05/01/2025

Law Guide Kannada

Online Guide

ವಜಾಗೊಂಡ ವೈದ್ಯನ ಮರುನಿಯುಕ್ತಿ : ಹೈಕೋರ್ಟ್ ಆದೇಶ ರದ್ದುಗೊಳಿಸಿದ ಸುಪ್ರೀಂಕೋರ್ಟ್

ನವದೆಹಲಿ: ಸ್ವಯಂ ನಿವೃತ್ತಿ ಅರ್ಜಿ ಸಲ್ಲಿಸಿ ಬಳಿಕ ಅನಧಿಕೃತವಾಗಿ ಸೇವೆಗೆ ಗೈರು ಹಾಜರಾದ ಸರ್ಕಾರಿ ವೈದ್ಯರನ್ನು ಮರು ನಿಯುಕ್ತಿಗೊಳಿಸಿದ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ್ ಓಕಾ ಮತ್ತು ಆಗಸ್ಟಿನ್ ಜಾರ್ಜ್ ಮಾಸಿಹ್ ಒಳಗೊಂಡ ವಿಭಾಗೀಯ ನ್ಯಾಯ ಪೀಠವು ಈ ಮಹತ್ತ್ವದ ತೀರ್ಪನ್ನು ನೀಡಿದೆ. ಉತ್ತರ ಪ್ರದೇಶ ರಾಜ್ಯ ವಿರುದ್ಧ ಸಂದೀಪ್ ಅಗರ್ವಾಲ್ ಮತ್ತಿತರ ವೈದರು ಸಲ್ಲಿಸಿದ ಪ್ರತ್ಯೇಕ ರಿಟ್ ಪ್ರಕರಣಗಳಲ್ಲಿ ಈ ತೀರ್ಪು ಪ್ರಕಟಿಸಿದೆ.

ಏನಿದು ಪ್ರಕರಣ…
ಉತ್ತರ ಪ್ರದೇಶ ರಾಜ್ಯದ ನಾಗರಿಕ ಸೇವೆಗೆ ಸೇರಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ನೂರಾರು ವೈದ್ಯರು ಏಕಕಾಲದಲ್ಲಿ ರಾಜ್ಯಾದ್ಯಂತ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದರು. ಸ್ವಯಂ ನಿವೃತ್ತಿ ಕೋರಿ ತಾವು ಸಲ್ಲಿಸಿದ ಅರ್ಜಿಯ ಕುರಿತು ಯಾವುದೇ ಆದೇಶ ಹೊರಡಿಸುವ ಮೊದಲೇ ರಿಟ್ ಅರ್ಜಿದಾರ ವೈದ್ಯರ ಸಹಿತ 400ಕ್ಕೂ ಅಧಿಕ ವೈದ್ಯರು ತಮ್ಮ ಸೇವೆಗೆ ಅನಧಿಕೃತವಾಗಿ ಗೈರು ಹಾಜರಾಗಿದ್ದರು.

ವೈದ್ಯರುಗಳ ಸಾಮೂಹಿಕ ಅನಧಿಕೃತ ಗೈರುಹಾಜರಿಯನ್ನು ಗಂಭೀರವಾಗಿ ಪರಿಗಣಿಸಿದ ಉತ್ತರ ಪ್ರದೇಶ ಸರ್ಕಾರವು ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ನಿರ್ದೇಶಿನ ನೀಡಿತ್ತು. ಆದರೆ ವೈದ್ಯರು ಸರಕಾರದ ಸೂಚನೆಯನ್ನು ಪಾಲಿಸಲಿಲ್ಲ. ಹೀಗಾಗಿ ವೈದ್ಯರ ವಿರುದ್ಧ ಸರಕಾರವು ಶಿಸ್ತು ಕ್ರಮಕ್ಕೆ ಮುಂದಾಯಿತು.

ದಿನಾಂಕ 3.5,2010 ರಂದು ಸಂವಿಧಾನದ 311 (2) ನೇ ವಿಧಿಯು ಎರಡನೆಯ ನಿಬಂಧನೆಯ ಶರತ್ತು (ಬಿ) ಅಡಿಯಲ್ಲಿ ಅಧಿಕಾರವನ್ನು ಚಲಾಯಿಸಿ ರಿಟ್ ಅರ್ಜಿದಾರರ ಸಹಿತ ಅನಧಿಕೃತವಾಗಿ ಗೈರು ಹಾಜರಾದ ನಾಲ್ಕೂರಕ್ಕೂ ಹೆಚ್ಚು ಇತರ ವೈದ್ಯರನ್ನು ಸೇವೆಯಿಂದ ವಜಾ ಗೊಳಿಸಲಾಯಿತು.

ಸರಕಾರದ ಆದೇಶದಿಂದ ಬಾಧಿತರಾದ ಕೆಲವು ವೈದ್ಯರು ಅಲಹಾಬಾದ್ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಕೆ ಮಾಡಿದರು. ರಿಟ್ ಅರ್ಜಿದಾರರಾದ ವೈದ್ಯರ ಪರ ವಾದ ಮಂಡಿಸಿದ ವಕೀಲರು, ನಿಯಮಾನುಸಾರ ಇಲಾಖಾ ವಿಚಾರಣೆ ನಡೆಸದೆ ಸಂವಿಧಾನದ 311(2) ನೇ ವಿಧಿಯು ಎರಡನೆಯ ನಿಬಂಧನೆಯ ಷರತ್ತು (ಬಿ) ಅಡಿಯಲ್ಲಿ ಪ್ರದತ್ತ ಅಧಿಕಾರ ಚಲಾಯಿಸಿ ಸರಕಾರ ನಮ್ಮನ್ನು ಸೇವೆಯಿಂದ ವಜಾಗೊಳಿಸಿರುವುದು ಕಾನೂನುನಡಿ ಊರ್ಜಿತವಲ್ಲ, ಅರ್ಜಿದಾರ ವೈದ್ಯರು ಸ್ವಯಂ ನಿವೃತ್ತಿ ಕೋರಿ ಸಲ್ಲಿಸಿದ ಅರ್ಜಿಗಳ ಕುರಿತು ಸರ್ಕಾರ ಯಾವುದೇ ಆದೇಶ ನೀಡದೆ ಇರುವುದರಿಂದ ತಾವು ಅನಧಿಕೃತವಾಗಿ ಗೈರು ಹಾಜರಾಗಿದ್ದೇವೆ ಎಂದು ಹೇಳಿದರು.

ಸ್ವಯಂ ನಿವೃತ್ತಿ ಅರ್ಜಿ ಕುರಿತಾದ ಸರಕಾರದ ನಿರ್ಧಾರವನ್ನು ತಮಗೆ ತಿಳಿಸಿಲ್ಲ. ಆದುದರಿಂದ ತಮ್ಮನ್ನು ಸೇವೆಯಿಂದ ವಜಾಗೊಳಿಸಿದ ಆದೇಶವನ್ನು ರದ್ದು ಪಡಿಸಿ ಎಲ್ಲಾ ಸೇವಾ ಸೌಲಭ್ಯಗಳೊಂದಿಗೆ ಮರುನಿಯುಕ್ತಿ ಮಾಡಬೇಕಾಗಿ ಪ್ರಾರ್ಧಿಸಿದರು.

ಉತ್ತರ ಪ್ರದೇಶ ರಾಜ್ಯ ಸರಕಾರದ ಪರವಾಗಿ ವಾದ ಮಂಡಿಸಿದ ವಕೀಲರು, ಸ್ವಯಂ ನಿವೃತ್ತಿ ಕೋರಿ ಅರ್ಜಿ ಸಲ್ಲಿಸಿದ ಬಳಿಕ ಸದರಿ ಅರ್ಜಿಯು ಪುರಸ್ಕೃತವಾಗಿದೆಯೇ ಅಥವಾ ತಿರಸ್ಕೃತವಾಗಿದೆಯೇ ಎಂಬುದನ್ನು ತಿಳಿದುಕೊಳ್ಳುವ ಮೊದಲೇ ತಮ್ಮ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿದ್ದಾರೆ. ರಾಜ್ಯಾದ್ಯಂತ ಸಾವಿರಾರು ವೈದ್ಯರು ಏಕಕಾಲದಲ್ಲಿ ಗೈರುಹಾಜರಾಗಿರುವುದನ್ನು ಗಮನಿಸಿದರೆ ಕರ್ತವ್ಯ ಲೋಪ ಎಸಗಿದ ವೈದ್ಯರ ವಿರುದ್ಧ ನಿಯಮಾನಸಾರ ಶಿಸ್ತು ಕ್ರಮದ ವಿಚಾರಣೆ ನಡೆಸುವುದು ಅಪ್ರಾಯೋಗಿಕ ಎಂಬುದು ಮೇಲ್ನೋಟಿಕ್ಕೆ ಕಂಡುಬರುತ್ತದೆ. ಆದುದರಿಂದ ರಿಟ್ ಅರ್ಜಿಯನ್ನು ವಜಾ ಮಾಡುವಂತೆ ಹೈಕೋರ್ಟ್ ಗೆ ಮನವಿ ಮಾಡಿದರು.

ಎರಡು ಕಡೆ ವಾದವನ್ನ ಆಲಿಸಿದಅಲಹಾಬಾದ್ ಹೈಕೋರ್ಟ್ ದಿನಾಂಕ 17.4.2014 ರ ತೀರ್ಪಿನ ಮೂಲಕ ರಿಟ್ ಅರ್ಜಿಯನ್ನು ಪುರಸ್ಕರಿಸಿತು. ಅರ್ಜಿದಾರ ವೈದ್ಯರನ್ನು ಸೇವೆಯಿಂದ ವಜಾ ಗೊಳಿಸಿದ ಆದೇಶವನ್ನು ರದ್ದು ಪಡಿಸಿ ಎಲ್ಲಾ ಸೇವಾ ಸೌಲಭ್ಯಗಳೊಂದಿಗೆ ಅರ್ಜಿದಾರರನ್ನು ಸೇವೆಗೆ ಮರುನಿಯುಕ್ತಿಗೊಳಿಸಬೇಕೆಂದು ಆದೇಶ ಹೊರಡಿಸಿತು ಹಾಗೂ ಸ್ವಯಂ ನಿವೃತ್ತಿ ಕೋರಿ ಅರ್ಜಿದಾರರು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲು ಸರಕಾರಕ್ಕೆ, ನಿರ್ದೇಶಿಸಿತು.

ಅಲಹಾಬಾದ್ ಹೈಕೋರ್ಟಿನ ಆದೇಶ ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ..
ಅಲಹಾಬಾದ್ ಹೈಕೋರ್ಟ್ ನ ಆದೇಶವನ್ನ ಪ್ರಶ್ನಿಸಿ ಉತ್ತರ ಪ್ರದೇಶ ರಾಜ್ಯ ಸರ್ಕಾರವು ಸುಪ್ರಿಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತು. ಮೇಲ್ಮನವಿದಾರರ ಪರ ಈ ಕೆಳಗಿನ ವಾದ ಮಂಡಿಸಲಾಯಿತು ಎದುರುದಾರರ ವೈದ್ಯರು ಇತರ ನೂರಾರು ವೈದ್ಯರುಗಳ ಜೊತೆ ಎರಡರಿಂದ ಮೂರು ವರ್ಷಗಳ ಕಾಲ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿದ್ದಾರೆ. ಸಾವಿರಾರು ವೈದ್ಯರು ಸರಕಾರದ ಆದೇಶವನ್ನು ಧಿಕ್ಕರಿಸಿ ಕರ್ತವ್ಯಕ್ಕೆ ಹಾಜರಾಗದೆ ಅನಧಿಕೃತವಾಗಿರುವುದನ್ನು ಗಮನಿಸಿದರೆ ಕರ್ತವ್ಯ ಲೋಪ ಎಸಗಿದ ವೈದ್ಯರ ವಿರುದ್ಧ ಸಾಮೂಹಿಕವಾಗಿ ಶಿಸ್ತು ತನಿಖೆ ನಡೆಸುವುದು ಕಾರ್ಯ ಸಾಧು ಅಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಮೂಲಭೂತವಾಗಿ ಸ್ವಯಂ ನಿವೃತ್ತಿ ಕೋರಿ ಸಲ್ಲಿಸಿದ ಅರ್ಜಿಗಳಲ್ಲಿ, ಹಲವಾರು ಕುಂದು ಕೊರತೆಗಳಿದ್ದವು. ಅಂತಹ ಅರ್ಜಿಗಳಲ್ಲಿ, ಎದುರುದಾರರ ನಡವಳಿಕೆಯನ್ನು ಗಮನಿಸಿದಾಗ ಮರು ನಿಯುಕ್ತಿ ಆದೇಶವನ್ನು ಹೊರಡಿಸಲು ಕಾನೂನಿನಡಿ ಅವಕಾಶವಿಲ್ಲ. ಆದುದರಿಂದ ಹೈಕೋರ್ಟಿನ ಆಕ್ಷೇಪಾರ್ಹ ಆದೇಶಗಳು ಕಾನೂನಿನಲ್ಲಿ ಊರ್ಜಿತವಲ್ಲ ಎಂದು ವಾದಿಸಿತು.

ವೈದ್ಯರ ಪರ ವಾದ ಮಂಡಿಸಿದ ವಕೀಲರು, ವಿನಾಕಾರಣ ದೀರ್ಘಕಾಲದವರೆಗೆ ಬಾಕಿ ಇರಿಸಿದ್ದಾರೆ ಸದರಿ ಅರ್ಜಿಗಳ ಬಗ್ಗೆ ತೆಗೆದುಕೊಂಡ ನಿರ್ಧಾರವನ್ನು ಎದುರುದಾರರಿಗೆ ತಿಳಿಸಿಲ್ಲ. ಆದುದರಿಂದ ಸೇವೆಯಿಂದ ವಜಾಗೊಳಿಸಿದ ಆದೇಶ ಕಾನೂನುಬಾಹಿರವಾಗಿದೆ ಎಂದರು.

ಉಭಯ ಪಕ್ಷಕಾರರ ವಾದವನ್ನು ಆಲಿಸಿದ ಸುಪ್ರೀಂಕೋರ್ಟ್ ವಿಭಾಗೀಯ ನ್ಯಾಯ ಪೀಠವು ಸ್ವಯಂ ನಿವೃತ್ತಿಯ ಅರ್ಜಿಗಳನ್ನು ಸೂಕ್ತ ಸಮಯದಲ್ಲಿ ನಿರ್ಧರಿಸಿಲ್ಲ ಎಂಬುದು ಕಂಡುಬಂದಾಗ ಕಾನೂನಿನ ಪ್ರಕಾರ ಪರಿಹಾರಗಳನ್ನು ಪಡೆಯುವ ಬದಲು ಅನಧಿಕೃತವಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿರುವ ವೈದ್ಯರ ನಡವಳಿಕೆಯನ್ನು ಸಮರ್ಥಿಸಲು ಸಾಧ್ಯವಿಲ್ಲ. ಅಂತೆಯೇ ಸ್ವಯಂ ನಿವೃತ್ತಿ ಅರ್ಜಿಗಳನ್ನು ಕೃಷ್ಣಕಾಲದಲ್ಲಿ ವಿಲೇವಾರಿ ಮಾಡದ ಸರಕಾರದ ನಡವಳಿಕೆಯನ್ನು ಬೆಂಬಲಿಸಲಾಗುವುದಿಲ್ಲ. ಆದುದರಿಂದ ಸ್ವಯಂ ನಿವೃತ್ತಿಯ ಅರ್ಜಿಗಳನ್ನು ನಿರ್ಧರಿಸಲು ಮೇಲ್ಮನವಿದಾರರಿಗೆ ನಿರ್ದೇಶಿಸುವುದು ಅತ್ಯಂತ ಸೂಕ್ತವಾದ ಆದೇಶವಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಅನಧಿಕೃತವಾಗಿ ಹಲವಾರು ವರ್ಷಗಳವರೆಗೆ ಕರ್ತವ್ಯಕ್ಕೆ ಗೈರು ಹಾಜರಾದ ವೈದ್ಯರ ನಡವಳಿಕೆಯನ್ನು ಪರಿಗಣಿಸಿ ಮರುಸ್ಥಾಪನೆಯ ಆದೇಶವು ಸೂಕ್ತವಲ್ಲ ಎಂಬ ತೀರ್ಮಾನಕ್ಕೆ ಬಂದು ಅಲಹಾಬಾದ್ ಹೈಕೋರ್ಟಿನ ಸದರಿ ಆದೇಶವನ್ನು ರದ್ದು ಪಡಿಸಿತು. ದಿನಾಂಕ 3.5.2010 ರಂದು ವೈದ್ಯರನ್ನು ಸೇವೆಯಿಂದ ವಜಾಗೊಳಿಸಿದ ಆದೇಶವನ್ನು ರದ್ದುಪಡಿಸಿ ಸದರಿ ದಿನಾಂಕದಿಂದ ಜಾರಿಗೆ ಬರುವಂತೆ ಸ್ವಯಂ ನಿವೃತ್ತಿ ಅರ್ಜಿಯನ್ನು ಸ್ವೀಕರಿಸಲು ನಿರ್ದೇಶಿಸಿ , ಸದರಿ ದಿನಾಂಕದಿಂದ ಅನ್ವಯವಾಗುವಂತೆ ಪಿಂಚಣೆ ಸೌಲಭ್ಯಗಳನ್ನು ನೀಡುವಂತೆ ಸುಪ್ರೀಂಕೋರ್ಟ್ ವಿಭಾಗೀಯ ಪೀಠ ಸೂಚಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.