23/12/2024

Law Guide Kannada

Online Guide

ಮರಣೋತ್ತರ ಸಂತಾನೋತ್ಪತ್ತಿ: ಮೃತ ವ್ಯಕ್ತಿಯ ಅಂಡಾಣು, ವೀರ್ಯ ಬಳಕೆ ಮಾಡುವ ಕುರಿತು ಹೈಕೋರ್ಟ್‌ ಮಹತ್ವದ ತೀರ್ಪು ಪ್ರಕಟ

ನವದೆಹಲಿ: ಮರಣೋತ್ತರ ಸಂತಾನೋತ್ಪತ್ತಿಗೆ ಮೃತ ವ್ಯಕ್ತಿಯ ಅಂಡಾಣು, ವೀರ್ಯ ಬಳಕೆ ಮಾಡುವ ಕುರಿತು ನವದೆಹಲಿ ಹೈಕೋರ್ಟ್‌ ಮಹತ್ವದ ತೀರ್ಪು ಪ್ರಕಟಿಸಿದೆ.

ಸಾವಿನ ನಂತರ ತನ್ನ ವೀರ್ಯವನ್ನು ಸಂತಾನೋತ್ಪತ್ತಿಗೆ ಬಳಸುವ ಕುರಿತು ಮೃತ ವ್ಯಕ್ತಿ ಪೂರ್ವಾನುಮತಿ ಕೊಟ್ಟಿದ್ದರೆ ಮಾತ್ರ ಆತ ವೀರ್ಯವನ್ನು ಆ ವ್ಯಕ್ತಿಯ ಪೋಷಕರಿಗೆ ಒಪ್ಪಿಸಬಹುದು ಎಂದು  ದೆಹಲಿ ಹೈಕೋರ್ಟ್‌ ನ್ಯಾ. ಪ್ರತಿಭಾ ಎಂ. ಸಿಂಗ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
2020ರಲ್ಲಿ ಕ್ಯಾನ್ಸರ್‌ನಿಂದ ಅಸ್ವಸ್ಥರಾಗಿದ್ದ ವ್ಯಕ್ತಿಯೊಬ್ಬರು ತನ್ನ 30ನೇ ವಯಸ್ಸಿನಲ್ಲಿ ಮೃತಪಟ್ಟಿದ್ದರು. ಮೃತ ವ್ಯಕ್ತಿಗೆ ಕೀಮೋಥೆರಪಿ ನೀಡುವ ಮುನ್ನ ವೈದ್ಯರ ಸಲಹೆಯಂತೆ ಸಂತಾನೋತ್ಪತ್ತಿಯ ಕಾರಣಕ್ಕಾಗಿ ಕ್ಯಾನ್ಸರ್ ರೋಗಿಯ ವೀರ್ಯವನ್ನು ಸಂಗ್ರಹಿಸಿಡಲಾಗಿತ್ತು. ಈ ಸಂಗ್ರಹಿತ ವೀರ್ಯವನ್ನು ನೀಡಲು ಆಸ್ಪತ್ರೆ ನಿರಾಕರಿಸಿತ್ತು.

ವ್ಯಕ್ತಿಯ ಮರಣದ ನಂತರ ತಮ್ಮ ವಂಶದ ಅಭಿವೃದ್ದಿಗೆ ಮಗನ ಮೃತ ದೇಹದಿಂದ ಸಂಗ್ರಹಿಸಿದ ವೀರ್ಯ ಬಳಸಲು ಆತನ ಪೋಷಕರು ಬಯಸಿದ್ದರು. ಆದರೆ, ನ್ಯಾಯಾಲಯದ ಆದೇಶ ಇಲ್ಲದೆ ಆಸ್ಪತ್ರೆ ವೀರ್ಯದ ಮಾದರಿ ನೀಡಲು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ನಿರ್ಧಾರವನ್ನು ಪ್ರಶ್ನಿಸಿ ಮೃತನ ಪೋಷಕರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಕುರಿತು ವಿಚಾರಣೆ ನಡೆಸಿದ ನ್ಯಾಯಪೀಠವು ತನ್ನ ವೀರ್ಯ ಅಥವಾ ಅಂಡಾಣು ಬಳಕೆಗೆ ಈಗಾಗಲೇ ಒಪ್ಪಿಗೆ ನೀಡಿದ್ದರೆ ಅಂತಹ ವ್ಯಕ್ತಿಯ ಮರಣದ ನಂತರ, ಆತನ ಇಲ್ಲವೇ ಆಕೆಯ ವೀರ್ಯಾಣು ಅಥವಾ ಅಂಡಾಣು ಬಳಕೆ ಮಾಡುವ ಮರಣೋತ್ತರ ಸಂತಾನೋತ್ಪತ್ತಿ ವಿಧಾನಕ್ಕೆ ಯಾವುದೇ ನಿಷೇಧ ಇಲ್ಲ ಎಂದು ತಿಳಿಸಿದೆ.

ಆದರೆ, ಈ ವೀರ್ಯಾಣು ಅಥವಾ ಅಂಡಾಣುವನ್ನು ಆರ್ಥಿಕ ಲಾಭಕ್ಕಾಗಿ ಅಥವಾ ವಾಣಿಜ್ಯಾತ್ಮಕ ನೆಲೆಯಲ್ಲಿ ಬಳಸುವಂತಿಲ್ಲ ಎಂದು ನ್ಯಾಯಪೀಠ ನಿರ್ಬಂಧ ವಿಧಿಸಿದೆ

ಪ್ರಸಕ್ತ ಚಾಲ್ತಿಯಲ್ಲಿ ಇರುವ ಭಾರತೀಯ ಕಾನೂನಿನ ಪ್ರಕಾರ, ವೀರ್ಯ ಅಥವಾ ಅಂಡಾಣು ನೀಡುವವರ ಒಪ್ಪಿಗೆ ಪತ್ರ ತೋರಿಸಿದರೆ ಆಗ ಮರಣೋತ್ತರ ಸಂತಾನೋತ್ಪತ್ತಿಗೆ ಯಾವುದೇ ನಿರ್ಬಂಧ ಇಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.