ಅತೀವ ಒತ್ತಡದಲ್ಲಿ ನ್ಯಾಯಮೂರ್ತಿಗಳ ಕಾರ್ಯನಿರ್ವಹಣೆ: ಹೈಕೋರ್ಟ್ ಕಳವಳ
ಬೆಂಗಳೂರು: ನ್ಯಾಯಮೂರ್ತಿಗಳಿಗೆ ರಜಾ ದಿನಗಳು ಹೆಚ್ಚು. ಹೀಗಾಗಿ ಅವರು ಅರಾಮವಾಗಿರುತ್ತಾರೆ ಎಂಬ ತಪ್ಪು ಕಲ್ಪನೆ ಬೇಡ. ನ್ಯಾಯಮೂರ್ತಿಗಳು ಅತೀವ ಒತ್ತಡದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುತ್ತಾರೆ ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತು ಮೌಖಿಕ ಆತಂಕವನ್ನು ಹೊರಹಾಕಿದೆ. ‘ಹೈಕೋರ್ಟ್ ನ್ಯಾಯಮೂರ್ತಿಗಳು ಭಾರಿ ಆರಾಮಾಗಿರುತ್ತಾರೆ. ಅವರಿಗೆ ರಜಾ ದಿನಗಳು ಹೆಚ್ಚು ಎಂಬ ತಪ್ಪು ಕಲ್ಪನೆ ಸಲ್ಲದು. ತಡೆಯಲಾರದ ಕೆಲಸದ ಒತ್ತಡವೇ ಇತ್ತೀಚಿನ ಕೆಲವು ನ್ಯಾಯಮೂರ್ತಿಗಳ ಸಾವುಗಳಿಗೆ ಮತ್ತೂ ಕೆಲವರ ಗುಣಪಡಿಸಲಾಗದ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದೆ.
ಪ್ರಕರಣದಲ್ಲಿ ವಾದ ಮಂಡಿಸುತ್ತಿದ್ದ ಪದಾಂಕಿತ ಹಿರಿಯ ವಕೀಲ ಉದಯ ಹೊಳ್ಳ ಅವರಿಗೆ ಈ ಕುರಿತಂತೆ ನೋವಿನಿಂದ ವಿವರಿಸಿದ ನ್ಯಾಯಮೂರ್ತಿಗಳು, ವಕೀಲ ವೃಂದವು ನ್ಯಾಯಪೀಠಕ್ಕೆ ಸಹಕರಿಸುವಂತೆ ಕಾರ್ಯ ನಿರ್ವಹಿಸಬೇಕು. ನ್ಯಾಯಮೂರ್ತಿಗಳ ಕಷ್ಟವನ್ನು ವಕೀಲರು ತಮ್ಮ ಕಕ್ಷಿದಾರರಿಗೆ ಮನವರಿಕೆ ಮಾಡಿಕೊಡಬೇಕು. ಈ ವಿಚಾರದಲ್ಲಿ ಪದಾಂಕಿತ ಮತ್ತು ಹಿರಿಯ ವಕೀಲರು ಮುಂದಾಗಬೇಕು’ ಎಂದು ಮನವಿ ಮಾಡಿದರು.
ನ್ಯಾಯಮೂರ್ತಿಗಳ ಖಾಸಗಿ ಜೀವನವೇ ಮೊಟಕಾಗಿರುತ್ತದೆ. ರಜಾ ದಿನಗಳಲ್ಲಿ ಅರ್ಜಿಗಳ ಪರಿಶೀಲನೆ, ಉಕ್ತಲೇಖನ, ಓದು ಇವುಗಳ ಹೊರೆ ಹೆಚ್ಚಿರುತ್ತದೆ. ಆದರೆ, ಇದನ್ನೆಲ್ಲಾ ಪರಿಗಣಿಸದೆ ರಜಾ ದಿನಗಳನ್ನು ಅವರು ಆರಾಮಾಗಿ ಅನುಭವಿಸುತ್ತಾರೆ ಎಂಬ ತಪ್ಪು ಕಲ್ಪನೆ ಬೇಡ. ಯಾರೇ ಆಗಲಿ ಬೇಕಾಬಿಟ್ಟಿ ಮಾತನಾಡಿಕೊಳ್ಳುವುದು ಸರಿಯಲ್ಲ. ‘ವಾಸ್ತವದಲ್ಲಿ ನ್ಯಾಯಮೂರ್ತಿಗಳು ಅತೀವ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಇದಕ್ಕೆ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿ ಮೋಹನ ಎಸ್. ಶಾಂತನ ಗೌಡರ್ ಅವರ ಇತ್ತೀಚಿನ ಸಾವು ಜ್ವಲಂತ ಉದಾಹರಣೆ ಎಂದು ನ್ಯಾಯಪೀಠ ತಿಳಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ