ಆರೋಪಿಗಳ ಜೊತೆ ಸೇರಿ ಆತ್ಮೀಯ ಸ್ನೇಹಿತನಿಗೆ ಜಮೀನು ಮಾರಾಟದಲ್ಲಿ ವಂಚನೆ – ವಕೀಲರೊಬ್ಬರು ಸೇರಿ 11 ಮಂದಿ ವಿರುದ್ದ ಎಫ್ ಐಆರ್
ಮಂಗಳೂರು: ಜಮೀನು ಮಾರಾಟ ಮಾಡಲು ಮುಂದಾಗಿದ್ದವರ ಜೊತೆ ಸೇರಿ ಆತ್ಮೀಯ ಸ್ನೇಹಿತನಿಗೆ ವಂಚನೆ ಮಾಡಿದ ವಕೀಲರೊಬ್ಬರು ಸೇರಿ 11 ಮಂದಿ ವಿರುದ್ದ ಎಫ್ ಐಆರ್ ದಾಖಲಾಗಿದೆ. ಹೌದು, ಜಮೀನು ಮಾರಾಟದಲ್ಲಿ ವಂಚನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರು ಸೇರಿದಂತೆ ವಂಚಿಸಿ ಕ್ರಯಪತ್ರದ ಮೂಲಕ ಮಾರಾಟ ಮಾಡಲು ನೆರವು ನೀಡಿದ ಮತ್ತು ಅಕ್ರಮದಲ್ಲಿ ಭಾಗಿಯಾದ 14 ಮಂದಿ ಮೇಲೆ ಸೆನ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಸುರತ್ಕಲ್ ಮುಂಚೂರಿನ ಕೆ.ರುಕ್ಮಯ್ಯ ಶೆಟ್ಟಿ ಎಂಬುವವರೆ ವಂಚನೆಗೊಳಗಾದವರು. ರುಕ್ಮಯ್ಯ ಶೆಟ್ಟಿ ಅವರ ಆತ್ಮೀಯ ಸ್ನೇಹಿತರೇ ಆದ ಮಂಗಳೂರಿನ ವಕೀಲ ಗಂಗಾಧರ್ ಎಚ್. ಎಂಬುವವರು ಈ ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಲಾಗಿದೆ. ಕುಸುಮ ಕೆ. ಸುವರ್ಣ, ನೀರಜಾಕ್ಷಿ ಅಗರ್‌ವಾಲ್ ಮತ್ತು ಇತರ 11 ಮಂದಿ ಪ್ರಕರಣದಲ್ಲಿ ಇತರ ಆರೋಪಿಗಳಾಗಿದ್ದಾರೆ. ಕೆ.ರುಕ್ಮಯ್ಯ ಶೆಟ್ಟಿ ಅವರು ನೀಡಿದ ದೂರಿನ ಮೇಲೆ ಎಫ್‌ಐಆರ್ ದಾಖಲಾಗಿದೆ.
ರುಕ್ಮಯ್ಯ ಶೆಟ್ಟಿ ಅವರದ್ದು ಕಟ್ಟಡ ನಿರ್ಮಾಣ, ಜಾಗದ ವ್ಯವಹಾರ. 2018ರಲ್ಲಿ ರುಕ್ಮಯ್ಯ ಶೆಟ್ಟಿ ಅವರು ಕುಸುಮ, ಕೆ.ಸುವರ್ಣ, ವಾರಿಜಾ ವಿ. ಬಂಗೇರ ಮತ್ತು ಆಕೆಯ ಪುತ್ರಿ ನೀರಜಾಕ್ಷಿ ಅಗರ್‌ವಾಲ್ ಅವರಿಂದ ಹೊಸಬೆಟ್ಟು ಗ್ರಾಮದಲ್ಲಿ 60.45 ಲಕ್ಷ ರೂ.ಗಳಿಗೆ ಜಾಗ ಖರೀದಿಸುವ ಒಪ್ಪಂದ ಮಾಡಿಕೊಂಡು 20 ಲಕ್ಷ ರೂ. ಮುಂಗಡ ಹಣ ಪಾವತಿಸಿದ್ದರು.
ಈ ಜಾಗದಲ್ಲಿ ಕೆಲವು ಸೆಂಟ್ಸ್ ಗಳನ್ನು ನವೀನ್ ಸಾಲ್ಯಾನ್ ಮತ್ತು ಕೇತನ್ ಕುಮಾರ್ ಅವರಿಗೆ ಮಾರಾಟ ಮಾಡುವ ಬಗ್ಗೆಯೂ ಒಪ್ಪಂದ ಮಾಡಿಕೊಂಡು ಅವರಿಂದ ಮುಂಗಡ ಹಣವನ್ನೂ ಪಡೆದುಕೊಂಡಿದ್ದರು. ಈ ಮಧ್ಯೆ, ರುಕ್ಮಯ್ಯ ಶೆಟ್ಟಿ ಅವರು ಜಾಗದ ದಾಖಲೆಗಳನ್ನು ಕ್ರಮಬದ್ಧಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. 2020ರಲ್ಲಿ ರುಕ್ಮಯ್ಯ ಶೆಟ್ಟಿ ಅವರು ನರಸಂಬಂಧಿ ರೋಗಕ್ಕೆ ಒಳಗಾಗಿ ಸ್ಮರಣಶಕ್ತಿ ಕಳೆದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಕುಟುಂಬ ಈ ಜಾಗದ ವ್ಯವಹಾರಕ್ಕೆ ವಕೀಲರನ್ನೇ ಅವಲಂಬಿಸಿತ್ತು.
ತದನಂತರ, ರುಕ್ಮಯ್ಯ ಶೆಟ್ಟಿ ಚೇತರಿಸಿಕೊಂಡ ನಂತರ ಅವರಿಗೆ ಗಂಗಾಧರ್ ಎಚ್. ಇತರ ಆರೋಪಿಗಳ ಜೊತೆ ಸೇರಿ ವಂಚನೆ ಮಾಡಿರುವುದು ಗಮನಕ್ಕೆ
ಬಂದಿತು. ರುಕ್ಮಯ್ಯ ಶೆಟ್ಟಿ ಅವರು ಖರೀದಿಸಲು ಒಪ್ಪಂದ ಮಾಡಿಕೊಂಡ ಜಾಗವನ್ನು ಅವರ ಗಮನಕ್ಕೆ ತಾರದೆ ವಕೀಲರಾದ ಗಂಗಾಧರ್ ಎಚ್. ಹಾಗೂ ಇತರ ಆರೋಪಿಗಳು ಸೇರಿ ಹಲವರಿಗೆ ಜಾಗವನ್ನು ಮಾರಾಟ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ