23/12/2024

Law Guide Kannada

Online Guide

ಹೈಟೆಕ್ ನ್ಯಾಯದಾನ ವ್ಯವಸ್ಥೆ: ದೇಶದ ಮೊದಲ 24 ಘಿ7 ಆನ್ ಲೈನ್ ಕೋರ್ಟ್ ಉದ್ಘಾಟನೆ

ಕೇರಳ: ದೂರುದಾರರು ಕೋರ್ಟ್ ಮೆಟ್ಟಿಲು ಹತ್ತದೆಯೇ, ತಮ್ಮ ಅರ್ಜಿಗಳನ್ನು ಆನ್ ಲೈನ್ ಮೂಲಕವೇ ಸಲ್ಲಿಸಿ ಆನ್ ಲೈನ್ ಮೂಲಕವೇ ಅಗತ್ಯ ಶುಲ್ಕವನ್ನು ಪಾವತಿಸಬಹುದು. ಹಾಗೆಯೇ ಆನ್ ಲೈನ್ ಮೋಡ್ ನಲ್ಲಿ ನ್ಯಾಯಾಲಯದ ಕಲಾಪ ಹಾಗೂ ವಿಚಾರಣೆಗೂ ಹಾಜರಾಗಬಹುದು. ಹೌದು ಇಂತಹದೊಂದು ಹೈಟೆಕ್ ನ್ಯಾಯದಾನ ವ್ಯವಸ್ಥೆಯನ್ನು ಇದೀಗ ಅಳವಡಿಸಿಕೊಳ್ಳಲಾಗಿದೆ.

ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗುತ್ತಿದ್ದು ಈ ಮಧ್ಯೆ ವಾರದ ಏಳು ದಿನಗಳು ಹಾಗೂ ದಿನದ ಎಲ್ಲ 24 ಗಂಟೆಗಳೂ ಕಾರ್ಯನಿರ್ವಹಿಸುವ ದೇಶದ ಮೊದಲ 24 ಘಿ7 ಆನ್ ಲೈನ್ ಕೋರ್ಟ್ ಕೇರಳದ ಕೊಲ್ಲಂನಲ್ಲಿ ಉದ್ಘಾಟನೆಗೊಂಡಿದೆ. ಇಲ್ಲಿ ದೂರು ಸಲ್ಲಿಕೆಯಿಂದ ಹಿಡಿದು ವಿಚಾರಣೆಯವರೆಗೆ ಎಲ್ಲವೂ ಡಿಜಿಟಲ್ ಕೋರ್ಟ್ ರೂಮ್ ನಲ್ಲೇ ಕಾರ್ಯಕಲಾಪಗಳು ನಡೆಯಲಿವೆ.

ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಸೂರ್ಯ ಸುಕುಮಾರನ್ ಈ ಆನ್ ಲೈನ್ ಕೋರ್ಟ್ ನ ಮೊದಲ ಕಲಾಪವನ್ನು ನಡೆಸಿಕೊಟ್ಟಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ನ್ಯಾಯಾಂಗ ಇಲಾಖೆಯ ಅಧಿಕಾರಿಗಳು, ಆರಂಭಿಕವಾಗಿ ಚೆಕ್ ಬೌನ್ಸ್ ಸಂಬಂಧಿಸಿದ ಪ್ರಕರಣಗಳನ್ನು ಮಾತ್ರ ಇಲ್ಲಿ ಇತ್ಯರ್ಥಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ಇತರೆ ಪ್ರಕರಣಗಳ ವಿಚಾರಣೆಯೂ ನಡೆಯಲಿದೆ ಎಂದು ತಿಳಿಸಿದ್ದಾರೆ.

ವಕೀಲರು ಸಾಕ್ಷ್ಯಗಳು ಮತ್ತು ಸಾಕ್ಷಿಗಳನ್ನು ಆನ್ ಲೈನ್ ಮೂಲಕವೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಬಹುದಾಗಿದೆ. ಆರೋಪಿಗಳಿಗೆ ಸಮನ್ಸ್ ಗಳನ್ನೂ ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ವಿದ್ಯುನ್ಮಾನ ವ್ಯವಸ್ಥೆಯಲ್ಲೇ ತಲುಪಿಸಲಾಗುವುದು. ಜಾಮೀನು ಅರ್ಜಿಗಳನ್ನೂ ಆನ್ಲೈನ್ ಮೂಲಕವೇ ಸಲ್ಲಿಸಲು ಅವಕಾಶ ಇದೆ.

ಕೊಲ್ಲಂನ ಆನ್ಲೈನ್ ಕೋರ್ಟ್ ನಲ್ಲಿ ಮೂರು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ (ಜೆಎಂಎಫ್ಸಿ)ಗಳು ಮತ್ತು ಒಂದು ಮುಖ್ಯ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯ ಕಾರ್ಯ ನಿರ್ವಹಿಸಲಿವೆ. ದಿನದ ಯಾವುದೇ ಸಮಯದಲ್ಲೂ ಪ್ರಕರಣವನ್ನು ದಾಖಲಿಸಲು ಅನುಕೂಲ ಕಲ್ಪಿಸಲಾಗಿದ್ದು, ವಿಶ್ವದ ಯಾವುದೇ ಮೂಲೆಯಿಂದಲೂ ಪ್ರಕರಣವನ್ನು ಹಾಜರುಪಡಿಸಬಹುದಾದ ವ್ಯವಸ್ಥೆಯನ್ನ ಆನ್ ಲೈನ್ ಕೋರ್ಟ್ ನಲ್ಲಿ ಅಳವಡಿಸಲಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.