ಲಾಕಪ್ ಡೆತ್ ಪ್ರಕರಣ : ನಾಲ್ವರು ಪೊಲೀಸರಿಗೆ 7 ವರ್ಷ ಜೈಲು ಶಿಕ್ಷೆ, ದಂಡ
ಬೆಂಗಳೂರು: ಪೊಲೀಸರ ವಶದಲ್ಲಿದ್ದ ಆರೋಪಿ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿಗೆ ಏಳು ವರ್ಷ ಜೈಲು ಶಿಕ್ಷೆ ಮತ್ತು 55,000 ರೂಪಾಯಿ ದಂಡ ವಿಧಿಸಿ ಬೆಂಗಳೂರಿನ ಸಿಐಡಿ ವಿಶೇಷ ಕೋರ್ಟ್ ತೀರ್ಪು ನೀಡಿದೆ.
ಜೀವನ್ ಭೀಮಾನಗರ ಠಾಣೆಯ ಅಂದಿನ ಅಪರಾಧ ವಿಭಾಗದ ಹೆಡ್ ಕಾನ್ಸ್ ಟೇಬಲ್ ಎಜಾಜ್ ಖಾನ್, ಕಾನ್ಸ್ ಟೇಬಲ್ ಗಳಾದ ಕೇಶವ ಮೂರ್ತಿ, ಮೋಹನ್ ರಾಮ್ ಹಾಗೂ ಸಿದ್ದಪ್ಪ ಬೊಮ್ಮನಹಳ್ಳಿ ಅವರಿಗೆ 7 ವರ್ಷಗಳ ಜೈಲು ಶಿಕ್ಷೆ ಹಾಗೂ 30 ಸಾವಿರ ಹಾಗೂ 25 ಸಾವಿರ ದಂಡ ವಿಧಿಸಲಾಗಿದೆ.
ಏನಿದು ಪ್ರಕರಣ
ಜೀವ ಭೀಮಾ ನಗರ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣ ಸಂಬಂಧ ಶಂಕಿತ ಆರೋಪಿ ಮಹೇಂದ್ರ ರಾಥೋಡ್ ಎಂಬಾತನನ್ನು 2016ರ ಮಾರ್ಚ್ 19ರಂದು ಬಂಧಿಸಿ ಠಾಣೆಗೆ ಕರೆತರಲಾಗಿತ್ತು. ಅದೇ ದಿನ ಸಂಜೆ ಮಹೇಂದ್ರ ರಾಥೋಡ್ ಉಸಿರಾಟದ ತೊಂದರೆ, ಎದೆನೋವು ಕಾಣಿಸಿಕೊಂಡು ಕುಸಿದುಬಿದ್ದು ಸಾವನ್ನಪ್ಪಿದ್ದ. ಈ ಕುರಿತು ಪ್ರಕರಣ ದಾಖಲಾಗಿ ಸಿಐಡಿ ತನಿಖೆ ನಡೆಸಿತ್ತು.
2019ರ ಜುಲೈ 18ರಂದು ಸಿಐಡಿ ಅಧಿಕಾರಿಗಳು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪೊಲೀಸ್ ಸಿಬ್ಬಂದಿಯ ನಿರ್ಲಕ್ಷ ಹಾಗೂ ದೈಹಿಕ ಹಲ್ಲೆ ಪರಿಣಾಮ ಆತ ಪೊಲೀಸ್ ವಶದಲ್ಲಿದ್ದಾಗಲೇ ಸಾವನ್ನಪ್ಪಿರುವುದು ಸಿಐಡಿ ತನಿಖೆಯಲ್ಲಿ ದೃಢಪಟ್ಟಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ ಸಿಐಡಿ ವಿಶೇಷ ಕೋರ್ಟ್ ಇಂದು ನಾಲ್ವರು ಪೊಲೀಸ್ ಸಿಬ್ಬಂದಿಗೆ 7 ವರ್ಷ ಜೈಲು ಶಿಕ್ಷೆ 55 ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ