“ಗೆಟ್ ಔಟ್” ಎಂದು ಅವಾಜ್, ಆಕ್ಷೇಪಾರ್ಹ ವರ್ತನೆ: ಹಿರಿಯ ವಕೀಲರ ಬಳಿ ಕ್ಷಮೆ ಕೋರುವಂತೆ ಉಪ ವಿಭಾಗಾಧಿಕಾರಿಗೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು: ಬಹಿರಂಗ ನ್ಯಾಯಾಲಯದಲ್ಲೇ ಹಿರಿಯ ವಕೀಲರೊಬ್ಬರಿಗೆ “ಗೆಟ್ ಔಟ್” ಎಂದು ಅವಾಜ್ ಹಾಕಿ ಆಕ್ಷೇಪಾರ್ಹ ವರ್ತನೆ ತೋರಿದ್ದ ಉಪ ವಿಭಾಗಾಧಿಕಾರಿಗೆ ಹಿರಿಯ ವಕೀಲರ ಬಳಿ ಕ್ಷಮಾಪಣೆ ಕೋರುವಂತೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.
ಉಡುಪಿ ಜಿಲ್ಲೆಯ ಕುಂದಾಪುರ ಉಪ ವಿಭಾಗಾಧಿಕಾರಿ ಆಗಿದ್ದಾಗ ಚಾರುಲತಾ ಸೋಮಲ್ ಅವರು ಕಂದಾಯ ಪ್ರಕರಣ ಒಂದಕ್ಕೆ ಸಂಬಂಧಪಟ್ಟಂತೆ ವಿಚಾರಣೆಯ ಸಂದರ್ಭದಲ್ಲಿ ವಕೀಲರಾದ ಶಿರಿಯಾರ ಮುದ್ದಣ್ಣ ಶೆಟ್ಟಿ ಅವರ ವಿರುದ್ಧ ಈ ರೀತಿ ಮಾನಹಾನಿ ಪದಬಳಕೆ ನಡೆಸಿದ್ದರು.
ಇದೀಗ ಹೈಕೋರ್ಟ್ ನ್ಯಾಯಮೂರ್ತಿ ಎಸ್. ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶದ ಮೂಲಕ ವಕೀಲರು ಮತ್ತು ಅಧಿಕಾರಿಯ ನಡುವಿನ ಕಾನೂನು ಸಮರಕ್ಕೆ ಸಾಕ್ಷಿಯಾದ ಈ ಪ್ರಕರಣವನ್ನು ಇತ್ಯರ್ಥಪಡಿಸಿದೆ.
2017ರಲ್ಲಿ ಜುಲೈ 27ರಂದು ಕುಂದಾಪುರದ ಉಪವಿಭಾಗಾಧಿಕಾರಿಯಾಗಿದ್ದ ಚಾರಲತಾ ಸೋಮಲ್ ಅವರ ನ್ಯಾಯಾಲಯದ ಮುಂದೆ ಶೀಲಾವತಿ ಶೆಡ್ತಿ ಎಂಬವರ ಕಂದಾಯ ಪ್ರಕರಣದ ಮೇಲ್ಮನವಿ ವಿಚಾರಣೆಗೆ ಬಂದಿತ್ತು. ಕಕ್ಷಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಶಿರಿಯಾರ ಮುದ್ದಣ್ಣ ಶೆಟ್ಟಿ ಅವರು ಮೌಖಿಕವಾದ ಮಂಡಿಸಲು ಆರಂಭಿಸಿದರು. ಈ ಸಂದರ್ಭದಲ್ಲಿ. ಏರುಧ್ವನಿಯಲ್ಲಿ “ನಿಮ್ಮ ವಾದ ನಿಲ್ಲಿಸಿ ನಿಮ್ಮ ಮೌಕಿಕ ವಾದವನ್ನು ಆಲಿಸಲು ನನಗೆ ಸಮಯವಿಲ್ಲ, ಏನು ವಾದ ಮಾಡಬೇಕು ಅಂತಿದ್ದೀರೋ ಅದನ್ನು ಲಿಖಿತವಾಗಿ ಸಲ್ಲಿಸಿ” ಎಂದು ಚಾರುಲತಾ ಆಕ್ಷೇಪಾರ್ಹವಾಗಿ ಹೇಳಿದ್ದರು. ಇದಕ್ಕೆ ಸೌಮ್ಯವಾಗಿ ಪ್ರತಿಕ್ರಿಯಿಸಿದ್ದ ಶಿರಿಯಾರ ಮುದ್ದಣ ಶೆಟ್ಟಿ ಅವರು, “ನನ್ನ ವಾದ ಕೇವಲ ಐದು ನಿಮಿಷ ಮಾತ್ರ.. ವಾಸ್ತವಿಕ ವಿಚಾರಗಳನ್ನಷ್ಟೇ ಮಂಡಿಸಲಾಗುವುದು” ಎಂದು ಮನವಿ ಮಾಡಿದರು.
ಆದರೆ, ಮೌಖಿಕ ವಾದಕ್ಕೆ ಅವಕಾಶ ನೀಡದೆ ಇಲ್ಲಿಂದ ಹೊರಗೆ ಹೋಗಿ ಎಂದು ತೆರೆದ ನ್ಯಾಯಾಲಯದಲ್ಲಿ ಕಿರಿಚಾಡಿದ್ದರು ಅವಾಜ್ ಹಾಕಿದ್ದಾರೆ ಎನ್ನಲಾಗಿತ್ತು. ಈ ಮಾತು ಕೇಳಿ ಮುದ್ದಣ್ಣ ಶೆಟ್ಟಿ ಅವರು ಅಭಾತ ಅವಮಾನ ಮತ್ತು ಅಚ್ಚರಿಗೆ ಒಳಗಾಗಿದ್ದರು. ಪ್ರಕರಣ ಇಲ್ಲಿಗೆ ನಿಲ್ಲದೆ ಸೋಮಲ್ ಅವರು ದಫೇದಾರ್ ಅವರಿಗೆ ಮುದ್ದಣ್ಣ ಶೆಟ್ಟಿ ಅವರನ್ನು ಹೊರ ಹಾಕುವಂತೆ ಸೂಚಿಸಿದ್ದರು. ತನಗೆ ಆಗಬಹುದಾದ ದೈಹಿಕ ಹಲ್ಲೆ ಅಥವಾ ಮುಜುಗರದ ಸನ್ನಿವೇಶದಿಂದ ಪಾರಾಗಲು ಹಿರಿಯ ವಕೀಲರು ಎಲ್ಲರ ಎದುರೇ ನ್ಯಾಯಾಲಯದಿಂದ ಹೊರಗೆ ಹೋಗುವಂತಾಗಿತ್ತು. ಈ ಸಂದರ್ಭದಲ್ಲಿ ಹಲವು ವಕೀಲರು ಅಧಿಕಾರಿಗಳು ಹಾಜರಿದ್ದರು. ಸೋಮಲ್ ಅವರು ನ್ಯಾಯಾಂಗ ಅಧಿಕಾರಿಯಾಗಿ ಅಡಿದ್ದ ಮಾತುಗಳು ಮಾನಹಾನಿಕರವಾಗಿದ್ದವು ಎಂದು 2017ರ ಜುಲೈ 30 ರಂದು ಶಿರಿಯಾರ ಮುದ್ದಣ್ಣ ಶೆಟ್ಟಿ ಅವರು ಖಾಸಗಿ ದೂರನ್ನು ದಾಖಲಿಸಿದ್ದರು.
ಇದನ್ನು ಪರಿಗಣಿಸಿದ್ದ ಆಗಿನ ಕುಂದಾಪುರ ನ್ಯಾಯಾಲಯವು ಇದಕ್ಕೆ ಪುರ್ವಾನುಮತಿ ಅಗತ್ಯವಿಲ್ಲ ಎಂದು ಸಂಜ್ಞೆಯತೆಯನ್ನು ಪರಿಗಣಿಸಿ ಚಾರುಲತ ವಿರುದ್ದ ಮಾನವನಷ್ಟ ಮೊಕದ್ದಮೆಯನ್ನು ದಾಖಲಿಸಿಕೊಂಡಿತ್ತು. ಇದನ್ನು ಪ್ರಶ್ನಿಸಿ ಚಾರುಲತಾ ಸೋನಲ್ ಹೈಕೋರ್ಟ್ ನಲ್ಲಿ ಕ್ರಿಮಿನಲ್ ಮರು ಪರಿಶೀಲನ ಅರ್ಜಿ ಸಲ್ಲಿಸಿದ್ದರು. ದಾಖಲಿಸಿದ್ದ ಖಾಸಗಿ ದೂರನ್ನು ರದ್ದುಪಡಿಸಬೇಕು ಎಂದು ಕೋರಿ ಚಾರುಲತಾ ಸೋಮಲ್ ಕರ್ನಾಟಕ ಹೈಕೋರ್ಟ್ ನ ಮೊರೆ ಹೋಗಿದ್ದರು.
ಘಟನೆ ನಡೆದ ದಿನ ಚಾರುಲತಾ ಸೋಮಲ್ ಅವರು ಉಪವಿಭಾಗಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ನಾಲ್ಕು ದಿನಗಳಷ್ಟೇ ಕಳೆದಿತ್ತು. ತೆರೆದ ನ್ಯಾಯಾಲಯದಲ್ಲಿ ಕಲಾಪ ನಡೆಸುವಾಗ ಅವರು ಅರೆ ನ್ಯಾಯಾಂಗ ಕರ್ತವ್ಯದಲ್ಲಿ ಇದ್ದರು. ಈ ಹಿನ್ನೆಲೆಯಲ್ಲಿ ಚಾರುಲತಾ ಸೋಮಲ್ ಅವರನ್ನು ನ್ಯಾಯಾಧೀಶರ ರಕ್ಷಣಾ ಕಾಯ್ದೆ 1985ರ ಸೆಕ್ಷನ್ 2ರ ಪ್ರಕಾರ ‘ನ್ಯಾಯಾಧೀಶರು’ ಎಂಬ ವ್ಯಾಖ್ಯಾನದಡಿ ಪರಿಗಣಿಸಬಹುದು ಎಂದು ಹೈಕೋರ್ಟ್ ಹೇಳಿದೆ.
ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ವಕೀಲರಾದ ಶಿರಿಯಾರ ಮುದ್ದಣ್ಣ ಶೆಟ್ಟಿ ಅವರಿಗೆ ಈಗ ಸುಮಾರು 70 ವರ್ಷ ವಯಸ್ಸಾಗಿದೆ. ಆದ್ದರಿಂದ ಪ್ರಕರಣದ ಮರು ವಿಚಾರಣೆಗೆ ಸೂಚಿಸುವುದು ಒಂದು ವ್ಯರ್ಥ ಪ್ರಯತ್ನವಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್ ನ್ಯಾಯಪೀಠ, ಪ್ರಕರಣ ಸುಖಾಂತ್ಯಗೊಳಿಸುವ ಆಶಾವಾದ ವ್ಯಕ್ತಪಡಿಸಿ ಐಎಎಸ್ ಅಧಿಕಾರಿ ಚಾರುಲತಾ ಸೋಮಲ್ ಅವರಿಗೆ ಕ್ಷಮಾಪಣೆ ಪತ್ರ ಬರೆಯುವಂತೆ ಸೂಚಿಸಿದೆ.
ಕುಂದಾಪುರ ವಕೀಲರ ಸಂಘದ ಹಿರಿಯ ಸದಸ್ಯರು ಆಗಿರುವ ಶಿರಿಯಾರ ಮುದ್ದಣ್ಣ ಶೆಟ್ಟಿ ಅವರಲ್ಲಿ ಕ್ಷಮಾಪಣೆ ಕೇಳಿ ಒಂದು ಪತ್ರ ಕಳುಹಿಸುವಂತೆ ಚಾರುಲತಾ ಸೋಮಲ್ ಅವರಿಗೆ ನಿರ್ದೇಶನ ನೀಡುವುದು ಸೂಕ್ತವಾಗಿದೆ ಎಂದು ನ್ಯಾಯ ಪೀಠ ಅಭಿಪ್ರಾಯ ಪಟ್ಟಿದೆ. ಇದಕ್ಕೆ ಶಿರಿಯಾರ ಮುದ್ದಣ್ಣ ಶೆಟ್ಟಿ ಅವರು ಒಪ್ಪಿದರೆ ಪ್ರಕರಣ ಸುಖಾಂತ್ಯ ಕಾಣಲಿದೆ ಎಂದು ನ್ಯಾಯಪೀಠ ವಿಶ್ವಾಸ ವ್ಯಕ್ತಪಡಿಸಿದೆ
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ