ವಕೀಲರ ಸಂಘದಲ್ಲಿ ರಾಜಕೀಯ ನಾಯಕರ ಆಯ್ಕೆಗೆ ನಿರ್ಬಂಧ ಕೋರಿ ಅರ್ಜಿ: ಸುಪ್ರೀಂ ಕೋರ್ಟ್ ನಿಂದ ಮಹತ್ವದ ಆದೇಶ
ನವದೆಹಲಿ: ವಕೀಲರ ಸಂಘದಲ್ಲಿ ರಾಜಕೀಯ ನಾಯಕರ ಆಯ್ಕೆಗೆ ನಿರ್ಬಂಧ ವಿಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಾಜಕೀಯ ಸಿದ್ಧಾಂತಗಳನ್ನು ಹೊಂದಿರುವ ವ್ಯಕ್ತಿಗಳು ವಕೀಲರ ಸಂಘಗಳಲ್ಲಿ ಕಾರ್ಯಕಾರಿ ಸಮಿತಿ ಅಥವಾ ಪದಾಧಿಕಾರಿಗಳಾಗಲು ಯಾವುದೇ ನಿರ್ಬಂಧವಿಲ್ಲ ಎಂದು ಮಹತ್ವದ ತೀರ್ಪು ನೀಡಿದೆ.
ಬಾರ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ದೇಶದ ವಿವಿಧ ವಕೀಲರ ಸಂಘಗಳ ಪದಾಧಿಕಾರಿಗಳು ಮತ್ತು ಅಧ್ಯಕ್ಷರ ಹುದ್ದೆಗೆ ರಾಜಕೀಯ ನಾಯಕರು ಮತ್ತು ಸದಸ್ಯ ಆಯ್ಕೆಗೆ ನಿರ್ಬಂಧ ಹೇರಬೇಕು ಎಂದು ಕೋರಿ ಅರ್ಜಿಸಲ್ಲಿಸಲಾಗಿತ್ತು. ರಾಜಕೀಯ ಪಕ್ಷಗಳ ಸದಸ್ಯರಾಗಿರುವ ವ್ಯಕ್ತಿಗಳು ಅಥವಾ ನಾಯಕರು ವಕೀಲರ ಸಂಘಗಳು ಮತ್ತು ಬಾರ್ ಕೌನ್ಸಿಲ್ಗಳ ಪದಾಧಿಕಾರಿಗಳಾಗಬಾರದು ಎಂದು ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ ಮುಂದೆ ಅರ್ಜಿಯನ್ನು ಸಲ್ಲಿಸಲಾಗಿತ್ತು.
ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಉಜ್ವಲ್ ಭುಯಾನ್ ಅವರಿದ್ದ ವಿಭಾಗೀಯ ಪೀಠ, ರಾಜಕೀಯ ಸಿದ್ಧಾಂತಗಳನ್ನು ಹೊಂದಿರುವ ವ್ಯಕ್ತಿಗಳು ವಕೀಲರ ಸಂಘಗಳಲ್ಲಿ ಕಾರ್ಯಕಾರಿ ಸಮಿತಿ ಅಥವಾ ಪದಾಧಿಕಾರಿಗಳಾಗಲು ಯಾವುದೇ ನಿರ್ಬಂಧವಿಲ್ಲ. ಅವರು ಆ ಸ್ಥಾನಕ್ಕೆ ಆಯ್ಕೆಯಾಗುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದೆ.
“ವಕೀಲರ ಸಂಘದ ಪದಾಧಿಕಾರಿಯೊಬ್ಬರು ರಾಜಕೀಯ ಸಿದ್ಧಾಂತವನ್ನು ಹೊಂದಿದ್ದರೆ, ಅದರಲ್ಲಿ ತಪ್ಪೇನಿದೆ? ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್ಬಿಎ) ಅಧ್ಯಕ್ಷರಾಗಿ ಕಪಿಲ್ ಸಿಬಲ್ ಅವರನ್ನು ಪದಚ್ಯುತಗೊಳಿಸಲು ನೀವು ಬಯಸುತ್ತೀರಾ?. ಅದೇ ರೀತಿ, ನೀವು ಮನನ್ ಕುಮಾರ್ ಮಿಶ್ರಾ ಅವರನ್ನು ಬಾರ್ ಕೌನ್ಸಿಲ್ ಅಧ್ಯಕ್ಷ ಸ್ಥಾನದಿಂದ ಹೊರಹಾಕಲು ಬಯಸುತ್ತೀರಿ. ಎಂದು ಅರ್ಜಿದಾರರನ್ನು ನ್ಯಾಯಮೂರ್ತಿ ಸೂರ್ಯಕಾಂತ್ ಪ್ರಶ್ನಿಸಿದರು.
ರಾಮ್ ಜೇಠಲಾನಿ ಅವರು ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾಗಲೂ ಸಹ ಸೇವೆ ಸಲ್ಲಿಸಿದ ಉದಾಹರಣೆಯನ್ನು ನ್ಯಾಯಮೂರ್ತಿ ಸೂರ್ಯ ಕಾಂತ್ ಸ್ಮರಿಸಿದರು.
ರಾಜಕೀಯ ಸಿದ್ಧಾಂತಗಳನ್ನು ಹೊಂದಿರುವ ವ್ಯಕ್ತಿಗಳು ಚುನಾಯಿತ ನಾಯಕರಾದರೆ ವಕೀಲರ ಸಂಘಗಳ ಸ್ವಾತಂತ್ರಕ್ಕೆ ಧಕ್ಕೆಯಾಗುತ್ತದೆ ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್ ಮುಂದೆ ವಾದ ಮಂಡಿಸಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ