ಕೇವಲ 1.50 ರೂ. ಗಾಗಿ ಗ್ಯಾಸ್ ಏಜೆನ್ಸಿ ವಿರುದ್ದ ಗ್ರಾಹಕನಿಂದ 7 ವರ್ಷ ಹೋರಾಟ: ಕೊನೆಗೆ ಏನಾಯ್ತು..?
ಮಧ್ಯಪ್ರದೇಶ: ಯಾವುದಾದರೂ ಅಂಗಡಿಗೆ ಹೋಗಿ ವಸ್ತುವನ್ನ ಕೊಂಡುಕೊಂಡರೆ ಅಥವಾ ಬಸ್ ನಲ್ಲಿ ಟಿಕೆಟ್ ತೆಗೆದುಕೊಂಡಾಗ ಒಂದು ಅಥವಾ 2 ರೂಪಾಯಿ ಚಿಲ್ಲರೆ ಇಲ್ಲದಿದ್ದರೇ ಅದನ್ನ ಬಿಟ್ಟು ಬಿಡುತ್ತೇವೆ. ಹಲವು ಮಂದಿ ಒಂದೋ ಅಥವಾ ಎರಡು ರೂಪಾಯಿ ಚಿಲ್ಲರೆ ಬಗ್ಗೆ ಚಿಂತಿಸದೇ ಬಿಟ್ಟು ಬಿಡುತ್ತಾರೆ. ಆದರೆ, ಕೆಲವೊಂದು ಕಂಪನಿಗಳು ಅಥವಾ ಕೆಲ ವ್ಯಾಪಾರಿಗಳು ತಮ್ಮ ಬಳಿ ಚಿಲ್ಲರೆ ಇದ್ದರು ಇಲ್ಲ ಅಂದುಬಿಡುತ್ತಾರೆ. ಅಂತಹ ಸಂದರ್ಭದಲ್ಲಿ ಬಹುತೇಕ ಮಂದಿ ಪ್ರಶ್ನೆ ಮಾಡುವುದಿಲ್ಲ. ಚಿಲ್ಲರೆ ಕೊಡದಿದ್ದರೇ ಅವರ ವಿರುದ್ದ ಹೋರಾಡುವುದಕ್ಕೆ ಇರುವ ಗ್ರಾಹಕರ ಹಕ್ಕುಗಳ ಬಗ್ಗೆಯೂ ಯಾರೂ ಚಿಂತಿಸುವುದಿಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿ ತಮಗೆ ಗ್ಯಾಸ್ ಏಜೆನ್ಸಿಯವರು 1.50 ರೂಪಾಯಿ ಚಿಲ್ಲರೆ ನೀಡದಿದ್ದಕ್ಕೆ ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿ ಸತತ 7 ವರ್ಷಗಳ ಕಾಲ ಹೋರಾಟ ನಡೆಸಿ ಕೊನೆಗೂ ನ್ಯಾಯ ಪಡೆದುಕೊಂಡಿದ್ದಾರೆ.
ಹೌದು, ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಚಕ್ರೇಶ್ ಜೈನ್ ಕೇವಲ ಒಂದೂವರೆ ರೂಪಾಯಿಗೆ ಏಳು ವರ್ಷಗಳ ಕಾಲ ಹೋರಾಡಿ ನ್ಯಾಯ ಪಡೆದುಕೊಳ್ಳುವ ಮೂಲಕ ಗ್ರಾಹಕರ ಹಕ್ಕುಗಳ ಮಹತ್ವವನ್ನು ಎಲ್ಲೆಡೆ ಸಾರಿದ್ದಾರೆ.
ಪ್ರಕರಣದ ಹಿನ್ನೆಲೆ
ಚಕ್ರೇಶ್ ಜೈನ್ ಅವರು 2017, ನವೆಂಬರ್ 14 ರಂದು ಭಾರತ್ ಗ್ಯಾಸ್ ಏಜೆನ್ಸಿಯಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಿದ್ದರು. ಸಿಲಿಂಡರ್ ಬೆಲೆ 753.50 ರೂ. ಇತ್ತು. ಆದರೆ, ಡೆಲಿವರಿ ಬಾಯ್ 755 ರೂಪಾಯಿ ಪಡೆದು ಚಿಲ್ಲರೆ ಇಲ್ಲ ಎಂದು ಹೇಳಿ 1.50 ರೂಪಾಯಿ ಕೊಡಲಿಲ್ಲ. ಚಕ್ರೇಶ್ ಚಿಲ್ಲರೆ ಕೇಳಿದರೂ ಇಲ್ಲ ಎಂದು ಅಲ್ಲಿಂದ ಹೊರಟು ಹೋದರು. ಇದಾದ ತಕ್ಷಣ ಚಕ್ರೇಶ್, ಗ್ಯಾಸ್ ಏಜೆನ್ಸಿಯನ್ನು ಸಂಪರ್ಕಿಸಿದರು. ಅಲ್ಲದೆ, ರಾಷ್ಟ್ರೀಯ ಗ್ರಾಹಕರ ವೇದಿಕೆಗೆ ನೇರವಾಗಿ ದೂರು ಸಲ್ಲಿಸಿದರು.ಆರಂಭಿಕ ದೂರಿನ ಬಗ್ಗೆ ಗ್ಯಾಸ್ ಏಜೆನ್ಸಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ ಗ್ಯಾಸ್ ಏಜೆನ್ಸಿ ವಿರುದ್ದ ಹೋರಾಟಕ್ಕೆ ಮುಂದಾದ ಚಕ್ರೇಶ್ ಅವರು 2019, ಜುಲೈ 15ರಂದು ಸಾಗರ ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ಪ್ರಕರಣ ದಾಖಲಿಸಿದರು.
ಗ್ಯಾಸ್ ಏಜೆನ್ಸಿಯವರು ಈ ವಿಷಯವನ್ನು ತುಂಬಾ ಲಘುವಾಗಿ ತೆಗೆದುಕೊಂಡರು. ಇದಲ್ಲದೆ, ಈ ವಿಚಾರದಲ್ಲಿ ಚಕ್ರೇಶ್ ಅವರನ್ನು ಅಪಹಾಸ್ಯ ಸಹ ಮಾಡಿದರು. ಆದರೂ, ಚಕ್ರೇಶ್ ಹಿಂದೆ ಸರಿಯಲಿಲ್ಲ. ತಮ್ಮ ವಕೀಲ ರಾಜೇಶ್ ಸಿಂಗ್ ಮೂಲಕ ನ್ಯಾಯಕ್ಕಾಗಿ ತೀವ್ರ ಹೋರಾಟ ನಡೆಸಿದರು. ಸುಮಾರು ಐದು ವರ್ಷಗಳ ಕಾಲ ನಡೆದ ವಿಚಾರಣೆಯ ನಂತರ ಗ್ರಾಹಕರ ವೇದಿಕೆ ಸಂಚಲನಾತ್ಮಕ ತೀರ್ಪು ನೀಡಿದೆ. ಏಜೆನ್ಸಿಯ ಸೇವೆಗಳಲ್ಲಿ ದೋಷವಿದೆ ಎಂದು ಅದು ನ್ಯಾಯಾಲಯ ಸ್ಪಷ್ಟವಾಗಿ ತೀರ್ಮಾನಿಸಿದ್ದು, 1.50 ರೂಪಾಯಿಯನ್ನು ಮರುಪಾವತಿಸುವಂತೆ ಏಜೆನ್ಸಿಗೆ ಆದೇಶಿಸಲಾಗಿದೆ. ಅಲ್ಲದೆ, 1.50 ರೂಪಾಯಿಗೆ 6% ವಾರ್ಷಿಕ ಬಡ್ಡಿಯನ್ನು ಸೇರಿಸಿ ಎರಡು ತಿಂಗಳೊಳಗೆ ಚಕ್ರೇಶ್ಗೆ ನೀಡುವಂತೆ ನ್ಯಾಯಾಲಯ ಹೇಳಿದೆ.
ಇದಿಷ್ಟೇ ಅಲ್ಲದೆ, ಚಕ್ರೇಶ್ ಅವರು ಅನುಭವಿಸಿದ ಮಾನಸಿಕ ಮತ್ತು ಆರ್ಥಿಕ ಸಂಕಷ್ಟಕ್ಕೆ ಪರಿಹಾರವಾಗಿ 2,000 ಮತ್ತು ನ್ಯಾಯಾಲಯದ ವೆಚ್ಚಕ್ಕಾಗಿ 2,000 ರೂಪಾಯಿಯನ್ನು ಚಕ್ರೇಶ್ಗೆ ಪಾವತಿ ಮಾಡುವಂತೆ ಕೋರ್ಟ್ ಆದೇಶ ನೀಡಿದೆ.
ಇನ್ನು ಚಕ್ರೇಶ್ ಜೈನ್ ಅವರ ಈ ಹೋರಾಟ ಉದ್ಯಮಗಳಿಗೆ ಎಚ್ಚರಿಕೆಯಾಗಿದೆ. ಈ ತೀರ್ಪು ಗ್ರಾಹಕರನ್ನು ನ್ಯಾಯಯುತವಾಗಿ ಪರಿಗಣಿಸಲು ಮತ್ತು ಕಂಪನಿಗಳು ನೈತಿಕ ಮೌಲ್ಯಗಳನ್ನು ಅನುಸರಿಸಲು ನೆನಪಿಸುತ್ತದೆ. ಇದು ಕೇವಲ ಒಂದೂವರೆ ರೂಪಾಯಿಯ ಹೋರಾಟವಲ್ಲ, ನಮ್ಮ ಹಕ್ಕು ಮತ್ತು ಸ್ವಾಭಿಮಾನದ ಹೋರಾಟ ಎಂದು ಜೈನ್ ತಿಳಿಸಿದ್ದಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ