ಉದ್ಯೋಗದ ಆಮಿಷವೊಡ್ಡಿ ಅತ್ಯಾಚಾರ, ಮತಾಂತರಕ್ಕೆ ಯತ್ನ: ಆರೋಪಿ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್
ಬೆಂಗಳೂರು: ವಿವಾಹಿತ ಮಹಿಳೆಗೆ ಕೆಲಸ ಕೊಡಿಸುವ ಆಮೀಷವೊಡ್ಡಿ ಅತ್ಯಾಚಾರವೆಸಗಿ ನಂತರ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಿದ್ದ ಆರೋಪಿಯ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗ್ರಾಮವೊಂದರ ಕೃಷಿಕ ರಫೀಕ್ ಅಕಾ ಲಾಲಸಾಬ್ ಬೇಪಾರಿ (33) ಎಂಬಾತ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಮೇ 2024 ರಲ್ಲಿ ಬೆಳಗಾವಿಯ ಸೆಷನ್ಸ್ ನ್ಯಾಯಾಲಯದಲ್ಲಿ ತನ್ನ ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಆರೋಪಿಯು ಹೈಕೋರ್ಟ್ಗೆ ಮೆಟ್ಟಿಲೇರಿದ್ದನು. ಆತನ ವಿರುದ್ಧ ಐಪಿಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ರಕ್ಷಣೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹೈಕೋರ್ಟ್ ನಲ್ಲೂ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದು, ಮುಗ್ಧ ಮತ್ತು ಬಡ ಮಹಿಳೆಯರನ್ನು ಪ್ರೇರೇಪಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರಿಸುವ ಕ್ರಮವು ಗಂಭೀರ ಬೆಳವಣಿಗೆಯಾಗಿದೆ. ಆದ್ದರಿಂದ ಇಂತಹ ಚಟುವಟಿಕೆಗಳನ್ನು ನಿಯಂತ್ರಿಸಲು ಮತ್ತು ಸಮಾಜದ ಮುಗ್ಧ ಮತ್ತು ಹಿಂದುಳಿದ ಮಹಿಳೆಯರು ಹಾಗ ಮಕ್ಕಳನ್ನು ರಕ್ಷಿಸಲು ನ್ಯಾಯಾಲಯಗಳು ಜಾಗೃತವಾಗಿವೆ ಎಂಬ ಸಂದೇಶವನ್ನು ಸಮಾಜಕ್ಕೆ ನೀಡುವುದು ಅಗತ್ಯವಾಗಿದೆ ಎಂದು ನ್ಯಾಯಮೂರ್ತಿ ರಾಚಯ್ಯ ಅಭಿಪ್ರಾಯ ಪಟ್ಟಿದ್ದಾರೆ.
ಘಟನೆ ವಿವರ…
28 ವರ್ಷದ ವಿವಾಹಿತ ಮಹಿಳೆ ಸಂತ್ರಸ್ತೆ 2013ರಲ್ಲಿ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಗಂಡನ ಮನೆಯಲ್ಲಿ ಚಿಲ್ಲರೆ ಅಂಗಡಿಯಿತ್ತು. ಅತ್ತೆ ಅಂಗಡಿ ನೋಡಿಕೊಳ್ಳುತ್ತಿದ್ದರು, ಅತ್ತೆ ಮನೆಗೆ ಊಟಕ್ಕೆ ಹೋದ ಸಮಯದಲ್ಲಿ ಸಂತ್ರಸ್ತೆ ಮಹಿಳೆ ಚಿಲ್ಲರೆ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದಳು. ಅಂಗಡಿಗೆ ಬರುತ್ತಿದ್ದ ರಫೀಕ್ ಸಂತ್ರಸ್ತೆಗೆ ಹತ್ತಿರವಾಗಿದ್ದ ನಂತರ ಆಕೆಯ ಮೊಬೈಲ್ ನಂಬರ್ ಕೇಳಿದ್ದು, ಆದರೆ ಆಕೆ ನಂಬರ್ ನೀಡಲು ನಿರಾಕರಿಸಿದ್ದಾಳೆ. ನಂತರ, ಅವನು ಅವಳ ನೆರೆಹೊರೆಯವರಿಂದ ಅವಳ ಸಂಖ್ಯೆಯನ್ನು ತೆಗೆದುಕೊಂಡು ಆಗಾಗ್ಗೆ ಮಾತನಾಡುತ್ತಿದ್ದ. ಜೊತೆಗೆ ಅವಳಿಗೆ ಬ್ಯಾಂಕ್ ಉದ್ಯೋಗವನ್ನು ಕೊಡಿಸುವ ಆಮೀಷವೊಡ್ಡಿದ್ದ. ಕೊನೆಗೆ ಮಹಿಳೆಯೊಂದಿಗೆ ರಫೀಕ್ ಅನೈತಿಕ ಸಂಬಂಧ ಆರಂಭಿಸಿದ್ದು ಆಕೆಯ ಪತಿಗೆ ತಿಳಿಯಿತು. ವಿಷಯ ತಿಳಿದ ಪತಿ ಪತ್ನಿಯನ್ನ 2021 ರಲ್ಲಿ ಆಕೆಯ ಪೋಷಕರ ಮನೆಗೆ ಕಳುಹಿಸಿದ್ದನು. ಇದಾದ ಬಳಿಕ ಗ್ರಾಮದ ಹಿರಿಯರ ಮಧ್ಯಸ್ಥಿಕೆಯಿಂದ, ಮಹಿಳೆ ತನ್ನ ಪತಿಯೊಂದಿಗೆ ಮತ್ತೆ ಸೇರಿಕೊಂಡಳು.
ಆದರೂ ಸಹ ಆರೋಪಿಯು ರಫೀಕ್ ಅಕಾ ಲಾಲಸಾಬ್ ಸುಮ್ಮನೆ ಕೂರಲಿಲ್ಲ. ಆಕೆಯನ್ನು ಬ್ಲಾಕ್ಮೇಲ್ ಮಾಡಲು ಆರಂಭಿಸಿದ್ದ, ಆಕೆ ತನಗೆ ಲೈಂಗಿಕ ಸುಖ ನೀಡದಿದ್ದರೆ ಆಕೆಯ ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂಬ ಆರೋಪ ಕೇಳಿ ಬಂದಿತ್ತು. ನಂತರ ಮಹಿಳೆಯನ್ನು ಆಕೆಯ ಗ್ರಾಮದಿಂದ ಬೆಳಗಾವಿಯ ಸ್ವಾದರ್ ಕೇಂದ್ರಕ್ಕೆ ಕರೆತಂದಿದ್ದು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ