ಧರ್ಮದ ಆಧಾರದಲ್ಲಿ ಮೀಸಲಾತಿ ಸಾಧ್ಯವಿಲ್ಲ, ಅದಕ್ಕೆ ಸಂವಿಧಾನದಲ್ಲಿ ಅವಕಾಶವೂ ಇಲ್ಲ: ಸುಪ್ರೀಂಕೋರ್ಟ್
ನವದೆಹಲಿ: ಧರ್ಮದ ಆಧಾರದಲ್ಲಿ ಮೀಸಲು ನೀಡಲು ಸಾಧ್ಯವಿಲ್ಲ. ಸಂವಿಧಾನದಲ್ಲಿ ಅದಕ್ಕೆ ಅವಕಾಶವೂ ಇಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಪಶ್ಚಿಮ ಬಂಗಾಳದಲ್ಲಿ 2010ರಿಂದ ನೀಡಲಾದ ಹಲವಾರು ಜಾತಿಗಳ ಒಬಿಸಿ ಸ್ಥಾನಮಾನವನ್ನ ರದ್ದುಗೊಳಿಸಿದ ಕಲ್ಕತ್ತಾ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಮುಸ್ಲಿಂ ಸಮುದಾಯದ 77 ಪಂಗಡಗಳನ್ನು ಒಬಿಸಿ ವ್ಯಾಪ್ತಿಗೆ ಸೇರ್ಪಡೆ ಮಾಡಿದ್ದ ಪಶ್ಚಿಮ ಬಂಗಾಳ ಸರ್ಕಾರದ ಕ್ರಮ ಅಸಿಂಧುಗೊಳಿಸಿದ್ದ ಕೊಲ್ಕತ್ತಾ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೇಲ್ಮನವಿ ಅರ್ಜಿ ಸಲ್ಲಿಕೆಯಾಗಿತ್ತು.
ಈ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠ, ಜಾತಿ ಆಧಾರಿತ ಮತ್ತು ಆರ್ಥಿಕತೆ ಆಧಾರಿತ ಮೀಸಲಿಗೆ ಅವಕಾಶ ಇದೆಯೇ ಹೊರತು ಧರ್ಮದ ಆಧಾರದ ಮೇಲೆ ಮೀಸಲು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, “ಇದು ಧರ್ಮದ ಆಧಾರದ ಮೇಲೆ ಅಲ್ಲ. ಇದು ಹಿಂದುಳಿದಿರುವಿಕೆಯ ಆಧಾರದ ಮೇಲೆ ನೀಡಲಾಗಿದೆ. ಸರ್ಕಾರ ಧರ್ಮ ಆಧಾರಿತ ಮೀಸಲು ನೀಡಿಲ್ಲ. ಎಲ್ಲಾ ಧರ್ಮಗಳಲ್ಲಿಯೂ ಹಿಂದುಳಿದ ಜನರಿದ್ದಾರೆ. ಜನರು ಆರ್ಥಿಕವಾಗಿ ಹಿಂದುಳಿದಿರುವುದನ್ನು ಗುರುತಿಸಿ ಮೀಸಲಾತಿ ಕಲ್ಪಿಸಲಾಗಿದೆ ಎಂದು ವಾದ ಮಂಡಿಸಿದರು.
ಮೀಸಲಾತಿ ನೀಡಲು ಹಿಂದುಳಿದಿರುವುದನ್ನು ಗುರುತಿಸಲು ಸರ್ಕಾರ ತೆಗೆದುಕೊಂಡ ಮಾನದಂಡದ ಪ್ರಮಾಣಿಕೃತ ದತ್ತಾಂಶಗಳು ಎಲ್ಲಿವೆ ಎಂದು ನ್ಯಾಯಮೂರ್ತಿ ಬಿ.ಆರ್. ಗವಾಯಿ ಪ್ರಶ್ನಿಸಿದರು.
ಸರ್ಕಾರದ ಬಳಿ ಅಗತ್ಯವಿರುವ ಎಲ್ಲಾ ಡೇಟಾಗಳು ಇವೆ. ಸಮಗ್ರ ಅಧ್ಯಯನ ನಡೆಸಿ ಮೀಸಲಾತಿ ನೀಡಲಾಗಿದೆ ಎಂದು ಕಪಿಲ್ ಸಿಬಲ್ ಉತ್ತರಿಸಿದ್ದಾರೆ. ಬಂಗಾಳ ಸರ್ಕಾರದ ಮೀಸಲು ನೀತಿಗೆ ಮಧ್ಯಂತರ ಆದೇಶ ನೀಡಬೇಕು. ಹೈಕೋರ್ಟ್ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಬೇಕು ಎಂಬ ಕಪಿಲ್ ಸಿಬಲ್ ವಾದವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, 2025ರ ಜನವರಿ 7 ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಪಶ್ಚಿಮ ಬಂಗಾಳದಲ್ಲಿ 2010 ರಿಂದ ನೀಡಲಾದ ಹಲವಾರು ಜಾತಿಗಳ ಒಬಿಸಿ ಸ್ಥಾನಮಾನವನ್ನ ಹೈಕೋರ್ಟ್ ರದ್ದುಗೊಳಿಸಿತ್ತು, ಸಾರ್ವಜನಿಕ ವಲಯದ ಉದ್ಯೋಗಗಳು ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಅವರಿಗೆ ಮೀಸಲಾತಿ ಕಾನೂನುಬಾಹಿರ ಎಂದು ಹೇಳಿತ್ತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ