವಿಧಾನ ನೀಡಿದ ಸಮಾನತೆ ಮತ್ತು ಸಾಮಾಜಿಕ ನ್ಯಾಯ ತತ್ವಕ್ಕೆ ವಿರುದ್ಧವಾಗಿದೆ ಎಂದು ಐತಿಹಾಸಿಕ ತೀರ್ಪು ನೀಡಿ ಅರ್ಜಿಯನ್ನು ವಜಾಗೊಳಿಸಿದೆ.

ಮಹಿಳಾ ಅಭ್ಯರ್ಥಿಯನ್ನು ಈ ಹಿಂದೆ ಹೊರಗುತ್ತಿಗೆ ನಿಯಮಗಳ ಅಡಿಯಲ್ಲಿ ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು. ಅವರನ್ನು ಖಾಯಂ ಆಧಾರದಲ್ಲಿ ನೇಮಕ ಮಾಡಿಕೊಂಡಿರಲಿಲ್ಲ. ಅವರ ಕೆಲಸದ ಅನುಭವವನ್ನು ಮಂಜೂರಾದ ಹುದ್ದೆಯಲ್ಲಿನ ಕೆಲಸದ ಅನುಭವದ ಜೊತೆಗೆ ಹೋಲಿಸಲಾಗದು ಎಂದು ವಿಶ್ವವಿದ್ಯಾನಿಲಯವು ಹೇಳಿತ್ತು.

ಆದರೆ ಈ ಕುರಿತು ತೀರ್ಪು ಪ್ರಕಟಿಸಿರುವ ಸುಪ್ರೀಂಕೋರ್ಟ್ ವಿಭಾಗೀಯ ಪೀಠ, ವ್ಯಕ್ತಿಯೊಬ್ಬರು ಮಂಜೂರಾದ ಹುದ್ದೆಯಲ್ಲಿ ಕೆಲಸ ಮಾಡಿಲ್ಲ, ಅವರು ಹೊರಗುತ್ತಿಗೆ ಏಜೆನ್ಸಿಯೊಂದರ ಮೂಲಕ ಕೆಲಸ ಮಾಡುತ್ತಿದ್ದರು ಎಂಬ ಕಾರಣಕ್ಕೆ ಅವರ ಅನುಭವಕ್ಕೆ ಅಂಕ ನೀಡಲು ನಿರಾಕರಿಸುವುದು ದುರ್ಬಲರಿಗೆ ಸಾಮಾಜಿಕ ನ್ಯಾಯ ಕೊಡಿಸುವ ಹಾಗೂ ಸಮಾನತೆಯನ್ನು ಖಾತರಿಪಡಿಸುವ ಸಂವಿಧಾನಿಕ ಹೊಣೆಗೆ ವಿರುದ್ಧವಾಗಿದೆ. ಅರ್ಹ ಅಭ್ಯರ್ಥಿಗಳಲ್ಲಿ ಅನುಭವ ಹೊಂದಿರುವವರು ಹಾಗೂ ಇತರ ಮಾನದಂಡಗಳಿಗೆ ಅನುಗುಣವಾಗಿ ಸೂಕ್ತರು ಯಾರು ಎಂಬುದನ್ನು ಕಂಡುಕೊಳ್ಳುವುದು ಆಯ್ಕೆ ಪ್ರಕ್ರಿಯೆಯಲ್ಲಿ ಆದ್ಯತೆ ಪಡೆಯಬೇಕು. ಸೂಕ್ತ ಅಭ್ಯರ್ಥಿಗಳ ಪೈಕಿ ಹೆಚ್ಚು ಪ್ರತಿಭಾವಂತರನ್ನು ನೇಮಕ ಮಾಡಿಕೊಳ್ಳಬೇಕು ಎಂದು ನ್ಯಾಯಪೀಠ ಸೂಚಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.