ಇನ್ನೂ HSRP ನಂಬರ್ ಹಾಕದ ವಾಹನ ಮಾಲೀಕರಿಗೆ ಗುಡ್ ನ್ಯೂಸ್ ಕೊಟ್ಟ ಹೈಕೋರ್ಟ್
ಬೆಂಗಳೂರು: ಇನ್ನೂ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ (HSRP) ಅಳವಡಿಸದ ವಾಹನ ಮಾಲೀಕರಿಗೆ ಹೈಕೋರ್ಟ್ ಸಿಹಿಸುದ್ದಿ ನೀಡಿದ್ದು ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆ ಗಡುವನ್ನು ನವೆಂಬರ್ 20 ರವರೆಗೆ ವಿಸ್ತರಣೆ ಮಾಡಿದೆ.
HSRP ಬೋರ್ಡ್ ಅಳವಡಿಸದ ವಾಹನಗಳಿಗೆ ದಂಡ ಹಾಕಲಾಗುವುದು ಎಂಬ ಸಾರಿಗೆ ಸಚಿವರ ಬೆದರಿಕೆ ಹಿನ್ನೆಲೆಯಲ್ಲಿ ಹೈಕೋರ್ಟ್ ವಿಚಾರಣೆ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿತ್ತು. ಈ ಹಿಂದೆ ಸಾರಿಗೆ ಹೊರಡಿಸಿದ್ದ ಸುತ್ತೋಲೆ ಪ್ರಕಾರ, ಸೆಪ್ಟೆಂಬರ್ 15ಕ್ಕೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಲು ಕಡೇ ದಿನವಾಗಿತ್ತು.
ನಿರ್ದಿಷ್ಟ ಡೀಲರ್ ಗಳು ಮಾತ್ರ ಇಂತಹ ಬೋರ್ಡ್ ಗಳನ್ನು ಅಳವಡಿಸಬೇಕು ಎಂಬುದಕ್ಕೆ ಆಕ್ಷೇಪಿಸಿ ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನವೆಂಬರ್ 20ರ ವರೆಗೆ ಮುಂದೂಡಿದೆ.
ಹೈಕೋರ್ಟ್ ನ್ಯಾ. ಕೆ. ಕಾಮೇಶ್ವರ ರಾವ್ ಮತ್ತು ನ್ಯಾ. ಕೆ. ರಾಜೇಶ್ ರೈ ಅವರಿದ್ದ ವಿಭಾಗೀಯ ಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ವಿಚಾರಣೆಯನ್ನು ನವೆಂಬರ್ 20ಕ್ಕೆ ಮುಂದೂಡಲಾಗಿದೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.
ವಾಹನ ತಯಾರಿಸುವ ಮೂಲ ಸಾಧನಗಳ ಉತ್ಪಾದಕರಿಂದ ಅನುಮತಿ ಪಡೆದಿರುವ HSRP ಉತ್ಪಾದಕರು ಮಾತ್ರ ಹಳೆಯ ವಾಹನಗಳಿಗೆ ನಂಬರ್ ಪ್ಲೇಟ್ ಪೂರೈಸಬೇಕು ಮತ್ತು ಅನುಮತಿ ಹೊಂದಿರುವ ಡೀಲರ್ಗಳು ಮಾತ್ರ HSRP ನಂಬರ್ ಪ್ಲೇಟ್ ಅಳವಡಿಸಬೇಕು ಎಂಬ ನಿರ್ಬಂಧ ಹಾಕಲಾಗಿತ್ತು. ಅಲ್ಲದೆ, ನೂತನ ನಂಬರ್ ಪ್ಲೇಟ್ ಅನ್ನು ಮೂರು ತಿಂಗಳ ಒಳಗೆ ಅಳವಡಿಸಬೇಕು ಎಂಬ ಸಾರಿಗೆ ಇಲಾಖೆಯ ಸುತ್ತೋಲೆಗೆ ಏಕಸದಸ್ಯ ನ್ಯಾಯಪೀಠ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ವಿಸ್ತ್ರತ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು.
ಪಕ್ಷಕಾರರ ಪರ ಹಾಜರಿದ್ದ ವಕೀಲರ ವಿನಂತಿ ಮೇರೆಗೆ ಈ ಪ್ರಕರಣವನ್ನು ಹೈಕೋರ್ಟ್ ನವೆಂಬರ್ 20ಕ್ಕೆ ಮುಂದೂಡಿಕೆ ಮಾಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ