23/12/2024

Law Guide Kannada

Online Guide

ನೋಟರಿ ವಕೀಲರೇ ಕೇಂದ್ರ ಸರ್ಕಾರದ ಈ ಮಹತ್ವದ ಸೂಚನೆ ಬಗ್ಗೆ ಇರಲಿ ಎಚ್ಚರ: ಇಲ್ಲದಿದ್ರೆ ಕಾನೂನು ಕ್ರಮ ಖಚಿತ

ನವದೆಹಲಿ: ನೋಟರಿ ಕಾಯ್ದೆ 1952 ಸೆಕ್ಷನ್ 8 ಮತ್ತು ನೋಟರಿ ನಿಯಮಗಳು 1956ರ ನಿಮಯ 11ರ ಪ್ರಕಾರ ವಿವಾಹ ನೋಂದಣಿ ಮತ್ತು ವಿವಾಹ ವಿಚ್ಚೇದನ ಮಾಡುವುದು ನೋಟರಿ ವಕೀಲರ ಕೆಲಸದ ಭಾಗವಲ್ಲ. ಈ ನಿಯಮ ಮತ್ತು ಕಾಯ್ದೆಗಳ ಪ್ರಕಾರ ನೋಟರಿ ವಕೀಲರು ಯಾವುದೇ ವಿವಾಹವನ್ನು ಅಧಿಕೃತಗೊಳಿಸಿ ಪ್ರಮಾಣ ಪತ್ರ ನೀಡುವಂತಿಲ್ಲ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾನೂನು ವ್ಯವಹಾರಗಳ ವಿಭಾಗ ಮಹತ್ವದ ಸೂಚನೆ ನೀಡಿದೆ.

ಕೇಂದ್ರ ಸರ್ಕಾರದಿಂದ ನೇಮಕಗೊಂಡಿರುವ ನೋಟರಿ ವಕೀಲರಿಗೆ
ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾನೂನು ವ್ಯವಹಾರಗಳ ವಿಭಾಗ ಈ ಮಹತ್ವದ ಸೂಚನೆ ಹೊರಡಿಸಿದ್ದು, ದಿನಾಂಕ 10-10-2024ರಂದು ಕಾನೂನು ವ್ಯವಹಾರಗಳ ವಿಭಾಗ ಎಲ್ಲ ನೋಟರಿ ವಕೀಲರಿಗೆ ನೋಟೀಸ್ ಜಾರಿಗೊಳಿಸಲಾಗಿದೆ.

ನೋಟರಿ ವಕೀಲರು ವಿವಾಹ ನೋಂದಣಿ ಮತ್ತು ವಿವಾಹ ವಿಚ್ಚೇದನದ ಅಫಿಡವಿಟ್‌ಗೆ ಅಟೆಸ್ಟ್ ಮಾಡುವಂತಿಲ್ಲ. ನೋಟರಿ ವಕೀಲರು ವಿವಾಹ ಅಧಿಕಾರಿಯಾಗಿ ನೇಮಕಗೊಂಡಿಲ್ಲ. ವೈವಾಹಿಕ ನೋಂದಣಿಗಳ ಪ್ರದತ್ತ ಅಧಿಕಾರವನ್ನು ನೋಟರಿ ವಕೀಲರಿಗೆ ನೀಡಲಾಗಿಲ್ಲ ಎಂದು ಇಲಾಖೆಯಿಂದ ಹೊರಡಿಸಲಾದ ಕಚೇರಿ ಜ್ಞಾಪನಾ ಪತ್ರದ ನೋಟೀಸ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.

ನೋಟರಿ ಕಾಯ್ದೆ 1952 ಸೆಕ್ಷನ್ 8 ಮತ್ತು ನೋಟರಿ ನಿಯಮಗಳು-1956ರ ನಿಯಮ 11ರ ಪ್ರಕಾರ ವಿವಾಹ ನೋಂದಣಿ ಮತ್ತು ವಿವಾಹ ವಿಚ್ಚೇದನ ಮಾಡುವುದು ನೋಟರಿ ವಕೀಲರ ಕೆಲಸದ ಭಾಗವಲ್ಲ. ಈ ನಿಯಮ ಮತ್ತು ಕಾಯ್ದೆಗಳ ಪ್ರಕಾರ, ನೋಟರಿ ವಕೀಲರು ಯಾವುದೇ ವಿವಾಹವನ್ನು ಅಧಿಕೃತಗೊಳಿಸಿ ಪ್ರಮಾಣಪತ್ರ ನೀಡುವಂತಿಲ್ಲ. ಅದೇ ರೀತಿ, ವಿಚ್ಚೇದನ ಪತ್ರದ ನೋಂದಣಿಯನ್ನು ನೋಂದಾಯಿಸುವಂತಿಲ್ಲ ಎಂದು ತಿಳಿಸಿದೆ.

ಯಾರಾದರೂ ನೋಟರಿ ವಕೀಲರ ನೆಲೆಯಲ್ಲಿ ವೈವಾಹಿಕ ದಾಖಲೆಗಳನ್ನು ವಿವಾಹ ನೋಂದಣಿ ಅಥವಾ ವಿಚ್ಚೇದನ
ಕರಾರನ್ನು ದೃಢಪಡಿಸಿದ್ದಲ್ಲಿ ಅಥವಾ ನೋಂದಣಿ ಮಾಡಿಸಿಕೊಂಡಲ್ಲಿ ಅದನ್ನು ಗಂಭೀರ ದುರ್ವರ್ತನೆ ಎಂದು ಪರಿಗಣಿಸಲಾಗುವುದು ಮತ್ತು ಅಂತಹ ವಕೀಲರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವಾಲಯ ಎಚ್ಚರಿಕೆ ನೀಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.