ರೋಗಿಗೆ ಚಿಕಿತ್ಸೆ ನೀಡಲು ನಿರ್ಲಕ್ಷ್ಯ: ಇಬ್ಬರು ವೈದ್ಯರಿಗೆ ಬಿತ್ತು 2 ಲಕ್ಷ ರೂ. ದಂಡ
ಬಳ್ಳಾರಿ: ರೋಗಿಯೊಬ್ಬರಿಗೆ ಸಮರ್ಪಕ ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಇಬ್ಬರು ವೈದ್ಯರಿಗೆ ಹಾಗೂ ಇನ್ಸೂರೆನ್ಸ್ ಕಂಪನಿಗೆ ಬಳ್ಳಾರಿ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಎರಡು ಲಕ್ಷ ರೂಪಾಯಿ ದಂಡ ವಿಧಿಸಿದೆ.
ಬಳ್ಳಾರಿ ಬಂಡಿಹಟ್ಟಿಯ 23 ವರ್ಷದ ನೇತ್ರಾವತಿ ಸುನಂದಾ ಅವರು ಪೀರಿಯೆಡ್ಸ್ ಸಮಸ್ಯೆಯಿಂದ ಬಳಲುತ್ತಿದ್ದು, ಬಳ್ಳಾರಿ ಯ ಶ್ರೇಯನ್ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಮೋನಿಕಾ ಅವರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಸಮಯದಲ್ಲಿ ಸಮರ್ಪಕ ಚಿಕಿತ್ಸೆ ನೀಡುವ ಬದಲಿಗೆ ಅಡ್ಡ ಪರಿಣಾಮ ಆಗುವ ರೀತಿಯಲ್ಲಿ ಚಿಕಿತ್ಸೆ ನೀಡಿ ಡಾ. ಮೋನಿಕಾ ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗಿದೆ.
ಇದಾದ ನಂತರ ಡಾ. ಮೋನಿಕಾ ಅವರು ನರ ರೋಗತಜ್ಞ ಡಾ.ಚಂದ್ರಶೇಖರ್ ಅವರಿಗೆ ರೆಫರ್ ಮಾಡಿದ್ದರು. ಅವರೂ ಸಹ ರೋಗ ಪತ್ತೆ ಹಚ್ಚುವ ಬದಲಿಗೆ ಅಡ್ಡ ಪರಿಣಾಮ ಆಗುವ ರೀತಿಯಲ್ಲಿ ಚಿಕಿತ್ಸೆ ನೀಡಿ ನೇತ್ರಾವತಿ ಸುನಂದಾ ಅವರಿಗೆ ಪಾರ್ಶ್ವ ವಾಯು ಆಗುವುದಕ್ಕೆ ಕಾರಣರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ ನೇತ್ರಾವತಿ ಸುನಂದಾ ಪರವಾಗಿ ಆಕೆಯ ಪತಿ ಕೆ.ರಘುವೀರ ಅವರು ಗ್ರಾಹಕರ ವೇದಿಕೆಯ ಮೊರೆ ಹೋಗಿದ್ದರು. ವಾದ ಪ್ರತಿವಾದ ಆಲಿಸಿದ ಆಯೋಗದ ಅಧ್ಯಕ್ಷ ತಿಪ್ಪೇಸ್ವಾಮಿ ಎನ್. ಅವರು ತೀರ್ಪು ಪ್ರಕಟಿಸಿದ್ದಾರೆ.
ವೈದ್ಯಕೀಯ ಸೇವೆಯಲ್ಲಿನ ನ್ಯೂನ್ಯತೆಯ ಜೊತೆಗೆ ಕಕ್ಷಿದಾರಳಿಗೆ ಮಾನಸಿಕ ಹಿಂಸೆ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು, ವ್ಯಾಜ್ಯದ ಖರ್ಚು ವೆಚ್ಚಗಳನ್ನೊಳಗೊಂಡಂತೆ 2 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ತೀರ್ಪಿನಲ್ಲಿ ಆದೇಶಿಸಿದ್ದಾರೆ.
ಈ ಎರಡು ಲಕ್ಷಗಳ ಪೈಕಿ ಸ್ತ್ರೀರೋಗ ತಜ್ಞೆ ಡಾ.ಮೋನಿಕಾ’ ಒಂದು ಲಕ್ಷ ಹಾಗೂ ನರ ರೋಗ ತಜ್ಞ ಡಾ.ಚಂದ್ರಶೇಖರ್ ಮತ್ತು ಅವರ ಪರ ದಿ ನ್ಯೂ ಇಂಡಿಯನ್ ಅಶೂರೆನ್ಸ್ ಕಂಪನಿ ಜಂಟಿಯಾಗಿ ಒಂದು ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಸೂಚಿಸಲಾ ಗಿದೆ. ತೀರ್ಪು ಪ್ರಕಟಗೊಂಡ 45 ದಿನಗಳೊಳಗಾಗಿ ಪರಿಹಾರ ವಿತರಿಸಬೇಕು. ಒಂದು ವೇಳೆ ಹಣ ನೀಡುವುದನ್ನು ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ಶೇ. 6 ರಷ್ಟು ಬಡ್ಡಿಯೊಂದಿಗೆ ಪಾವತಿಸಬೇಕೆಂದು ತೀರ್ಪಿನಲ್ಲಿ ಸೂಚಿಸಿದ್ದಾರೆ. ನೇತ್ರಾವತಿ ಸುನಂದಾ ಪರ ಕೆ.ವೇಣುಗೋಪಾಲ ಅವರು ವಾದ ಮಂಡನೆ ಮಾಡಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ