23/12/2024

Law Guide Kannada

Online Guide

ಕಿರಿಯ ವಕೀಲರಿಗೆ ಕನಿಷ್ಠ ಸ್ಟೈಫಂಡ್‌ : BCI ಪ್ರಸ್ತಾವನೆ ಬೆಂಬಲಿಸಿದ ಸಿಜೆಐ ಸಂಜೀವ್ ಖನ್ನಾ …

ಬೆಂಗಳೂರು: ಸುಪ್ರೀಂ ಕೋರ್ಟ್ ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡ ಬೆನ್ನಲ್ಲೆ ಸಂಜೀವ್ ಖನ್ನಾ ಅವರು, ಕಿರಿಯ ವಕೀಲರಿಗೆ ಕನಿಷ್ಠ ಸ್ಟೇ ಫಂಡ್ ನೀಡಬೇಕೆನ್ನುವ ಭಾರತೀಯ ವಕೀಲರ ಪರಿಷತ್ತಿನ ಪ್ರಸ್ತಾವನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಸಂಜೀವ್ ಖನ್ನಾ ಅವರು ನೇಮಕವಾದ ಹಿನ್ನೆಲೆಯಲ್ಲಿ ಭಾರತೀಯ ವಕೀಲರ ಪರಿಷತ್‌ ನವದೆಹಲಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಜೆಐ ಸಂಜೀವ್ ಖನ್ನಾ,  ಕಿರಿಯ ವಕೀಲರು ಸಾಮಾನ್ಯವಾಗಿ ಕಾರ್ಪೊರೇಟ್ ವ್ಯಾಜ್ಯಗಳು ಅಥವಾ ಆಂತರಿಕ ಕಾರ್ಯ ನಿರ್ವಹಣೆಯನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದು ವೈಯಕ್ತಿಕ ಆಯ್ಕೆಯಷ್ಟೇ ಆಗಿರದೆ, ಆರ್ಥಿಕ ಭದ್ರತೆಯ ಕಾರಣಕ್ಕೆ. ವ್ಯಾಜ್ಯ ವಕೀಲಿಕೆಯಿಂದ ಯುವ ಪ್ರತಿಭೆಗಳು ನಿರ್ಗಮಿಸುತ್ತಿರುವುದು ಕೇವಲ ವೈಯಕ್ತಿಕ ಆಯ್ಕೆ ಅಲ್ಲ. ಅಂತಹ ಸಮಸ್ಯೆ ತಪ್ಪಿಸುವ ಮಾರ್ಗವೆಂದರೆ ಕಾನೂನು ಪ್ರಾಕ್ಟೀಸ್‌ ಮಾಡುವ ಕೆಲ ವರ್ಷಗಳ ಕಾಲ ಕಿರಿಯ ವಕೀಲರಿಗೆ ಕನಿಷ್ಠ ಸ್ಟೈಪಂಡ್‌ ನೀಡುವುದು ಎಂದು ಬಿಸಿಐನ ಇತ್ತೀಚಿನ ಪ್ರಸ್ತಾವನೆಯನ್ನು ಉಲ್ಲೇಖಿಸಿದರು.

ನ್ಯಾಯಾಧೀಶರು ಮತ್ತು ವಕೀಲರು ಒಬ್ಬರು ಮತ್ತೊಬ್ಬರ ಸಮತೋಲನ ಸಾಧಿಸಲು ಪೂರಕವಾದ ಪಾತ್ರ ಹೊಂದಿದ್ದಾರೆ. ಹೀಗಾಗಿ ಉತ್ತರದಾಯಿತ್ವಕ್ಕೆ ಸಂಬಂಧಿಸಿದಂತೆ ಇರುವ ಈ ತಡೆಗಳನ್ನು ಸಂಘರ್ಷವೆಂದು ತಪ್ಪಾಗಿ ಗ್ರಹಿಸಬಾರದು. ಈ ಇಬ್ಬರು ನಾಗರಿಕರೆಡೆಗೆ ಉತ್ತರಾದಾಯಿತ್ವ ಹೊಂದಿದ್ದಾರೆ ಎಂದು ಖನ್ನಾ ಅವರು ನುಡಿದರು.
ನ್ಯಾಯ ವ್ಯವಸ್ಥೆಯಲ್ಲಿ ವಕೀಲರು ನಿರ್ವಹಿಸಿದ ನಿರ್ಣಾಯಕ ಪಾತ್ರಗಳ ಬಗ್ಗೆಯೂ ಮಾತನಾಡಿದ ಸಿಜೆಐ ಸಂಜೀವ್ ಖನ್ನಾ ಅವರು, ಸಾಮಾನ್ಯವಾಗಿ ನ್ಯಾಯಾಧೀಶರನ್ನೇ ನ್ಯಾಯಾಂಗದ ಗೋಚರಿಸುವ ಭಾಗವಾಗಿ ನೋಡಲಾಗಿದ್ದರೂ, “ನ್ಯಾಯಾಂಗ” ಎಂಬುದು ವಕೀಲರನ್ನೂ ಸೂಚಿಸುವ ಪದವಾಗಿದೆ. ವಕೀಲ ಸಮುದಾಯ ಉತ್ತಮವಾಗಿದ್ದಷ್ಟೂ, ನ್ಯಾಯಾಧೀಶರು ಉತ್ತಮವಾಗಿರುತ್ತಾರೆ. ನಾಗರಿಕರು ಮತ್ತು ನ್ಯಾಯಾಧೀಶರ ನಡುವಿನ ಮೊದಲ ಸಂಪರ್ಕ ಕೊಂಡಿ ವಕೀಲರು. ವಕೀಲರು ಕೇವಲ ನ್ಯಾಯಾಲಯಕ್ಕೆ ಮಾತ್ರವೇ ಸಹಾಯ ಮಾಡುವುದಿಲ್ಲ, ಮೂಲಭೂತವಾಗಿ ಅವರು ಶಾಸನಗಳ ಪದಗಳಿಗೆ ಅರ್ಥವನ್ನು ನೀಡುವ ಮೂಲಕ ನೆಲದ ಕಾನೂನನ್ನು ರೂಪಿಸುತ್ತಿರುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.