23/12/2024

Law Guide Kannada

Online Guide

ಕರಾವಳಿಯಲ್ಲೂ ಹೈಕೋರ್ಟ್ ವಿಭಾಗೀಯ ಪೀಠ ನಿರ್ಮಾಣಕ್ಕೆ ಪ್ರಬಲ ಬೇಡಿಕೆಯಿಟ್ಟ ವಕೀಲರು

ಮಂಗಳೂರು: ಕರಾವಳಿ ಕರ್ನಾಟಕ ಭಾಗದ ಜನರಿಗೆ ಕರ್ನಾಟಕ ಹೈಕೋರ್ಟ್ ಎಂಬುದು ದೂರದ ಬೆಟ್ಟದಂತಾಗಿದ್ದು, ಬಹುತೇಕ ಮಂದಿ ದೂರದ ಬೆಂಗಳೂರಿಗೆ ಹೋಗಬೇಕೆಂಬ ಕಾರಣದಿಂದ ನ್ಯಾಯದಿಂದ ವಂಚಿತರಾಗಿದ್ದಾರೆ. ಹೀಗಾಗಿ ಇಂತಹದನ್ನು ತಪ್ಪಿಸುವ ಸಲುವಾಗಿ ಮಂಗಳೂರಿನಲ್ಲಿಯೇ ಹೈಕೋರ್ಟ್ ವಿಭಾಗೀಯ ಪೀಠ ನಿರ್ಮಾಣ ಮಾಡಬೇಕೆಂದು ವಕೀಲರು ಪ್ರಬಲ ಬೇಡಿಕೆಯಿಟ್ಟಿದ್ದಾರೆ

ಮಂಗಳೂರಿನಲ್ಲಿ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಸ್ಥಾಪನೆಗೆ ಒತ್ತಡ ಹೆಚ್ಚುತ್ತಿದೆ. ಈ ಮಧ್ಯೆ ಗುರುವಾರ ವಕೀಲರ ಸಂಘದ ನೇತೃತ್ವದಲ್ಲಿ ಹಿರಿಯ ವಕೀಲರ ಮಹತ್ವದ ಸಭೆ ನಡೆದಿದೆ.ಜೊತೆಗೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಹಿರಿಯ ಸಮಿತಿಯನ್ನು ರಚಿಸಲಾಗಿದೆ.

ಇದೀಗ ಅವರ ಬಹುದಿನಗಳ ನಿರೀಕ್ಷೆ ಈಗ ಗರಿಬಿಚ್ಚಿಕೊಂಡಿದ್ದು, ಉಡುಪಿ ವಕೀಲರು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. 10 ಎಕರೆ ಜಮೀನಿನಲ್ಲಿ ಸುಸಜ್ಜಿತ ಹೈಕೋರ್ಟ್ ಕಟ್ಟಡ ಸಂಕೀರ್ಣ ನಿರ್ಮಿಸಬಹುದು ಎಂಬ ಪ್ರಬಲ ಬೇಡಿಕೆ ಸಲ್ಲಿಸಿದ್ದಾರೆ.

ಮಂಗಳೂರಿನಲ್ಲಿ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಸ್ಥಾಪನೆಯಾಗಬೇಕು ಎಂಬ ಬೇಡಿಕೆ ಮತ್ತು ಹಕ್ಕೊತ್ತಾಯ ಮಂಡಿಸಲು ಹಿರಿಯ ವಕೀಲರ ಸಮಿತಿಯನ್ನು ರಚಿಸಲಾಗಿದೆ. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಈ ಹೋರಾಟಕ್ಕೆ ಬೆಂಬಲ ನೀಡಿದ್ದು, ನೇತೃತ್ವದ ಭರವಸೆ ನೀಡಿದ್ದಾರೆ. ಹಿರಿಯ ವಕೀಲರ ಮಾರ್ಗದರ್ಶನ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಹೋರಾಟವನ್ನು ತೀವುಗೊಳಿಸಲು ಮಂಗಳೂರು ವಕೀಲರು ಚರ್ಚೆ ನಡೆಸಿದ್ದಾರೆ.
ಬೇಡಿಕೆ ಮತ್ತು ಹಕ್ಕೊತ್ತಾಯಕ್ಕೆ ಕೈಜೋಡಿಸಿದ ಜಿಲ್ಲೆಯ ವಿವಿಧ ವಕೀಲರ ಸಂಘಗಳು

ಇನ್ನು ಮಂಗಳೂರಿನಲ್ಲಿ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಸ್ಥಾಪನೆಯಾಗಬೇಕು ಎಂಬ ಬೇಡಿಕೆ ಮತ್ತು ಹಕ್ಕೊತ್ತಾಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ವಕೀಲರ ಸಂಘಗಳೂ ಕೈಜೋಡಿಸಿವೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕು ವಕೀಲರ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಿ ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಲು ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೂಲಭೂತ ಸೌಕರ್ಯ ಇರುವ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ಐದು ಜಿಲ್ಲೆಗಳ ಜನರಿಗೆ ಇದರ ಪ್ರಯೋಜನ ಸಿಗಲಿದೆ. ಮಂಗಳೂರು ನಗರದ ಜೈಲು ತೆರವಾಗಲಿದೆ. ಕಾರಾಗೃಹ ನಗರದ ಹೊರವಲಯಕ್ಕೆ ಸ್ಥಳಾಂತರವಾಗಲಿದೆ. ಆಗ ಜೈಲಿನ ಪ್ರದೇಶ ತೆರವಾಗಲಿದ್ದು, ಸುಮಾರು ಐದರಿಂದ ಆರು ಎಕರೆ ಸ್ಥಳ ಲಭಿಸಲಿದೆ. ಈ ಸ್ಥಳ ಹೈಕೋರ್ಟ್ ಪೀಠ ಸ್ಥಾಪನೆಗೆ ಸೂಕ್ತ ಸ್ಥಳವಾಗಿದೆ ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ವಿ. ರಾಘವೇಂದ್ರ ಅಭಿಪ್ರಾಯಪಟ್ಟಿದ್ದಾರೆ ಅಲ್ಲದೆ ಮಂಗಳೂರು ನಗರ ಹೈಕೋರ್ಟ್ ಪೀಠ ಸ್ಥಾಪಿಸಲು ಸೂಕ್ತ ಪ್ರದೇಶವಾಗಿದ್ದು, ಮಂಗಳೂರು ನಗರಕ್ಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೌಲಭ್ಯ ರಸ್ತೆ, ಸಾರಿಗೆ ಸೌಲಭ್ಯ ಅಲ್ಲದೆ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನಗರವಾಗಿದೆ ಹಾಗೂ ಹೆಚ್ಚಿನ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿದೆ ಎಂದು ಹಿರಿಯ ವಕೀಲರು ವಿವರಿಸಿದ್ದಾರೆ.

ಕರ್ನಾಟಕ ರಾಜ್ಯ ವಕೀಲರ ಪರಿಷತ್ ಮಾಜಿ ಉಪಾಧ್ಯಕ್ಷರಾದ ತೋನ್ಸೆ ನಾರಾಯಣ ಪೂಜಾರಿ ಸಭೆಯಲ್ಲಿ ಉಪಸ್ಥಿತರಿದ್ದು ಬೆಂಬಲವನ್ನು ವ್ಯಕ್ತಪಡಿಸಿದರು. ಬಂಟ್ವಾಳ ವಕೀಲರ ಸಂಘ, ಬೆಳ್ತಂಗಡಿ ವಕೀಲರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಪುತ್ತೂರು ಮತ್ತು ಸುಳ್ಯ ತಾಲೂಕು ವಕೀಲರ ಸಂಘದ ಪ್ರತಿನಿಧಿಗಳೂ ಈ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಧಾರವಾಡ, ಕಲ್ಬರ್ಗಿಯಲ್ಲಿ ಹೈಕೋರ್ಟ್ ಪೀಠವಿದ್ದು ಇದೀಗ ಮಂಗಳೂರಿನಲ್ಲೂ ಹೈಕೋರ್ಟ್ ವಿಭಾಗೀಯ ಪೀಠ ಸ್ಥಾಪನೆಗೆ ಆಗ್ರಹ ಕೇಳಿಬಂದಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.