23/12/2024

Law Guide Kannada

Online Guide

ಐದು ಮೊಬೈಲ್ ಗಳು, ಸಾವಿರಾರು ವಿದ್ಯಾರ್ಥಿನೀಯರ ವಿಡಿಯೋ : ಶಿಕ್ಷಕನ ವಿರುದ್ದ ಪೋಕ್ಸೊ ಕೇಸ್ ರದ್ದಿಗೆ ಹೈಕೋರ್ಟ್ ನಕಾರ

ಬೆಂಗಳೂರು: ಮಕ್ಕಳಿಗೆ ತಂದೆ-ತಾಯಿ ಬಿಟ್ಟರೇ ಶಿಕ್ಷಕನಿಗೆ ಅತ್ಯುನ್ನತ ಸ್ಥಾನ ಗೌರವವಿದೆ. ಸಮಾಜದಲ್ಲಿ ಶಿಕ್ಷಕನ ಜವಾಬ್ದಾರಿ ಎಲ್ಲಾ ಹುದ್ದೆಗಳಿಗಿಂತ ಒಂದು ಕೈ ಮೇಲೆಯೇ. ಮಕ್ಕಳನ್ನ ತಿದ್ದಿ ತೀಡಿ ಉತ್ತಮ ಭವಿಷ್ಯ ರೂಪಿಸುವಲ್ಲಿ ಶಿಕ್ಷಕನ ಪಾತ್ರ ಬಹಳ ದೊಡ್ಡದು.ಆದರೆ ಇಲ್ಲೊಬ್ಬ ಶಿಕ್ಷಕ ಇದಕ್ಕೆ ವಿರುದ್ದವಾಗಿ ವಿದ್ಯಾರ್ಥಿನೀಯರ ಸಾವಿರಾರು ವಿಡಿಯೋ ಫೋಟೊಗಳನ್ನ ಕ್ಲಿಕ್ಕಿಸಿಕೊಂಡು ಅಸಭ್ಯತೆ ತೋರಿದ್ದು ಈತನ ವಿರುದ್ದ ದಾಖಲಾಗಿದ್ದ ಪೋಕ್ಸೊ ಪ್ರಕರಣವನ್ನ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.

ತಮ್ಮ ವಿರುದ್ಧದ ಎಫ್ಐಆರ್ ರದ್ದುಪಡಿಸಬೇಕು ಎಂದು ಕೋರಿ ವಸತಿ ಶಾಲೆಯ ಶಿಕ್ಷಕ ಹೈಕೋರ್ಟ್ ಮುಂದೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಆದರೆ ಕರ್ನಾಟಕ ಹೈಕೋರ್ಟ್ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಇಷ್ಟೊಂದು ಮೊಬೈಲ್, ನೂರಾರು ಅಶ್ಲೀಲ ಚಿತ್ರಗಳ ವಿಚಾರಕ್ಕೆ ಕಳವಳ ವ್ಯಕ್ತಪಡಿಸಿದ್ದು, ಈ ಪ್ರಕರಣ ನಿಜಕ್ಕೂ ಆಘಾತಕಾರಿ ಎಂದು ಹೇಳಿ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ.

ಅರ್ಜಿದಾರ ಶಿಕ್ಷಕ ಐದು ಮೊಬೈಲ್ ಫೋನ್ ಹೊಂದಿದ್ದು, ಪ್ರತಿ ಮೊಬೈಲ್ನಲ್ಲೂ ಸಾವಿರಾರು ಫೋಟೋಗಳು, ನೂರಾರು ವೀಡಿಯೋಗಳು ಇವೆ. ಈ ವೀಡಿಯೋ ಮತ್ತು ಫೋಟೋಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದ ದಾಖಲೆಗಳು ದೃಢಪಡಿಸಿದ್ದು, ಪ್ರಕರಣದ ತನಿಖಾ ವರದಿಯಲ್ಲೂ ಮೇಲ್ನೋಟಕ್ಕೆ ಸಾಬೀತಾಗಿವೆ ಎಂಬುದನ್ನು ಪರಿಗಣಿಸಿದ ನ್ಯಾಯಪೀಠ, ಇದು ನಿಜಕ್ಕೂ ಆತಂಕಕಾರಿ ಘಟನೆ ಎಂದು ಕಳವಳ ವ್ಯಕ್ತಪಡಿಸಿದೆ.

ಒಬ್ಬ ಶಿಕ್ಷಕನಾಗಿ ಈ ರೀತಿಯ ವೀಡಿಯೋ ಚಿತ್ರೀಕರಿಸುವುದು ನಿಜವಾಗಿಯೂ ಅಸಭ್ಯತನದ ಪರಮಾವಧಿ. ಇಂತಹ ಕೃತ್ಯಗಳು ಕ್ಷಮೆಗೆ ಅರ್ಹವಲ್ಲ ಎಂದು ಹೇಳಿರುವ ನ್ಯಾಯಪೀಠ, ಪೂರ್ಣಪ್ರಮಾಣದ ವಿಚಾರಣೆ ನಡೆದು ಆರೋಪಮುಕ್ತನಾಗಿ ಅರ್ಜಿದಾರ ಹೊರಬರಲಿ. ಆದರೆ, ಎಫ್ ಐಆರ್ ರದ್ದುಪಡಿಸಿದರೆ ಆತನ ಅಕ್ರಮ ಚಟುವಟಿಕೆಗಳನ್ನು ಉತ್ತೇಜಿಸಿದಂತಾಗುತ್ತದೆ. ಹೀಗಾಗಿ ತನಿಖೆ ಮತ್ತು ವಿಚಾರಣೆಯಿಂದ ಸತ್ಯಾಂಶ ಹೊರಬರಲಿ ಎಂದು ಹೇಳಿ ನ್ಯಾಯಪೀಠ ಅರ್ಜಿಯನ್ನು ತಿರಸ್ಕಾರ ಮಾಡಿದೆ.

ಪ್ರಕರಣದ ಹಿನ್ನೆಲೆ
ಶಾಲಾ ಬಾಲಕಿಯರು ಬಟ್ಟೆ ಬದಲಿಸುವ ಸಮಯದಲ್ಲಿ ಫೋಟೋ ಕ್ಲಿಕ್ ಮಾಡಿ ಹಾಗೂ ವೀಡಿಯೋ ಚಿತ್ರೀಕರಿಸಿದ ಘಟನೆ ಬಗ್ಗೆ ನಿಯಂತ್ರಣ ಕೊಠಡಿ ಮೂಲಕ ದೂರು ಸ್ಟೀಕರಿಸಿದ ಸಮಾಜ ಕಲ್ಯಾಣ ಇಲಾಖೆಯ ಜ0ಟಿ ನಿರ್ದೇಶಕರು 2023ರ ಡಿಸೆ0ಬರ್ 15ರ0ದು ದೂರು ದಾಖಲಿಸಿದ್ದರು. ಡಿಸೆಂಬರ್ 17ರಂದು ಪೊಲೀಸರು ಆರೋಪಿ ಶಿಕ್ಷಕನ ವಿರುದ್ದ ಎಫ್ಐಆರ್ ದಾಖಲಿಸಿದ್ದರು. ಕೋಲಾರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ಫೋಕ್ಕೋ ವಿಶೇಷ ನ್ಯಾಯಾಲಯ)ದಲ್ಲಿ ನ್ಯಾಯ ವಿಚಾರಣೆ ನಡೆದಿತ್ತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.