23/12/2024

Law Guide Kannada

Online Guide

MBBS ವಿದ್ಯಾರ್ಥಿಗೆ ರೂ. 10 ಲಕ್ಷ ರೂ. ಪರಿಹಾರ ಪಾವತಿಸಿ – ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ: ಕಾರಣವೇನು..?

ಬೆಂಗಳೂರು: MBBS ವಿದ್ಯಾರ್ಥಿಗೆ ಕ್ರೀಡಾ ಕೋಟಾದ ಸೀಟು ನೀಡುವ ಬದಲಾಗಿ ಖಾಸಗಿ ಸೀಟಿಗೆ ತಪ್ಪಾಗಿ ವರ್ಗೀಕರಿಸಿ ಕಾನೂನು ಬಾಹಿರ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗೆ 10 ಲಕ್ಷ ರೂ. ಪರಿಹಾರ ಪಾವತಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಎಚ್ಎಸ್ಆರ್ ಲೇಔಟ್ನ ಚೆಸ್ ಆಟಗಾರ್ತಿ ಸಂಜನಾ ರಘುನಾಥ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆವಿ ಅರವಿಂದ್ ಅವರಿದ್ದ ವಿಭಾಗೀಯ ಪೀಠ, ಕ್ರೀಡಾ ಕೋಟಾದ ಬದಲು ಖಾಸಗಿ ಸೀಟಿಗೆ ತಪ್ಪಾಗಿ ವರ್ಗೀಕರಿಸಿದ್ದರಿಂದ ಆಗಿರುವ ನಷ್ಟ ಸರಿದೂಗಿಸಲು MBBS ವಿದ್ಯಾರ್ಥಿಗೆ ರೂ. 10 ಲಕ್ಷ ಪರಿಹಾರ ಪಾವತಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು.

ಅರ್ಜಿದಾರರು ಕ್ರೀಡಾ ಕೋಟಾದ ಸೀಟು ಪಡೆಯುವ ಅರ್ಹತೆಗಳಲ್ಲಿ ಪಿ-1 ಶ್ರೇಣಿಗೆ ಅರ್ಹರಿದ್ದಾರೆ. ಆದರೆ, ತಪ್ಪಾಗಿ ಅವರಿಗೆ ಪಿ-5 ಶ್ರೇಣಿ ನೀಡಲಾಗಿದೆ. ನಿಯಮಗಳ ಪ್ರಕಾರ ಅದು ತಪ್ಪು ಮತ್ತು ಆ ವರ್ಗೀಕರಣ ಊರ್ಜಿತವಾಗದು. ವರ್ಗೀಕರಣ ಸಂಬಂಧ 2023ರ ಜೂ.23ರಂದು ಹೊರಡಿಸಿರುವ ಸುತ್ತೋಲೆ 2006ರ ನಿಯಮಕ್ಕೆ ವಿರುದ್ಧವಾಗಿದೆ.

ಅರ್ಜಿದಾರರು ಖಾಸಗಿ ಸೀಟಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು, ಶೈಕ್ಷಣಿಕ ತರಬೇತಿ ಹೊರತಾಗಿ ಕ್ರೀಡೆಯನ್ನು ಮುಂದುವರಿಸಲು ಆಗಿರುವ ಖರ್ಚು ಮತ್ತು ಸಮಯದ ಪ್ರಮಾಣವನ್ನು ನ್ಯಾಯಾಲಯ ಪರಿಗಣಿಸಿತು.

ಅರ್ಜಿದಾರರು ವರ್ಷಕ್ಕೆ ಸರಿ ಸುಮಾರು 11,88,000 ರೂ.ಗಳನ್ನು ಪಾವತಿಸಿದ್ದು, ಪ್ರಾಧಿಕಾರದ ನಿಯಮ ಬಾಹಿರ ಕ್ರಮದಿಂದ ಅರ್ಜಿದಾರರು MBBS ಕೋರ್ಸ್ ಗೆ ಹೆಚ್ಚುವರಿ ವೆಚ್ಚ ಮಾಡುವಂತಾಗಿದೆ. ಇದು ಅರ್ಜಿದಾರರ ಹಕ್ಕು ಮತ್ತು ಅವರ ಭವಿಷ್ಯದ ಮೇಲೆ ಪರಿಣಾಮ ಬೀರಿದೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿ MBBS ವಿದ್ಯಾರ್ಥಿಗೆ ರೂ. 10 ಲಕ್ಷ ಪರಿಹಾರ ಪಾವತಿಸುವಂತೆ ಸೂಚಿಸಿತು.

ಅರ್ಜಿದಾರೆ ಸಂಜನಾ ರಘುನಾಥ್ ಅವರ ಪರ ವಾದ ಮಂಡಿಸಿದ ವಕೀಲ ಎಂ.ಪಿ.ಶ್ರೀಕಂಠ ಅವರು, ವೈದ್ಯೆಯಾಗುವ ಆಕಾಂಕ್ಷೆ ಹೊಂದಿದ್ದ ಸಂಜನಾ, 2022-23ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕಿಂಗ್ ಗಳಿಸಿದ್ದರು. ಆದರೆ, ಅವರ ಅರ್ಹತೆಗೆ ತಕ್ಕಂತೆ ಕೆಇಎ ಶ್ರೇಣಿ ನೀಡದ ಕಾರಣ ಸೀಟು ವಂಚಿತರಾಗಿರುವುದಾಗಿ ತಿಳಿಸಿದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

 

Copyright © All rights reserved. | Newsphere by AF themes.