ಪತಿ-ಪತ್ನಿ ನಡುವಿನ ಜಗಳ ಅಪರಾಧ ಕೃತ್ಯವಾಗಲ್ಲ: ಶಿಕ್ಷೆ ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದ ಹೈಕೋರ್ಟ್
ಬೆಂಗಳೂರು : ಗಂಡ-ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಪತಿ-ಪತ್ನಿ ಸಂಬಂಧ ಬಹಳ ಮಧುರವಾದದ್ದು.ಆದರೆ ಇತ್ತೀಚಿನ ದಿನಗಳಲ್ಲಿ ಪತಿ ಪತ್ನಿಯ ನಡುವೆ ಜಗಳ ಗಲಾಟೆಗಳು ಹೆಚ್ಚುತ್ತಿದ್ದು, ಇದು ಕೊಲೆ, ಆತ್ಮಹತ್ಯೆಯಲ್ಲಿ ಕೊನೆಗೊಳ್ಳುವ ಸಾಧ್ಯತೆಗಳು ಹೆಚ್ಚಾಗುತ್ತಿದೆ. ಈ ಮಧ್ಯೆ ಇಂತಹ ಘಟನೆಗಳು ಅಪರಾಧ ಕೃತ್ಯವೋ..? ಕ್ರೌರ್ಯವೋ..? ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ತೀರ್ಪನ್ನ ನೀಡಿದೆ.
ಹೌದು, ಪತಿ-ಪತ್ನಿ ನಡುವಿನ ಜಗಳವು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 498 ಅಡಿ ಕ್ರೌರ್ಯ ಮತ್ತು ಕಿರುಕುಳದ ಅಪರಾಧ ಕೃತ್ಯವಾಗುವುದಿಲ್ಲ. ಕ್ರೌರ್ಯ ಎಂದರೆ ಉದ್ದೇಶ ಪೂರ್ವಕ ಕೃತ್ಯವಾಗಿದ್ದು, ಆತ್ಮಹತ್ಯೆಗೆ ಶರಣಾಗಲು ಅಥವಾ ಜೀವಕ್ಕೆ ಅಪಾಯ ತಂದು ಕೊಳ್ಳಲು ವಿವಾಹಿತ ಮಹಿಳೆಯನ್ನು ಪ್ರಚೋದಿಸಿಬೇಕಾಗಿರುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಪತ್ನಿಯ ಆತ್ಮಹತ್ಯೆ ಶರಣಾದ ಹಿನ್ನೆಲೆಯಲ್ಲಿ ಕ್ರೌರ್ಯ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧದಲ್ಲಿ ತಮ್ಮನ್ನು ದೋಷಿಯಾಗಿ ಪರಿಗಣಿಸಿ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಕೋರಿ ಮಡಿಕೇರಿ ತಾಲೂಕಿನ ಮುರ್ನಾಡ್ ಗ್ರಾಮದ ನಿವಾಸಿಗಳಾದ ಬಿ.ಎಸ್.ಜನಾರ್ದನ (52) ಮತ್ತು ಆತನ ತಾಯಿ ಬಿ.ಎಸ್.ಉಮಾವತಿ (73) ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ಈ ಅರ್ಜಿ ಪುರಸ್ಕರಿಸಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಅವರ ಪೀಠ , ಪತಿ-ಪತ್ನಿ ನಡುವಿನ ಜಗಳಗಳು ಐಪಿಸಿ ಸೆಕ್ಷನ್ 498 ಅಡಿಯಲ್ಲಿ ಕ್ರೌರ್ಯ ಮತ್ತು ಕಿರುಕುಳ ಅಪರಾಧ ಕೃತ್ಯವಾಗುವುದಿಲ್ಲ ಎಂದು ಮಹತ್ವದ ಆದೇಶವನ್ನ ನೀಡಿದೆ.
ಘಟನೆ ಹಿನ್ನೆಲೆ
1996ರಲ್ಲಿ ಸರಸ್ವತಿ ಎಂಬುವರನ್ನು ಜನಾರ್ದನ ವಿವಾಹವಾಗಿದ್ದರು. 1998ರ ಆ.4ರಂದು ಬೆಳಿಗ್ಗೆ 5.30ರ ಸಮಯದಲ್ಲಿ ಸರಸ್ವತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಪೊಲೀಸ್ ಪೇದೆ ಮುಂದೆ ಹೇಳಿಕೆ ನೀಡಿದ್ದ ಸರಸ್ವತಿ, ಪತಿ ತನ್ನ ಶೀಲ ಹಾಗೂ ನಿಷ್ಠೆಯನ್ನು ಶಂಕಿಸಿ, ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ಪತಿ ಜೊತೆಗೆ ಆಗಾಗ ಜಗಳ ನಡೆಯುತ್ತಿತ್ತು.ಹಿರಿಯರು ಬುದ್ದಿವಾದ ಹೇಳಿದ್ದರೂ ಪತಿ ನಡತೆ ಸುಧಾರಣೆ ಕಾಣಲಿಲ್ಲ. ಕಿರುಕುಳ ಮುಂದುವರಿಸಿದ್ದರು ಎಂದು ಪತ್ನಿ ಆರೋಪಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆ.6ರಂದು ಸರಸ್ವತಿ ಸಾವನ್ನಪ್ಪಿದ್ದರು. ಇದರಿಂದ ಪೊಲೀಸರು ಸರಸ್ವತಿಯ ಪತಿ ಜನಾರ್ದನ ಮತ್ತು ಅತ್ತೆ ಉಮಾವತಿ ವಿರುದ್ದ ದೂರು ದಾಖಲಿಸಿದ್ದರು. ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಮಡಿಕೇರಿ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯವು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧದಡಿ ಜನಾರ್ದನಗೆ ಏಳು ವರ್ಷ ಜೈಲು, ಅವರ ತಾಯಿಗೆ ನಾಲ್ಕು ವರ್ಷ ಕಠಿಣ ಸಜೆ ಮತ್ತು ತಲಾ ಒಂದು ಸಾವಿರ ರು. ದಂಡ ವಿಧಿಸಿತ್ತು. ಕ್ರೌರ್ಯ ಅಪರಾಧಕ್ಕೆ ಇಬ್ಬರಿಗೂ ತಲಾ ಒಂದು ವರ್ಷ ಕಠಿಣ ಸಜೆ ಮತ್ತು ಒಂದು ಸಾವಿರ ದಂಡ ವಿಧಿಸಿತ್ತು. ಈ ಆದೇಶ ರದ್ದು ಕೋರಿ ಈ ಆರೋಪಿಗಳು ಹೈಕೋರ್ಟ್ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್, ಪತ್ನಿಯ ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದ ಆರೋಪ ಜನಾರ್ದನ ಮೇಲಿದೆ. ಸರಸ್ವತಿ ಮಾಡುತ್ತಿದ್ದ ಮನೆ ಕೆಲಸ ತೃಪ್ತಿಕರವಾಗಿಲ್ಲಎಂದು ಆಕ್ಷೇಪಿಸುತ್ತಿದ್ದ ಆರೋಪ ಉಮಾವತಿ ಮೇಲಿದೆ. ಮೃತಳ ಹತ್ತಿರದ ಸಂಬಂಧಿಕರು ಹಾಗೂ ಪಕ್ಕದ ಮನೆಯವರು ನುಡಿದ ಸಾಕ್ಷ್ಯದ ಪ್ರಕಾರ ಸರಸ್ವತಿಗೆ ಪತಿ ಯಾವುದೇ ಕಿರುಕುಳ ನೀಡುತ್ತಿರಲಿಲ್ಲ ಹಾಗೂ ಕೆಟ್ಟದಾಗಿ ನಡೆಸಿಕೊಳ್ಳುತ್ತಿರಲಿಲ್ಲ. ಪತ್ನಿ-ಪತಿ ನಡುವೆ ಸೌಹಾರ್ದಯುತ ಸಂಬಂಧವಿತ್ತು ಎಂಬುದು ಸಾಬೀತಾಗುತ್ತದೆ.
ಆರೋಪಿಗಳು ಮೃತಳಿಗೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಸಾಕ್ಷಿಗಳಾದ ಮೃತಳ ಪೋಷಕರು, ಸಹೋದರ ಮತ್ತು ಸಹೋದರಿಯರು ನುಡಿದಿದ್ದ ಸುಳ್ಳು ಸಾಕ್ಷ್ಯ ಪರಿಗಣಿಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯದ ಕ್ರಮ ಬಾಹಿರವಾಗಿದೆ ಎಂದು ತೀರ್ಮಾನಿಸಿದ ಹೈಕೋರ್ಟ್ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಪೀಠ, ಆರೋಪಿಗಳಿಗೆ ವಿಧಿಸಿದ್ದ ಶಿಕ್ಷೆ ರದ್ದುಪಡಿಸಿತು.
ಪತ್ನಿಯ ಮೇಲೆ ಪತಿ ಹಾಗೂ ಕುಟುಂಬಸ್ಥರಿಂದ ಕ್ರೌರ್ಯ ನಡೆದಿರುವುದನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಬೇಕಾಗುತ್ತದೆ. ಎಂದರೆ ಉದ್ದೇಶಪೂರ್ವಕ ಕೃತ್ಯವಾಗಿದ್ದು, ಆತ್ಮಹತ್ಯೆ, ಗಂಭೀರ ಗಾಯ ಅಥವಾ ಜೀವಕ್ಕೆ ಅಪಾಯ ಮಾಡಿಕೊಳ್ಳಲು ಮಹಿಳೆಯನ್ನು ಪ್ರಚೋದಿಸಿರಬೇಕು. ಮಾನಸಿಕ ಕಿರುಕುಳ ಕೂಡ ಕ್ರೌರ್ಯದ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಪೀಠ ತಿಳಿಸಿದೆ.
ಐಪಿಸಿ ಸೆಕ್ಷನ್ 306 ಅಡಿ ಆತ್ಮಹತ್ಯೆಗೆ ಪ್ರಚೋದಿಸಿದ ಅಪರಾಧವಾಗಬೇಕೆಂದರೆ ಆರೋಪಿಯ ಕೃತ್ಯ ಆತ್ಮಹತ್ಯೆ ಮಾಡಿಕೊಳ್ಳಲು ನೇರ ಹಾಗೂ ಸಕ್ರಿಯ ಪಾತ್ರ ನಿರ್ವಹಿಸಿರಬೇಕು. ಆತ್ಮಹತ್ಯೆಗೆ ಪ್ರೇರೇಪಿಸಲು ಅಥವಾ ಸಹಾಯ ಮಾಡಲು ಆರೋಪಿಯ ಕಡೆಯಿಂದ ಸಕಾರಾತ್ಮಕ ಕೃತ್ಯವಿಲ್ಲದಿದ್ದರೆ, ಅದು ಕಾನೂನಿನ ಅಡಿಯಲ್ಲಿ ಅಪರಾಧವಾಗಿ ಉಳಿಯುವುದಿಲ್ಲ ಎಂದು ಪೀಠ ಅಭಿಪ್ರಾಯ ಪಟ್ಟಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ