23/12/2024

Law Guide Kannada

Online Guide

ಪ್ರತ್ಯೇಕ ನಾಲ್ಕು ಅತ್ಯಾಚಾರ ಪ್ರಕರಣ: ಐದೇ ದಿನದಲ್ಲಿ 9 ಮಂದಿಗೆ ತಲಾ 20 ವರ್ಷ ಶಿಕ್ಷೆ ವಿಧಿಸಿದ ನ್ಯಾಯಾಧೀಶರು

ಬೆಳಗಾವಿ: ಯಾವುದೇ ಪ್ರಕರಣವಿರಲಿ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆದು ತೀರ್ಪು ಪ್ರಕಟವಾಗುವುದು ವಿಳಂಬವಾಗುತ್ತದೆ ಎಂಬ ಆರೋಪ ಕೇಳಿ ಬರುತ್ತಲೇ ಇದೆ. ಆದರೆ ಇಲ್ಲೊಬ್ಬರು ನ್ಯಾಯಾಧೀಶರು ಪ್ರತ್ಯೇಕ ನಾಲ್ಕು ಅತ್ಯಾಚಾರ ಪ್ರಕರಣಗಳಲ್ಲಿ ಐದೇ ದಿನದಲ್ಲಿ 9 ಮಂದಿಗೆ ತಲಾ 20 ವರ್ಷ ಶಿಕ್ಷೆ ವಿಧಿಸಿ ಮಾದರಿಯಾಗಿದ್ದಾರೆ.

ಹೌದು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಪ್ರತ್ಯೇಕ ನಾಲ್ಕು ಪ್ರಕರಣಗಳಲ್ಲಿ ಕೇವಲ ಐದು ದಿನಗಳಲ್ಲಿ 9 ಜನ ಆರೋಪಿಗಳಿಗೆ ತಲಾ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸುವ ಮೂಲಕ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಶೇಷ ಶೀಘ್ರಗತಿ ಫೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಿದ್ದಾರೆ.

ಬಾಲಕಿಯರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು ಕೇವಲ ಐದು ದಿನಗಳ ಅವಧಿಯಲ್ಲಿ, 20 ವರ್ಷ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸೋಮವಾರ ಒಂದೇ ದಿನದಲ್ಲಿ ರಾಯಭಾಗದ ಇಬ್ಬರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಲಾಗಿದೆ. 29 ಡಿಸೆಂಬರ್ 2016ರಂದು ಶಾಲೆಯಿಂದ ಬರುತ್ತಿದ್ದ ಬಾಲಕಿಯನ್ನು ಪರಿಚಯ ಮಾಡಿಕೊಂಡ ಯುವಕ ರಾಯಭಾಗದ ಆಶೀಷ ಧರ್ಮರಾಜ ಕಾಂಬಳೆ(25) ಮಹಾರಾಷ್ಟ್ರದ ಗಣೇಶವಾಡಿಗೆ ಕರೆದುಕೊಂಡು ಹೋಗಿ ಮನೆಯೊಂದರಲ್ಲಿ ಕೂಡಿ ಹಾಕಿ ಅತ್ಯಾಚಾರ ಎಸಗಿದ್ದನು. ಬಾಲಕಿಯ ತಂದೆ ರಾಯಬಾಗ ಠಾಣೆಗೆ ದೂರು ನೀಡಿದ್ದರು. ತನಿಖಾಧಿಕಾರಿಯಾದ ಬಿ.ಎಸ್. ಲೋಕಾಪುರ, ಪ್ರೀತಂ ದತ್ತಾ ಶ್ರೇಯಕರ ದೋಚಾರೋಪಣೆ ಪಟ್ಟಿ ಸಲ್ಲಿಸಿದ್ದರು. 25 ಸಾಕ್ಷಿ, 40 ದಾಖಲೆ, 10 ಮುದ್ದೆಮಾಲುಗಳ ಆಧಾರದ ಮೇಲೆ ಆರೋಪಿಗೆ 20 ವರ್ಷ ಶಿಕ್ಷೆ ವಿಧಿಸಲಾಗಿದೆ. ಸರ್ಕಾರಿ ವಿಶೇಷ ಅಭಿಯೋಜಕ ಎಲ್.ವಿ. ಪಾಟೀಲ ವಾದ ಮಂಡಿಸಿದ್ದರು.

29 ಏಪ್ರಿಲ್ 2018ರಂದು ರಾಯಭಾಗದ ಅರ್ಬಾಜ್ ರಸೂಲ್ ನಾಲಬಂದ್(19) ಎಂಬ ಯುವಕ ಬಾಲಕಿಯನ್ನು ಬೈಕ್ ಮೇಲೆ ಕೂರಿಸಿಕೊಂಡು ಮನೆಗೆ ಬಿಡುವುದಾಗಿ ಹೇಳಿ ಅರಣ್ಯ ದಿಗ್ಗೇವಾಡಿ ಕ್ರಾಸ್ ಬಳಿಕ ಅಂಕಲಿಯ ಅರಣ್ಯ ಪ್ರದೇಶದಲ್ಲಿ ಅತ್ಯಾಚಾರ ಎಸಗಿದ್ದನು. ಈ ಕುರಿತು ರಾಯಭಾಗ ಠಾಣೆಯಲ್ಲಿ ಧೂರು ದಾಖಲಾಗಿತ್ತು. ತನಿಖಾಧಿಕಾರಿಯಾದ ಮಂಜುನಾಥ ನಡುವಿನಮನಿ, ಪ್ರೀತಂ ದತ್ತಾ ಶ್ರೇಯಕರ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ನ್ಯಾಯಾಧೀಶರು 17 ಸಾಕ್ಷಿ, 41 ದಾಖಲೆ, 8 ಮುದ್ದೆಮಾಲುಗಳ ಆಧಾರದ ಮೇಲೆ ಶಿಕ್ಷೆ ವಿಧಿಸಿದ್ದಾರೆ.

ಚಿಕ್ಕೋಡಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿಯೂ ಆರು ಮಂದಿಗೆ ಸೆ. 19ರಂದು ಹಾಗೂ ಕುಡಚಿ ಠಾಣಾ ವ್ಯಾಪ್ತಿಯ ವಿಕ್ರಮ ಪಟ್ಟೇಕರ ಎಂಬಾತನಿಗೆ ಸೆಪ್ಟಂಬರ್ 21ರಂದು ಶಿಕ್ಷೆ ವಿಧಿಸಿ ಆದೇಶ ಹೊರಡಿಸಲಾಗಿತ್ತು.

ಇನ್ನು ಸರ್ಕಾರದ ಪರವಾಗಿ ಸರ್ಕಾರಿ ವಿಶೇಷ ಅಭಿಯೋಜಕ ಎಲ್.ವಿ. ಪಾಟೀಲ ವಕಾಲತ್ತು ವಹಿಸಿ ಸಮರ್ಪಕವಾಗಿ ವಾದ ಮಂಡಿಸಿ ಬಾಲಕಿಯರಿಗೆ ನ್ಯಾಯ ಒದಗಿಸಿ ಕೊಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸರ್ಕಾರಿ ವಿಶೇಷ ಅಭಿಯೋಜಕ ಎಲ್.ವಿ. ಪಾಟೀಲ ಅವರು, ಇಂದಿನ ಮಕ್ಕಳು ನಾಳಿನ ಪ್ರಜೆಗಳು. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಸಮಾಜಕ್ಕೆ ಕಪ್ಪು ಚುಕ್ಕೆ ಇದ್ದಂತೆ. ಇಂಥ ಘಟನೆಗಳು ಮರುಳಿಸಬಾರದು ಎಂಬ ಕಾರಣಕ್ಕೆ ಶಿಕ್ಷೆ ನೀಡಲಾಗುತ್ತಿದೆ. ಐದೇ ದಿನದಲ್ಲಿ ಬಾಲಕಿಯರ ಅತ್ಯಾಚಾರ ಪ್ರತ್ಯೇಕ ಪ್ರಕರಣಗಳಲ್ಲಿ ಎಲ್ಲರಿಗೂ 20 ವರ್ಷ ಶಿಕ್ಷೆ ಆಗಿರುವುದು ವಿಶೇಷ ಎಂದಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.