ವೈಯಕ್ತಿಕ ವೆಚ್ಚಗಳಿಗಾಗಿ ಹೆಂಡತಿಯರಿಗೆ ಗಂಡಂದಿರು ಹಣ ಕೊಡಲೇಬೇಕು- ಗೃಹಿಣಿಯರ ಹಕ್ಕು ಒತ್ತಿ ಹೇಳಿದ ಸುಪ್ರೀಂ ಕೋರ್ಟ್
ನವದೆಹಲಿ: ದೇಶದಲ್ಲಿ ಯಾವುದೇ ಒಂದು ಕುಟುಂಬ ನಿರ್ವಹಣೆಯಲ್ಲಿ ಹೆಣ್ಣಿನ ಪಾತ್ರ ದೊಡ್ಡದು. ಮಕ್ಕಳ ಲಾಲನೆ ಪಾಲನೆ, ಹಿರಿಯ ಪೋಷಕರ ಹಾರೈಕೆ, ಮನೆಯ ಕೆಲಸ ಹೀಗೆ ಕುಟುಂಬಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಡುವ ಸಾಕಷ್ಟು ಗೃಹಿಣಿಯರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ದುಡಿಯುತ್ತಲೇ ಇರುತ್ತಾರೆ. ಸಾಕಷ್ಟು ನೋವುಂಡು ತಮ್ಮ ಕುಟುಂಬದ ಏಳ್ಗೆಗಾಗಿ ಬದುಕನ್ನು ಸವೆಸುತ್ತಿರುವ ಕೋಟ್ಯಂತರ ಮಹಿಳೆಯರ ಬಗ್ಗೆ, ಅವರ ಹಕ್ಕುಗಳ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಹೌದು, ಗೃಹಿಣಿಯರ ಪಾತ್ರ ಮತ್ತು ಕುಟುಂಬಕ್ಕಾಗಿ ಅವರು ಮಾಡುವ ತ್ಯಾಗವನ್ನು ಭಾರತೀಯ ಪುರುಷರು ಗುರುತಿಸುವ ಸಮಯ ಬಂದಿದೆ. ಕುಟುಂಬಕ್ಕಾಗಿ ಜೀವನ ಸವೆಸುವ ಹೆಂಡತಿಯರಿಗೆ ಗಂಡಂದಿರು ಆರ್ಥಿಕ ನೆರವು ನೀಡುವುದು ಅಗತ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಗೃಹಿಣಿಯರ ಹಕ್ಕುಗಳನ್ನು ಒತ್ತಿ ಹೇಳುವ ಮೂಲಕ ಭಾರತೀಯ ಗೃಹಿಣಿಯರ ಮೂಕವೇದನೆಗೆ ದನಿಯಾಗಿದೆ.
ಹೆಂಡತಿ ಆರ್ಥಿಕವಾಗಿ ಸಬಲರಾಗಲು ನೆರವು ನೀಡಿ
ನ್ಯಾಯಮೂರ್ತಿ ನಾಗರತ್ನ ಅವರು ತಮ್ಮ ತೀರ್ಪಿನಲ್ಲಿ, ಭಾರತೀಯ ವಿವಾಹಿತ ಪುರುಷನು ತನ್ನ ಹೆಂಡತಿಗೆ ಆರ್ಥಿಕವಾಗಿ ಸಬಲರಾಗಲು ನೆರವು ನೀಡಬೇಕು. ಸ್ವತಂತ್ರ ಆದಾಯದ ಮೂಲವನ್ನು ಹೊಂದಿರದ ತನ್ನ ಹೆಂಡತಿಗೆ, ವಿಶೇಷವಾಗಿ ಅವಳ ವೈಯಕ್ತಿಕ ಅಗತ್ಯಗಳಿಗಾಗಿ ಹಣಕಾಸಿನ ಸಂಪನ್ಮೂಲಗಳನ್ನು ಲಭ್ಯವಾಗುವಂತೆ ಮಾಡಬೇಕು ಎಂಬ ಅಂಶವನ್ನು ಹೇಳಿದ್ದಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಗಂಡನ ಹಣಕಾಸಿನ ಸಂಪನ್ಮೂಲಗಳಿಗೆ ಹೆಂಡತಿಗೂ ಪ್ರವೇಶವನ್ನು ನೀಡುವುದು ಎಂದು ನ್ಯಾ. ನಾಗರತ್ನ ವ್ಯಾಖ್ಯಾನಿಸಿದ್ದಾರೆ
ಭಾರತೀಯ ವಿವಾಹಿತ ಪುರುಷರು ತಮ್ಮ ಸಂಗಾತಿಗೆ ತಮ್ಮ ವೈಯಕ್ತಿಕ ವೆಚ್ಚಗಳಿಗಾಗಿ ಹಣ ನೀಡಬೇಕು. ಮನೆಯ ಖರ್ಚನ್ನು ಹೊರತುಪಡಿಸಿ ಅವರದ್ದೇ ವೈಯಕ್ತಿಕ ಖರ್ಚಿಗೆ ಹಣ ನೀಡಬೇಕು. ಜಂಟಿ ಬ್ಯಾಂಕ್ ಖಾತೆಯನ್ನು ಹೊಂದುವ ಮೂಲಕ ಅಥವಾ ಎಟಿಎಂ ಕಾರ್ಡ್ ನೀಡಬೇಕು ಎಂದು ನ್ಯಾಯಪೀಠ ಹೇಳಿದೆ.
ವಿಚ್ಛೇದಿತ ಮುಸ್ಲಿಂ ಮಹಿಳೆ ಜೀವನಾಂಶ ಪಡೆಯಲು ಅರ್ಹ
ಇನ್ನು ಮುಸ್ಲೀಂ ಮಹಿಳೆಯರ ಜೀವನಾಂಶದ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಿಚ್ಛೇದಿತ ಮುಸ್ಲಿಂ ಮಹಿಳೆ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 125 ರ ಅಡಿಯಲ್ಲಿ ತನ್ನ ಪತಿಯಿಂದ ಜೀವನಾಂಶವನ್ನು ಪಡೆಯಬಹುದು ಎಂದು ನ್ಯಾಯಮೂರ್ತಿ ಬಿ.ವಿ ನಾಗರತ್ನ ಮತ್ತು ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠವು ಈ ಅಭಿಪ್ರಾಯವನ್ನು ನೀಡಿದೆ.
ಜೀವನಾಂಶ ಕೋರುವ ಕಾನೂನು ಎಲ್ಲಾ ವಿವಾಹಿತ ಮಹಿಳೆಯರಿಗೆ ಅವರ ಧರ್ಮವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಜೊತೆಗೆ ಗೃಹಿಣಿಯ ಹಕ್ಕುಗಳನ್ನು ಸಹ ಎತ್ತಿ ಹಿಡಿದಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ