ಪತಿ ಜೊತೆ ಪತ್ನಿ ವಾಸಿಸಲು ನಿರಾಕರಿಸಿದರೇ ಆಕೆಗೆ ಜೀವನಾಂಶ ಕೊಡಬೇಕಾಗುತ್ತದೆಯೇ..? ಕಾನೂನಿನ ಪ್ರಶ್ನೆ ಇತ್ಯರ್ಥಪಡಿಸಿದ ಸುಪ್ರೀಂ
ನವದೆಹಲಿ: ಪತಿ ಜೊತೆ ಪತ್ನಿ ವಾಸಿಸಲು ನಿರಾಕರಿಸಿದರೇ ಆಕೆಗೆ ಜೀವನಾಂಶ ಕೊಡಬೇಕಾಗುತ್ತದೆಯೇ ಎಂಬ ಕಾನೂನಿನ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್ ಇತ್ಯರ್ಥ ಪಡಿಸಿದೆ.
ಪತ್ನಿಯು ಪತಿಯ ಜೊತೆ ಬಾಳಬೇಕು ಎಂದು ಕೋರ್ಟ್ ನೀಡಿದ ಆದೇಶವನ್ನು ಪಾಲಿಸದೆ ಇದ್ದಾಗ, ಆತನ ಜೊತೆ ಬಾಳ್ವೆ ನಡೆಸುವುದಕ್ಕೆ ಒಪ್ಪದೇ ಇರುವುದಕ್ಕೆ ಆಕೆಗೆ ಸಕಾರಣಗಳು ಇದ್ದಾಗ, ಆಕೆಗೆ ಪತಿಯಿಂದ ಜೀವನಾಂಶ ಪಡೆಯುವ ಹಕ್ಕನ್ನು ನೀಡಬಹುದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರು ಇರುವ ವಿಭಾಗೀಯ ಪೀಠ ತಿಳಿಸಿದೆ. ಈ ವಿಚಾರವಾಗಿ ಇಂಥದ್ದೇ ನಿಯಮ ಎಂಬುದು ಇಲ್ಲ. ಇದು ಪ್ರಕರಣವನ್ನು ಆಧರಿಸಿರುತ್ತದೆ ಎಂದು ಪೀಠವು ಹೇಳಿದೆ.
ಪರಸ್ಪರ ಬೇರೆಯಾಗಿರುವ, ಜಾರ್ಖಂಡ್ ನ ಪತಿ-ಪತ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಮಾನ ನೀಡಿದೆ. ಇವರು 2014ರ ಮೇ 1ರಂದು ಮದುವೆಯಾಗಿದ್ದರು. ಆದರೆ 2015ರ ಆಗಸ್ಟ್ನಲ್ಲಿ ಬೇರೆಯಾದರು. ದಂಪತಿ ಒಟ್ಟಾಗಿ ಬಾಳಬೇಕು ಎಂಬ ಆದೇಶ ನೀಡಬೇಕು ಎಂಬ ಕೋರಿಕೆಯೊಂದಿಗೆ ಪತಿಯು ರಾಂಚಿಯ ಕೌಟುಂಬಿಕ ನ್ಯಾಯಾಲಯದ ಮೊರೆ ಹೋದರು. ಪತಿಯು ತನಗೆ ಕಿರುಕುಳ ನೀಡುತ್ತಿದ್ದಾನೆ, Rs 5 ಲಕ್ಷ ವರದಕ್ಷಿಣೆಗೆ ಪೀಡಿಸುತ್ತಿದ್ದಾನೆ ಎಂದು ಪತ್ನಿಯು ನ್ಯಾಯಾಲಯಕ್ಕೆ ತಿಳಿಸಿದ್ದಳು. ಪತಿಯು ಪತ್ನಿಯ ಜೊತೆ ವಾಸಿಸಲು ಬಯಸುತ್ತಿದ್ದಾನೆ ಎಂದು ಹೇಳಿದ್ದ ಕೌಟುಂಬಿಕ ನ್ಯಾಯಾಲಯವು, ಪರಸ್ಪರರು ಒಟ್ಟಿಗೆ ಬಾಳ್ವೆ ನಡೆಸಬೇಕು ಎಂದು 2022ರಲ್ಲಿ ಆದೇಶಿಸಿತ್ತು. ಆದರೆ ಈ ಆದೇಶವನ್ನು ಪತ್ನಿ ಪಾಲಿಸಲಿಲ್ಲ.
ಬದಲಿಗೆ ಆಕೆಯು, ತನಗೆ ಜೀವನಾಂಶ ಬೇಕು ಎಂದು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದಳು. ಪತ್ನಿಗೆ ತಿಂಗಳಿಗೆ ಖs 10 ಸಾವಿರ ಜೀವನಾಂಶ ನೀಡಬೇಕು ಎಂದು ನ್ಯಾಯಾಲಯವು ಪತಿಗೆ ಆದೇಶಿಸಿತು.
ನಂತರದಲ್ಲಿ ಪತಿಯು ಈ ಆದೇಶವನ್ನು ಪ್ರಶ್ನಿಸಿ ಜಾರ್ಖಂಡ್ ಹೈಕೋರ್ಟ್ ಮೆಟ್ಟಿಲೇರಿದರು. ಕೌಟುಂಬಿಕ ನ್ಯಾಯಾಲಯದ ಆದೇಶವಿದ್ದರೂ ಪತ್ನಿಯು ತನ್ನ ಗಂಡನ ಮನೆಗೆ ಹೋಗಿಲ್ಲ. ಪತ್ನಿಗೆ ಜೀವನಾಂಶವನ್ನು ಕೊಡಬೇಕಿಲ್ಲ ಎಂದು ಅದು ಆದೇಶ ನೀಡಿತು. ಈ ಆದೇಶವನ್ನು ಪ್ರಶ್ನಿಸಿ ಪತ್ನಿಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಳು.
ಹೈಕೋರ್ಟ್ ಆದೇಶವನ್ನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್, ಪತ್ನಿಯ ಮೇಲ್ಮನವಿಯನ್ನು ಮಾನ್ಯ ಮಾಡಿತು. ಪತಿಯ ಮನೆಯಲ್ಲಿ ಈಕೆಗೆ ಶೌಚಾಲಯ ಬಳಸಲು ಅವಕಾಶ ಕೊಡುತ್ತಿರಲಿಲ್ಲ, ಆಕೆಗೆ ಅಡುಗೆ ಮಾಡಲು ಸೂಕ್ತ ಸೌಲಭ್ಯ ಒದಗಿಸುತ್ತಿರಲಿಲ್ಲ, ಇವರು ಆಕೆಯನ್ನು ಅಲ್ಲಿ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಎಂಬುದನ್ನು ಸೂಚಿಸುತ್ತಿವೆ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ತಿಳಿಸಿದೆ.
ಅಲ್ಲದೆ ಮದುವೆಯ ಸಂಬಂಧವನ್ನು ಪುನರ್ ಸ್ಥಾಪಿಸುವ ಕೋರ್ಟ್ ಆದೇಶವನ್ನು ಪತ್ನಿಯು ಪಾಲಿಸಿಲ್ಲ ಎಂದಾದರೆ, ಅದೊಂದೇ ಕಾರಣಕ್ಕೆ ಆಕೆಗೆ ಜೀವನಾಂಶ ನಿರಾಕರಿಸಲು ಆಗುತ್ತದೆಯೇ ಎಂಬ ಪ್ರಶ್ನೆಗೆ ಹಲವು ಹೈಕೋರ್ಟ್ಗಳು ಉತ್ತರ ಒದಗಿಸಿವೆ. ಆದರೆ ಈ ವಿಚಾರದಲ್ಲಿ ನಿರ್ದಿಷ್ಟವಾದ ಅಭಿಪ್ರಾಯ ಇಲ್ಲ ಎಂದು ಸುಪ್ರೀಂ ಕೋರ್ಟ್ ಪೀಠವು ಹೇಳಿದೆ.
ಪ್ರಕರಣದ ಸತ್ಯಾಸತ್ಯತೆಯನ್ನು ಇದು ಆಧರಿಸಿರುತ್ತದೆ. ಕೋರ್ಟ್ ಆದೇಶದ ಹೊರತಾಗಿಯೂ, ಪತಿಯ ಜೊತೆ ಬಾಳ್ವೆ ನಡೆಸುವುದನ್ನು ನಿರಾಕರಿಸುವುದಕ್ಕೆ ಪತ್ನಿಗೆ ಸಾಕಷ್ಟು ಕಾರಣಗಳು ಇದ್ದವೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ ಎಂದು ಪೀಠ ವಿವರಿಸಿದೆ. ಹಾಗೆಯೇ ಬೇರೆಯಾಗಿರುವ ಪತ್ನಿಗೆ ತಿಂಗಳಿಗೆ ₹10 ಸಾವಿರ ಜೀವನಾಂಶ ಕೊಡಬೇಕು ಎಂದು ಪತಿಗೆ ಸೂಚನೆ ನೀಡಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ