ಹೆರಿಗೆ ರಜೆ, ಮಾತೃತ್ವದ ರಜೆ ಹಕ್ಕಿಗೆ ಹೊರಗುತ್ತಿಗೆ ನೌಕರರೂ ಅರ್ಹ- ಹೈಕೋರ್ಟ್ ಆದೇಶ
ಬೆಂಗಳೂರು: ಹೆರಿಗೆ ರಜೆ ಮುಗಿದ ಬಳಿಕ ಕೆಲಸಕ್ಕೆ ವಾಪಸ್ ಆಗಿದ್ದ ವೇಳೆ ತಾವು ನಿರ್ವಹಿಸುತ್ತಿದ್ದ ಹೊರಗುತ್ತಿಗೆ ಆಧಾರದ ಕೆಲಸಕ್ಕೆ ಬೇರೊಬ್ಬರನ್ನ ನಿಯೋಜನೆ ಮಾಡಿ ತಮ್ಮನ್ನು ಕೆಲಸದಲ್ಲಿ ಮುಂದುವರೆಸಲು ತಿರಸ್ಕರಿಸಿದ್ದಕ್ಕೆ ಹೈಕೋರ್ಟ್ ಮೆಟ್ಟಿಲೇರಿದ್ದ ಹೊರಗುತ್ತಿಗೆ ನೌಕರರೊಬ್ಬರಿಗೆ ಕೊನೆಗೂ ನ್ಯಾಯ ಸಿಕ್ಕಿದೆ.
ಹೌದು, ಕಾನೂನು ಪ್ರಕಾರ ಹೆರಿಗೆ ರಜೆ, ಮಾತೃತ್ವದ ರಜೆಯ ಹಕ್ಕಿಗೆ ಹೊರಗುತ್ತಿಗೆ ನೌಕರರೂ ಅರ್ಹರಾಗಿದ್ದಾರೆ. ಹೀಗಾಗಿ ಅರ್ಜಿದಾರರು ಹೆರಿಗೆ ರಜೆಗೆ ತೆರಳುವ ಮುನ್ನ ಕಾರ್ಯನಿರ್ವಹಿಸುತ್ತಿದ್ದ ಹುದ್ದೆಗೆ ಕಾನೂನು ಬದ್ಧ ನೇಮಕಾತಿ ಆಗುವವರೆಗೂ ಅರ್ಜಿದಾರರಿಗೆ ಕೆಲಸಕ್ಕೆ ಅನುಮತಿ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಚಾಂದ್ ಬೀ ಬಳಿಗಾರ್ ಅವರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠದ ಮಾನ್ಯ ಎಂ.ಜಿ.ಎಸ್.ಕಮಾಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ನೌಕರರು ಹೊರಗುತ್ತಿಗೆ ಆಧಾರದಲ್ಲಿ ಕೆಲಸದಲ್ಲಿ ತೊಡಗಿಕೊಂಡಿದ್ದರೂ ಅವರು ಹೆರಿಗೆ ಮತ್ತು ಮಾತೃತ್ವದ ರಜೆಗೆ ಅರ್ಹರಾಗಿದ್ದಾರೆ ಎಂದು ಆದೇಶಿಸಿದೆ.
ಚಾಂದ್ ಬೀ ಬಳಿಗಾರ್ ಅವರು ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ರೈತ ಸಂಪರ್ಕ ಕೇಂದ್ರದಲ್ಲಿ ಅಕೌಂಟೆಂಟ್ ಹುದ್ದೆಗೆ ಹೊರಗುತ್ತಿಗೆ ಆಧಾರದಲ್ಲಿ 2014ರಲ್ಲಿ ನೇಮಕಗೊಳ್ಳುತ್ತಾರೆ. ಹೊರಗುತ್ತಿಗೆದಾರ ಸಂಸ್ಥೆಯು ಬದಲಾಗುತ್ತಿದ್ದರೂ, ಚಾಂದ್ ಬೀ ಬಳಿಗಾರ್ ಮಾತ್ರ ಅದೇ ಹುದ್ದೆಯಲ್ಲಿ 2014ರಿಂದ 2023ರ ವರೆಗೆ ಅವರು ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದ್ದರು.
ಈ ಮಧ್ಯೆ 2023ರಲ್ಲಿ ಹೂವಿನಹಡಗಲಿಯ ಕೃಷಿ ಅಧಿಕಾರಿಯವರಲ್ಲಿ ಹೆರಿಗೆ ರಜೆ(ಮಾತೃತ್ವದ ರಜೆ)ಗಾಗಿ ಅರ್ಜಿ ಸಲ್ಲಿಸಿ ರಜೆ ಮೇಲೆ ತೆರಳುತ್ತಾರೆ. ಮಾತೃತ್ವದ ರಜೆ ಮುಗಿದ ಮರುದಿನವೇ ಅವರು ಕೆಲಸಕ್ಕೆ ಹಾಜರಾಗಿದ್ದು, ಆದರೆ ಆಗ ಅವರು ನಿರ್ವಹಿಸುತ್ತಿದ್ದ ಅಕೌಂಟೆಂಟ್ ಹುದ್ದೆಯನ್ನು ಬೇರೊಬ್ಬರಿಗೆ ನೀಡಿರುವುದು ಗಮನಕ್ಕೆ ಬಂದಿದೆ.
ತಾವು ಈ ಹುದ್ದೆಯಲ್ಲಿ ತಕ್ಷಣದಿಂದ ಕೆಲಸ ನಿರ್ವಹಿಸಲು ಸಿದ್ಧರಿರುವುದಾಗಿಯೂ, ತಮಗೆ ಈ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಬೇಕು ಎಂದು ಮನವಿ ಪತ್ರವನ್ನು ನೀಡುತ್ತಾರೆ. ಆದರೆ, ಅವರು ಈ ಮನವಿಗೆ ಯಾವುದೇ ಸ್ಪಂದನೆ ನೀಡುವುದಿಲ್ಲ. ಹಿರಿಯ ಅಧಿಕಾರಿಗಳಿಗೆ ನೀಡಿದ ಮನವಿಗೂ ಅದೇ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಅಂತಿಮವಾಗಿ ಹೈಕೋರ್ಟ್ ಮೆಟ್ಟಿಲೇರಿದ ಬಾಧಿತ ಮಹಿಳೆ ಚಾಂದ್ ಬಿ ಬಳಿಗಾರ್ ಕಾನೂನು ಸಮರ ಸಾರುತ್ತಾರೆ.
ಅವರೊಬ್ಬ ಹೊರಗುತ್ತಿಗೆ ನೌಕರರಾಗಿದ್ದು, ಅವರನ್ನು ನೇಮಿಸಿದ ಖಾಸಗಿ ಗುತ್ತಿಗೆದಾರ ಸಂಸ್ಥೆಯೇ ಅವರಿಗೆ ಹೆರಿಗೆ ರಜೆ ಸೌಲಭ್ಯ ನೀಡಲು ಬಾಧ್ಯತೆ ಹೊಂದಿದೆ ಎಂದು ಸರ್ಕಾರದ ಪರ ವಕೀಲರು ವಾದ ಮಂಡಿಸುತ್ತಾರೆ.
ಆದರೆ ಈ ವಾದವನ್ನು ತಿರಸ್ಕರಿಸಿದ ಹೈಕೋರ್ಟ್ ನ್ಯಾಯಪೀಠ, ಬಾಧಿತ ಮಹಿಳೆ/ ಅರ್ಜಿದಾರರು ಹೆರಿಗೆ ರಜೆಗೆ ತೆರಳುವ ಮುನ್ನ ಕಾರ್ಯನಿರ್ವಹಿಸುತ್ತಿದ್ದ ಹುದ್ದೆಗೆ ಕಾನೂನು ಬದ್ಧ ನೇಮಕಾತಿ ಆಗುವವರೆಗೂ ಅರ್ಜಿದಾರರಿಗೆ ಕೆಲಸಕ್ಕೆ ಅನುಮತಿ ನೀಡಬೇಕು ಎಂದು ಕೃಷಿ ಇಲಾಖೆಗೆ ನಿರ್ದೇಶನ ನೀಡಿದೆ. ಹಾಗೂ ಅರ್ಜಿದಾರರಿಗೆ ಹಿಂದೆ ಬಾಕಿ ಇರುವ ಎಲ್ಲ ವೇತನವನ್ನು ಪ್ರಕರಣದ ಖರ್ಚಿನ ಸಹಿತ ಪಾವತಿ ಮಾಡುವಂತೆ ನಿರ್ದೇಶನ ನೀಡಿದೆ.
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ