22/12/2024

Law Guide Kannada

Online Guide

ಸರ್ಕಾರಿ ನೌಕರರ ವರ್ಗಾವಣೆ, ಸ್ಥಳ ನಿಯುಕ್ತಿ ವಿಚಾರದಲ್ಲಿ ರಾಜಕೀಯ ಪ್ರಭಾವ : ಕಡ್ಡಾಯ ನಿವೃತ್ತಿ ಶಿಕ್ಷೆ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್

ಬೆಂಗಳೂರು: ಸರ್ಕಾರಿ ನೌಕರರ ವರ್ಗಾವಣೆ, ಸ್ಥಳ ನಿಯುಕ್ತಿ ವಿಚಾರದಲ್ಲಿ ರಾಜಕೀಯ ಪ್ರಭಾವ ತರುತ್ತಿರುವ ಕೃತ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ತನ್ನ ಉದ್ಯೋಗಿಗೆ ನೀಡಿರುವ ಕಡ್ಡಾಯ ನಿವೃತ್ತಿ ಶಿಕ್ಷೆಯನ್ನು ಎತ್ತಿ ಹಿಡಿದಿದೆ.
ಹೈಕೋರ್ಟ್ ನ್ಯಾಯಮೂರ್ತಿ ಎಸ್ ಕೃಷ್ಣ ದೀಕ್ಷಿತ್ ಮತ್ತು ರಾಮಚಂದ್ರ ಡಿ ಹುದ್ದಾರ ಇವರನ್ನೊಳಗೊಂಡ ವಿಭಾಗೀಯ ನ್ಯಾಯ ಪೀಠವು ಈ ತೀರ್ಪು ಪ್ರಕಟಿಸಿದೆ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ವಿರುದ್ದ ಎಂ ವೀಣಾ ದಾಖಲಿಸಿದ್ದ ಈ ಪ್ರಕರಣದಲ್ಲಿ ದಿನಾಂಕ 2.7.2024 ರಂದು ನೀಡಿದ ತೀರ್ಪಿನಲ್ಲಿ ಅಭಿಪ್ರಾಯ ಪಟ್ಟಿದೆ

ಪ್ರಕರಣದ ಹಿನ್ನೆಲೆ .
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಇಲ್ಲಿ ಕಿರಿಯ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಎಂ ವೀಣಾ ಅವರು ದಿನಾಂಕ 12.7.2002 ರಂದು ಬೆಂಗಳೂರಿನಿಂದ ಮಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ಮಂಗಳೂರಿನಲ್ಲಿ ಕರ್ತವ್ಯಕ್ಕೆ ಹಾಜರಾಗುವ ಬದಲು ವೀಣಾ ಅವರು ವೈದ್ಯಕೀಯ ಕಾರಣಗಳಿಗಾಗಿ ರಜೆಯನ್ನು ಕೋರಿ ಅರ್ಜಿ ಸಲ್ಲಿಸಿದ್ದರು. ವೀಣಾ ಅವರು ಸಲ್ಲಿಸಿದ ವೈದ್ಯಕೀಯ ಪ್ರಮಾಣ ಪತ್ರದ ಬಗ್ಗೆ ಅನುಮಾನಗೊಂಡ ನಿಗಮದ ಆಡಳಿತವು ಉಡುಪಿಯ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಮಂಡಳಿಯ ಮುಂದೆ ಪರೀಕ್ಷೆಗೆ ಹಾಜರಾಗಲು ವೀಣಾ ಅವರಿಗೆ ಸೂಚಿಸಿತು. ವೈದ್ಯಕೀಯ ಮಂಡಳಿಯ ಮುಂದೆ ತಪಾಸಣೆಗೆ ಹಾಜರಾದ ವೀಣಾ ಅವರನ್ನು ಪರೀಕ್ಷಿಸಿದ ವೈದ್ಯರು ಆಕೆ ಸ್ವಲ್ಪ ಅಲರ್ಜಿಯಿಂದ ಬಳಲುತ್ತಿದ್ದರೂ, ವೈದ್ಯಕೀಯ ನೆಲೆಯಲ್ಲಿ ರಜೆ ಪಡೆಯುವ ದೈಹಿಕ ಅನಾರೋಗ್ಯ ಇಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ವರ್ಗಾವಣೆಯನ್ನು ರದ್ದು ಪಡಿಸಲು ವೀಣಾ ಅವರು ಸಂಸದರೊಬ್ಬರ ಮೂಲಕ ರಾಜಕೀಯ ಪ್ರಭಾವವನ್ನು ತಂದಿರುವುದನ್ನು ನಿಗಮದ ಶಿಸ್ತು ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿ. ರಾಜಕೀಯ ಹಸ್ತಕ್ಷೇಪದ ಕಾರಣಗಳಿಗಾಗಿ ಇಲಾಖಾ ವಿಚಾರಣೆ ನಡೆಸಿದ ಶಿಸ್ತು ಪ್ರಾಧಿಕಾರವು ದಿನಾಂಕ 8.7.2004 ರಂದು ಆಕೆಯನ್ನು ಕಡ್ಡಾಯವಾಗಿ ಸೇವೆಯಿಂದ ನಿವೃತ್ತಿಗೊಳಿಸುವ ಆದೇಶ ಹೊರಡಿಸಿತು.

ಇದಾದ ಬೆನ್ನಲ್ಲೆ ವೀಣಾ ಅವರು ಇಲಾಖಾ ಮೇಲ್ಮನವಿ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದರು. ಶಿಸ್ತು, ಪ್ರಾಧಿಕಾರ ಹೊರಡಿಸಿದ ಆದೇಶವನ್ನು ಮೇಲ್ಮನವಿ ಪ್ರಾಧಿಕಾರವು ದಿನಾಂಕ 31.10.2009 ರ ಆದೇಶದಲ್ಲಿ ಸ್ಥಿರೀಕರಿಸಿತು. ಸದರಿ ಆದೇಶದಿಂದ ಬಾಧಿತರಾದ ವೀಣಾ ಅವರು ಕರ್ನಾಟಕ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಂಖ್ಯೆ 35246/2009 ಅನ್ನು ದಾಖಲಿಸಿದರು.

ವೈದ್ಯಕೀಯ ಕಾರಣಗಳಿಗಾಗಿ ಅನಧಿಕೃತವಾಗಿ ಗೈರುಹಾಜರಾಗಿರುವ ಉದ್ಯೋಗಿಯ ದುರ್ವರ್ತನೆಗಾಗಿ ಶಿಸ್ತು, ಪ್ರಾಧಿಕಾರವು ನೀಡಿರುವ ಕಡ್ಡಾಯ ನಿವೃತ್ತಿಯ ದಂಡನೆಯು ಆಘಾತಕಾರಿ ಹಾಗೂ ಅಸಮಾನವಾಗಿದೆ ಎಂಬ ಅಭಿಪ್ರಾಯವನ್ನು ತಳೆದ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರಿದ್ದ ಏಕಸದಸ್ಯ ಪೀಠವು ದಿನಾಂಕ 20.3.2013 ರಂದು ತೀರ್ಪು ಘೋಷಿಸಿ ರಿಟ್ ಅರ್ಜಿಯನ್ನು ಪುರಸ್ಕರಿಸಿತು.

ನೌಕರರ ಸೇವಾ ಜೀವನದಲ್ಲಿ ವರ್ಗಾವಣೆ ಸಾಮಾನ್ಯ ಪ್ರಕ್ರಿಯೆಯಾಗಿದೆ. ವರ್ಗಾವಣೆ ಹೊಂದಿದ್ದ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಲು ನೌಕರರು ಬದ್ಧರಾಗಿರತಕ್ಕದ್ದು. ವರ್ಗಾವಣೆ ಹೊಂದಿದ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗದೆ ರಜೆಯನ್ನು ಕೋರುವುದು ನ್ಯಾಯಶಾಸ್ತ್ರದಲ್ಲಿ ದುರ್ನಡತೆ ಎಂದು ಪರಿಗಣಿಸಲಾಗುತ್ತದೆ. ಸರಕಾರಿ ನೌಕರರು ಜನಪ್ರತಿನಿಧಿಗಳನ್ನು ಬಳಸಿ ರಾಜಕೀಯ ಪ್ರಭಾವವನ್ನು ಬೀರಿ ವರ್ಗಾವಣೆಯನ್ನು ರದ್ದು ಪಡಿಸಲು ಪ್ರಯತ್ನಿಸುವುದು ಕೂಡ ನಡತೆ ನಿಯಮಗಳಡಿ ದುರ್ವರ್ತನೆ ಎಂದು ಪರಿಗಣಿಸಲ್ಪಡುತ್ತದೆ.

ವರ್ಗಾವಣೆಗೊಂಡ ಸ್ಥಳದಲ್ಲಿ ತನ್ನ ಹುದ್ದೆಗೆ ದೀರ್ಘಾವಧಿಯ ಗೈರು ಹಾಜರಿಯನ್ನು ಸಮರ್ಥಿಸಲು ಉದ್ಯೋಗಿಯು ಅಲರ್ಜಿಯ ಕಾರಣ ನೀಡಿದ್ದಾರೆ. ಆದರೆ ವೈದ್ಯಕೀಯ ವರದಿಯು ಆಕೆಯ ಪ್ರಕರಣವನ್ನು ಬೆಂಬಲಿಸಿಲ್ಲ. ಆಕೆ ಸ್ವಲ್ಪ ಅಲರ್ಜಿಯಿಂದ ಬಳಲುತ್ತಿದ್ದರೂ ಅನಾರೋಗ್ಯದ ಕಾರಣದಿಂದ ವೈದ್ಯಕೀಯ ನೆಲೆಯಲ್ಲಿ ರಜೆ ಪಡೆಯಲು ಯಾವುದೇ ಸಮರ್ಥನೀಯ ಕಾರಣಗಳಿಲ್ಲ ಎಂದು ವೈದ್ಯರು ನಿರ್ದಿಷ್ಟವಾಗಿ ಹೇಳಿದ್ದಾರೆ.

ಈ ಅಂಶವನ್ನು ಸಕ್ರಮ ಪ್ರಾಧಿಕಾರವು ಪರಿಶೀಲಿಸಿದ ನಂತರ ಕಡ್ಡಾಯನಿವೃತ್ತಿಯ ದಂಡನೆಯನ್ನು ವಿಧಿಸಲಾಗಿದೆ. ಯಾವುದೇ ತೃಪ್ತಿಕರ ವಿವರಣೆ ಇಲ್ಲದ ಅನಧಿಕೃತ ಗೈರುಹಾಜರಿ ಶಿಸ್ತು ಕ್ರಮಕ್ಕೆ ಕಾರಣವಾಗುತ್ತದೆ. ದುರ್ನಡತೆಯು ಸಾಬೀತಾದಲ್ಲಿ ವೇತನ ಭಡ್ತಿಯನ್ನು ತಡೆಹಿಡಿಯುವ ಸಣ್ಣ ದಂಡನೆಯಿಂದ ಹಿಡಿದು ಸೇವೆಯಿಂದ ವಜಾಗೊಳಿಸುವ ವರೆಗಿನ ದಂಡನೆಯನ್ನು ವಿಧಿಸಬಹುದು ಎಂಬುದಾಗಿ ಪಂಜಾಬ್ ರಾಜ್ಯ ವಿರುದ್ಧ ಡಾ. ಪಿ. ಎಲ್. ಸಿಂಗ್ಲಾ ಅಪ್ರಕರಣದಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದ ಅಭಿಪ್ರಾಯವನ್ನು ನ್ಯಾಯ ಪೀಠವು ಉಲ್ಲೇಖಿಸಿತು.

ಆಪಾದಿತ ನೌಕರರು ಶಿಸ್ತು, ಪ್ರಾಧಿಕಾರದ ಆದೇಶದ ವಿರುದ್ಧ ಸಲ್ಲಿಸಿದ ಇಲಾಖಾ ಮೇಲ್ಮನವಿಯು ಅರ್ಹತೆಯ ಮೇಲೆ ವಿಫಲವಾಗಿದೆ. ಮೂಲಭೂತವಾಗಿ ದಂಡನೆಯನ್ನು ವಿಧಿಸುವುದು ಶಿಸ್ತು ಪ್ರಾಧಿಕಾರದ ಅಧಿಕಾರ ವ್ಯಾಪ್ತಿಗೆ ಸೇರಿದೆ. ಏಕ ಸದಸ್ಯ ನ್ಯಾಯ ಪೀಠದ ಆದೇಶ ಕಾನೂನಿನಡಿ ಊರ್ಜಿತವಲ್ಲ ಎಂಬ ಅಭಿಪ್ರಾಯಕ್ಕೆ ಬಂದ ವಿಭಾಗೀಯ ಪೀಠವು ಏಕ ಸದಸ್ಯ ನ್ಯಾಯ ಪೀಠದ ಆದೇಶವನ್ನು ರದ್ದು ಪಡಿಸಿ ರಿಟ್ ಅಪೀಲ್ ಅನ್ನು ಪುರಸ್ಕರಿಸಿತು. ತತ್ಪರಿಣಾಮವಾಗಿ ಆಪಾದಿತ ನೌಕರರ ಕಡ್ಡಾಯ ನಿವೃತ್ತಿಯ ಆದೇಶವನ್ನು ಪುನರ್ ಊರ್ಜಿತಗೊಳಿಸಿತು.

ದಿನಾಂಕ 2.7.2024 ರಿಂದ 8 ವಾರಗಳ ಒಳಗೆ ಕಡ್ಡಾಯ ನಿವೃತ್ತಿಯ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ಉದ್ಯೋಗಿಗೆ ಹಸ್ತಾಂತರಿಸಲು ಆದೇಶಿಸಿದಕೋರ್ಟ್, ಆರ್ಥಿಕ ಸೌಲಭ್ಯಗಳನ್ನು ನಿಗದಿತ ಕಾಲಮಿತಿಯೊಳಗೆ ಆಕೆಯ ಖಾತೆಗೆ ಜಮಾ ಮಾಡಲು ವಿಫಲರಾದಲ್ಲಿ ನಿವೃತ್ತಿ ಸೌಲಭ್ಯಗಳ ಸಂಪೂರ್ಣ ಮೊತ್ತದ ಮೇಲೆ ಪ್ರತಿ ತಿಂಗಳು ಎರಡು ಶೇಕಡಾ ದರದಲ್ಲಿ ಬಡ್ಡಿಯನ್ನು ನೀಡಬೇಕಾಗುತ್ತದೆ ಎಂದು ಹೈಕೋರ್ಟ್ ವಿಭಾಗೀಯ ಪೀಠ ತಿಳಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.