23/12/2024

Law Guide Kannada

Online Guide

‘Fake Certificate’ ಸಲ್ಲಿಕೆ: 107 ನಕಲಿ ವಕೀಲರನ್ನ ಹೊರಗಟ್ಟಿದ BCI

ನವದೆಹಲಿ: ಕಾನೂನು ವೃತ್ತಿಯಲ್ಲಿ ವೃತ್ತಿಪರತೆ ಮತ್ತು ಸಮಗ್ರತೆ ತರುವ ಉದ್ದೇಶಕ್ಕಾಗಿ ಶ್ರಮಿಸುತ್ತಿರುವ ಭಾರತೀಯ ವಕೀಲರ ಪರಿಷತ್ತು, ಇದೀಗ ಅದರ ಭಾಗವಾಗಿ ದೆಹಲಿ ರಾಜ್ಯದಲ್ಲಿ ಕಾನೂನು ವೃತ್ತಿಯಲ್ಲಿ ತೊಡಗಿಸಿಕೊಂಡ ನಕಲಿ ವಕೀಲರ ವಿರುದ್ಧ ಸಮರ ಸಾರಿದೆ.

ಹೌದು ದೆಹಲಿಯಲ್ಲಿ ನಕಲಿ ಸರ್ಟಿಫಿಕೆಟ್ ಸಲ್ಲಿಸಿದ್ದ 107 ‘ನಕಲಿ’ ವಕೀಲರನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಹೊರಗಟ್ಟಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಭಾರತೀಯ ವಕೀಲರ ಮಂಡಳಿಯು, 2019ರಿಂದ 2024ರ ನಡುವಿನ ಅವಧಿಯಲ್ಲಿ 107 ನಕಲಿ ವಕೀಲರನ್ನು ವಕೀಲರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಿದೆ.

ಭಾರತೀಯ ವಕೀಲರ ಮಂಡಳಿ(ಬಿಸಿಐ) ಸರ್ಟಿಫಿಕೇಟ್ ಆಂಡ್ ಪ್ಲಸ್ ಆಪ್ ಪ್ರಾಕ್ಟಿಸ್ ರೂಲ್ಸ್ 2015 ಇದರ ನಿಯಮ 32ರ ಪ್ರಕಾರ ಕಾನೂನು ವೃತ್ತಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳದ ಹಾಗೂ ನಕಲಿ ವಕೀಲರುಗಳನ್ನು ಗುರುತಿಸಿ ಅವರನ್ನು ವಕೀಲರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ.

ಈ ನಿರ್ಣಾಯಕ ಕ್ರಮವು ನಕಲಿ ವಕೀಲರನ್ನು ಮತ್ತು ಇನ್ನು ಮುಂದೆ ಕಾನೂನು ಅಭ್ಯಾಸದ ಮಾನದಂಡಗಳನ್ನು ಪೂರೈಸದವರನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ. ಈ ಮೂಲಕ ಸಾರ್ವಜನಿಕರ ನಂಬಿಕೆ ಮತ್ತು ಕಾನೂನು ವ್ಯವಸ್ಥೆಯ ರಕ್ಷಣೆಗೆ ಪ್ರಯತ್ನಿಸಲಾಗಿದೆ ಎಂದು ಬಿಸಿಐ ಕಾರ್ಯದರ್ಶಿ ಶ್ರೀಮಂತೋ ಸೇನ್ ಹೇಳಿದ್ದಾರೆ.

ಸಮಗ್ರತೆ ಮತ್ತು ವೃತ್ತಿಪರತೆಯನ್ನು ಕಾಪಾಡಿಕೊಳ್ಳಲು ನಡೆಯುತ್ತಿರುವ ಅಭಿಯಾನದ ಭಾಗವಾಗಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಈ ಕ್ರಮ ಕೈಗೊಂಡಿದೆ. ಬಹುತೇಕ ವಕೀಲರು ನಕಲಿ ಹಾಗೂ ಬೊಟ್ಟಿ ದಾಖಲೆ ಪತ್ರಗಳನ್ನು ಸಲ್ಲಿಸಿ ರಾಜ್ಯ ವಕೀಲರ ಪರಿಷತ್ತಿನಿಂದ ವಕೀಲ ವೃತ್ತಿಯ ಸನದು ಪಡೆದುಕೊಂಡಿದ್ದರು. ಅಂಥವರನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಅಜಯ್ ಶಂಕರ್ ಶ್ರೀವಾತ್ಸವ ಗಿs ಬಾರ್ ಕೌನ್ಸಿಲ್ ಆಫ್ ಇಂಡಿಯಾ ಪ್ರಕರಣದಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದಂತೆ ಬಿಸಿಐ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದ್ದು, ಅನುಮಾನ ಬಂದ ಪ್ರಕರಣಗಳ ಗಂಭೀರ ಪರಿಶೀಲನೆಯಲ್ಲಿ ಹಲವು ತೊಟ್ಟಿ ದಾಖಲೆಗಳನ್ನು ನೀಡಿರುವ ವಿಷಯ ಬಯಲಾಗಿದೆ.

ಹಲವು ವಕೀಲರು ತಮ್ಮ ವಿರುದ್ಧದ ಕಾನೂನು ಕ್ರಮವನ್ನು ತಪ್ಪಿಸಲು ತಮ್ಮ ಸನದು ಪತ್ರವನ್ನು ವಾಪಸ್ ನೀಡಿದ್ದು, ವಕೀಲ ವೃತ್ತಿಯಿಂದ ಹಿಂದೆ ಸರಿದಿದ್ದಾರೆ. ಇದೇ ರೀತಿ, ಪ್ರತಿ ರಾಜ್ಯಗಳಲ್ಲೂ ಆಯಾ ರಾಜ್ಯದ ವಕೀಲರ ಪರಿಷತ್ತುಗಳು ನಕಲಿ ವಕೀಲರ ವಿರುದ್ಧ ಕಾನೂನು ಕ್ರಮವನ್ನು ಮುಂದುವರಿಸುವಂತೆ ಭಾರತೀಯ ವಕೀಲರ ಮಂಡಳಿ ಸೂಚಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.