23/12/2024

Law Guide Kannada

Online Guide

ಕಸ್ಟಡಿ ಸಾವು ಪ್ರಕರಣದಲ್ಲಿ ನಾಲ್ವರು ಪೊಲೀಸರು ದೋಷಿಗಳು: ಇಬ್ಬರು ಆರೋಪಿತರಿಗೆ ಜೀವಾವಧಿ ಶಿಕ್ಷೆ ಪ್ರಕಟ

ಚಂಡೀಗಢ: ಪೊಲೀಸ್ ಠಾಣೆಯಲ್ಲಿ ತೀವ್ರವಾಗಿ ಥಳಿಸಿದ್ದರ ಪರಿಣಾಮ ಆರೋಪಿ ಸಾವನ್ನಪ್ಪಿದ್ದ ಪ್ರಕರವನ್ನು ಕಸ್ಟಡಿ ಸಾವು ಎಂದು ಪರಿಗಣಿಸಿ, ಉಪ ಪೊಲೀಸ್‌ ವರಿಷ್ಠಾಧಿಕಾರಿ ಸೇರಿದಂತೆ ನಾಲ್ವರು ಪೊಲೀಸರು ತಪ್ಪಿತಸ್ಥರೆಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ತೀರ್ಪು ನೀಡಿದೆ.

ಅಲ್ಲದೆ ನಾಲ್ವರು ಆರೋಪಿತರ ಪೈಕಿ ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಪ್ರಕಣದಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ಕಡಿಮೆಯಾಗಿದೆ ಮತ್ತು ಸೂಕ್ತವಾಗಿಲ್ಲ ಎಂದು ಆಕ್ಷೇಪಿಸಿ ಸರ್ಕಾರ ಹಾಗೂ ದೂರುದಾರರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸುರೇಶ್ವರ್ ಠಾಕೂರ್ ಹಾಗು ನ್ಯಾ. ಸುದೀಪ್ತಿ ಶರ್ಮಾ ಅವರಿದ್ದ ವಿಭಾಗೀಯ ಪೀಠ, ಆರೋಪಿತರು (ಪೊಲೀಸರು) ತೀವ್ರವಾಗಿ ಥಳಿಸಿದ್ದರ ಪರಿಣಾಮವಾಗಿ ಗದ್ದೂ‌ರ್ ಸಿಂಗ್ ಸಾವನ್ನಪ್ಪಿದ್ದಾರೆ. ಈ ವೇಳೆ ಪೊಲೀಸ್‌ ಕಸ್ಟಡಿಯಲ್ಲಿದ್ದ ಮತ್ತೋರ್ವ ವ್ಯಕ್ತಿ ಬಾಗಲ್ ಸಿಂಗ್ ವ್ಯತಿರಿಕ್ತ ಸಾಕ್ಷ್ಯ ನುಡಿಯುವಂತೆ ಡಿಎಸ್ಪಿ ಒತ್ತಡ ಹೇರಿದ್ದಾರೆ. ಘಟನೆ ವೇಳೆ ಡಿಎಸ್ಪಿ ಪಟ್ಟಣದಲ್ಲಿ ಇರಲಿಲ್ಲ ಎಂದು ಲಾಗ್ ಬುಕ್ ನಲ್ಲಿ ನಮೂದಿಸಿರುವುದು ಅವರ ಪರ ಸಾಕ್ಷ್ಯವಾಗಲಾರದು ಎಂದು ಹೇಳಿದೆ.

ಅಲ್ಲದೇ ಪ್ರಕರಣದ ವಿಚಾರಣೆ ವೇಳೆ ಹಾಜರಿದ್ದ ಇಬ್ಬರು ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈಕೋರ್ಟ್, ವಿಚಾರಣೆ ವೇಳೆ ಹಾಜರಿರದ ಡಿಎಸ್ಪಿ ಸೇರಿದಂತೆ ಇನ್ನಿಬ್ಬರು ಪೊಲೀಸರಿಗೆ ಶಿಕ್ಷೆ ಪ್ರಮಾಣ ನಿಗದಿ ಮಾಡಲು ಮುಂದಿನ ವಿಚಾರಣೆ ವೇಳೆ ಹಾಜರುಪಡಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿತು.

ಪ್ರಕರಣದ ವಿವರ….
1995ರ ನವೆಂಬರ್ 14ರಂದು ಪೊಲೀಸರು ಗದ್ದೂರ್ ಸಿಂಗ್ ಹಾಗೂ ಬಾಗಲ್ ಸಿಂಗ್ ರನ್ನು ವಶಕ್ಕೆ ತೆಗೆದುಕೊಂಡಿದ್ದರು. ಈ ವೇಳೆ ಪೊಲೀಸ್‌ ಪೇದೆ ಕಿರ್ಪಾಲ್ ಸಿಂಗ್ ಇಬ್ಬರಿಗೂ ತೀವ್ರವಾಗಿ ಹಲ್ಲೆ ಮಾಡಿದ್ದ. ಪಕ್ಕೆಲುಬುಗಳ ಭಾಗದಲ್ಲಿ ಮನಬಂದಂತೆ ಥಳಿಸಿದ್ದ ಪರಿಣಾಮ ಗದ್ದೂರ್ ಸಿಂಗ್ ಸ್ಥಿತಿ ಗಂಭೀರವಾಗಿತ್ತು. 9 ದಿನಗಳ ನಂತರ ಪೊಲೀಸರ ವಶದಿಂದ ಹೊರಬಂದ ಗದ್ದೂರ್ ಸಿಂಗ್ ನನ್ನು ಚಂಡೀಗಡದ ಪಿಜಿಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಯಿಂದ ಚೇತರಿಸಿಕೊಳ್ಳದೆ ಸಾವನ್ನಪ್ಪಿದ್ದರು. ಶವ ತನಿಖಾ ವರದಿಯಲ್ಲಿ ಪೊಲೀಸರ ಹಲ್ಲೆಯಿಂದ ಗದ್ದೂರ್ ಸಿಂಗ್‌ ಸಾವನ್ನಪ್ಪಿದ್ದು ತಿಳಿದು ಬಂದಿತ್ತು.

ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿ ಆರೋಪಿತರ ವಿರುದ್ಧ ಐಪಿಸಿ ಸೆಕ್ಷನ್ 302, 323, 324, 325, 343 ಡಿ/ತಿ 34 ಅಡಿಯಲ್ಲಿ ದೋಷಾರೋಪಣೆ ಸಲ್ಲಿಸಿದ್ದರು.

ವಿಚಾರಣಾ ನ್ಯಾಯಾಲಯ ಐಪಿಸಿ ಸೆಕ್ಷನ್ 343 ಅಡಿಯಲ್ಲಿ ಮಾತ್ರ ಶಿಕ್ಷೆ ವಿಧಿಸಿತ್ತು. ಈ ಆದೇಶ ಪ್ರಶ್ನಿಸಿ ಸರ್ಕಾರ ಮತ್ತು ದೂರುದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.