04/01/2025

Law Guide Kannada

Online Guide

ಗ್ರಾಹಕರ ನ್ಯಾಯಾಲಯಗಳಲ್ಲಿ ಪಕ್ಷಕಾರರನ್ನ ವಕೀಲರು ಮಾತ್ರವೇ ಪ್ರತಿನಿಧಿಸಬೇಕು- ಹೈಕೋರ್ಟ್

ನವದೆಹಲಿ: ಗ್ರಾಹಕರ ನ್ಯಾಯಾಲಯಗಳಲ್ಲಿ ಪಕ್ಷಕಾರರನ್ನು ವಕೀಲರು ಮಾತ್ರವೇ ಪ್ರತಿನಿಧಿಸುವುದನ್ನು ಖಾತರಿಪಡಿಸುವಂತೆ ದೆಹಲಿ ಗ್ರಾಹಕರ ಆಯೋಗಕ್ಕೆ ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ.

ಸೂಕ್ತ ಅನುಮತಿ ಇಲ್ಲದೇ ಮತ್ತು ಗ್ರಾಹಕರ ರಕ್ಷಣಾ ನಿಬಂಧನೆಗಳು ಮತ್ತು ವಕೀಲರ ಕಾಯಿದೆಗೆ ವಿರುದ್ಧವಾಗಿ ವಕೀಲೇತರರು ವ್ಯಾಪಕವಾಗಿ ಗ್ರಾಹಕರ ಆಯೋಗದಲ್ಲಿ ವಾದಿಸುತ್ತಿದ್ದಾರೆ ಎಂದು ಆಕ್ಷೇಪಿಸಿ ವಕೀಲರುಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ನರುಲಾ ಅವರಿದ್ದ ಏಕಸದಸ್ಯ ಪೀಠ, ಗ್ರಾಹಕರ ನ್ಯಾಯಾಲಯಗಳಲ್ಲಿ ಪಕ್ಷಕಾರರನ್ನು ವಕೀಲರು ಮಾತ್ರವೇ ಪ್ರತಿನಿಧಿಸಬೇಕು. ಪಕ್ಷಕಾರರಿಂದ ನಿಯೋಜನೆಗೊಂಡ ಯಾವುದೇ ವ್ಯಕ್ತಿಯು ಪಕ್ಷಕಾರರನ್ನು ಪ್ರತಿನಿಧಿಸುವಂತಿಲ್ಲ . ದೆಹಲಿಯ ಎಲ್ಲಾ ಗ್ರಾಹಕ ಆಯೋಗಗಳು ಪಕ್ಷಕಾರರನ್ನು ವಕೀಲರು ಅಥವಾ ಅವರ ಏಜೆಂಟರು ಪ್ರತಿನಿಧಿ ಅಥವಾ ವಕೀಲೇತರರು ನಿಬಂಧನೆಗಳಿಗೆ ಅನುಗುಣವಾಗಿ ಪ್ರತಿನಿಧಿಸುವುದನ್ನು ಖಾತರಿಪಡಿಸಿಕೊಳ್ಳುವಂತೆ ನಿರ್ದೇಶಿಸಿದೆ.

ಪಕ್ಷಕಾರರು ವಕೀಲರಿಗೆ ಮಾತ್ರ ವ್ಯಾಜ್ಯದಲ್ಲಿ ತಮ್ಮನ್ನು ಪ್ರತಿನಿಧಿಸಲು ಅಧಿಕಾರ ನೀಡಬಹುದು. ಪಕ್ಷಕಾರರು ಸಹಿ ಹಾಕಿದ ಅಧಿಕೃತ ವಕಾಲತ್ ನಾಮವನ್ನು ಹಾಜರುಪಡಿಸಿದರೆ ಮಾತ್ರ ಪ್ರಕರಣದಲ್ಲಿ ವಕೀಲರು ಹಾಜರಾಗಲು ಅನುಮತಿ ಇದೆ. ಅದನ್ನು ಹೊರತುಪಡಿಸಿ, ಪಕ್ಷಕಾರರು ನೀಡುವ ಅಧಿಕಾರ ಪತ್ರಗಳ ಆಧಾರದ ಮೇರೆಗೆ ವಕೀಲರಲ್ಲದವರು ಅಥವಾ ಅವರ ಏಜೆಂಟರುಗಳಿಗೆ ಹಾಜರಾಗಲು ಅನುಮತಿ ನೀಡುವ ಅಭ್ಯಾಸವನ್ನು ತಕ್ಷಣವೇ ಜಾರಿಗೆ ಬರುವಂತೆ ನಿಲ್ಲಿಸಬೇಕು ಎಂದು ನ್ಯಾಯಪೀಠ ಸೂಚನೆ ನೀಡಿದೆ

ವಕೀಲರು ನೀಡುವ ಅಧಿಕಾರ ಪತ್ರಗಳ ಆಧಾರದ ಮೇಲೆ ವಕೀಲರಲ್ಲದವರು ಅಥವಾ ಏಜೆಂಟರುಗಳಿಗೆ ಹಾಜರಾಗಲು ಅನುಮತಿ ನೀಡುವ ಅಭ್ಯಾಸವನ್ನು ತಕ್ಷಣವೇ ಜಾರಿಗೆ ಬರುವಂತೆ ನಿಲ್ಲಿಸಬೇಕು ಅಲ್ಲದೇ, ಭಾರತೀಯ ವಕೀಲರ ಪರಿಷತ್ ಮತ್ತು ದೆಹಲಿ ವಕೀಲರ ಪರಿಷತ್ಗೆ ನೋಟಿಸ್ ಜಾರಿ ಮಾಡಿರುವ ನ್ಯಾಯಪೀಠವು ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ.

ವಕೀಲರಲ್ಲದವರು ಹಾಜರಾಗುತ್ತಿರುವ ಬಾಕಿ ಇರುವ ಪ್ರಕರಣಗಳ ಪಟ್ಟಿ ಸಲ್ಲಿಸುವಂತೆ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಮತ್ತು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದ್ದು, ವಕೀಲರಲ್ಲದವರಿಗೆ ವಾದಿಸಲು ಅವಕಾಶ ನೀಡುವುದು ಪಕೀಲರ ಕಾಯಿದೆಯ ನಿಬಂಧನೆಗಳೊಂದಿಗೆ ಮೂಲಭೂತವಾಗಿ ಅಸಮಂಜಸವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.