23/12/2024

Law Guide Kannada

Online Guide

FAKE CASE: 50 ಸಾವಿರ ರೂ. ಪರಿಹಾರ ಹಿಂದಿರುಗಿಸಿ ಮುಚ್ಚಳಿಕೆ ಬರೆದುಕೊಟ್ಟ RTI ಕಾರ್ಯಕರ್ತ…

ಕೊಳ್ಳೇಗಾಲ: ಆರ್ ಟಿಐ ಕಾರ್ಯಕರ್ತರೊಬ್ಬರು ಸುಳ್ಳು ಪ್ರಕರಣ ದಾಖಲಿಸಿ ಪಡೆದಿದ್ದ 50 ಸಾವಿರ ರೂ.ಪರಿಹಾರವನ್ನ ವಾಪಸ್ ನೀಡಿ ನ್ಯಾಯಾಧೀಶರ ಮುಂದೆ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.

ತಾಲ್ಲೂಕಿನ ಕುಣಗಳ್ಳಿ ಗ್ರಾಮದ ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಎಂಬುವವರು ಜಾತಿನಿಂದನೆಯ ಎರಡು ಸುಳ್ಳು ಪ್ರಕರಣ ದಾಖಲಿಸಿ ಸಮಾಜ ಕಲ್ಯಾಣ ಇಲಾಖೆಯಿಂದ Rs 50 ಸಾವಿರ ಪರಿಹಾರ ಪಡೆದಿದ್ದರು.

ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ‘ಜಮೀನಿನ ವಿವಾದ ಸಂಬಂಧ ಕುಣಗಳ್ಳಿ ಗ್ರಾಮದ ಶ್ರೀನಿವಾಸ ಎಂಬುವರು ನನಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಹಾಗೆಯೇ ‘ಜಮೀನು ವಿವಾದದಲ್ಲಿ ಕುಣಗಳ್ಳಿ ಗ್ರಾಮದ ದೊಡ್ಡಮಾದಶೆಟ್ಟಿ ಎಂಬವರು ನನ್ನನ್ನು ಜಾತಿನಿಂದನೆ ಮಾಡಿದ್ದಾರೆ’ ಎಂದು ಲಿಂಗರಾಜು ಅಗರ ಮಾಂಬಳ್ಳಿ ಪೊಲೀಸ್ ಠಾಣೆಗೆ ಮತ್ತೊಂದು ದೂರು ನೀಡಿದ್ದರು. ಎರಡು ಜಾತಿನಿಂದನೆ ಪ್ರಕರಣಗಳಲ್ಲಿ ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ಪ್ರತಿಬಂಧ ಕಾಯ್ದೆ’ ಅನ್ವಯ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಅನುಮೋದನೆ, ಪೊಲೀಸ್‌ ಎಫ್‌ಐಆರ್‌ ಆಧರಿಸಿ, ಎರಡು ಪ್ರಕರಣದಲ್ಲಿ ಪರಿಹಾರದ ಮೊದಲನೇ ಕಂತು ತಲಾ Rs 25 ಸಾವಿರದಂತೆ ಒಟ್ಟು ₹50 ಸಾವಿರ ಮೊತ್ತವನ್ನು ಲಿಂಗರಾಜು ಪಡೆದುಕೊಂಡಿದ್ದರು.

ಡಿವೈಎಸ್ಪಿ ಧರ್ಮೆಂದ್ರ ಎರಡೂ ಪ್ರಕರಣಗಳ ತನಿಖೆ ನಡೆಸಿ ಅವುಗಳು ಸುಳ್ಳು ಎಂದು ಅರಿತು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಿಗೆ ಬಿ-ವರದಿ ಸಲ್ಲಿಸಿದ್ದರು. ವರದಿ ಆಧರಿಸಿ ನ್ಯಾಯಾಧೀಶರು ಲಿಂಗರಾಜು ಪರಿಹಾರವಾಗಿ ಪಡೆದ ₹50 ಸಾವಿರವನ್ನು ಸರ್ಕಾರಕ್ಕೆ ಹಿಂತಿರುಗಿಸುವಂತೆ ಆದೇಶಿಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮೊತ್ತವನ್ನು ಸಮಾಜ ಕಲ್ಯಾಣ ಇಲಾಖೆಯ ಜಂಟಿ ಖಾತೆಗೆ ಪಾವತಿಸುವಂತೆ ಸೂಚನೆ ನೀಡಿದ್ದರೂ ಪಾವತಿಸದೆ ವಿಳಂಬ ಮಾಡಿದ್ದರು. ನ್ಯಾಯಾಧೀಶರ ಆದೇಶವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಮನಗಂಡ ನ್ಯಾಯಾಧೀಶರು ಲಿಂಗರಾಜು ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿದ್ದರು.

‘ಲಿಂಗರಾಜು ಅವರಿಗೆ ಸರ್ಕಾರ ಮತ್ತು ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ಪ್ರಕರಣ ದಾಖಲಿಸಿಕೊಂಡು ಪಡೆದಿದ್ದ ಪರಿಹಾರ ಧನ ಸರ್ಕಾರಕ್ಕೆ ವಾಪಸ್‌ ಮಾಡಬೇಕು. ಇಲ್ಲವಾದರೆ ಜೈಲಿಗೆ ಕಳುಹಿಸಬೇಕು’ ಎಂದು ನ್ಯಾಯಾಧೀಶರು ಎಚ್ಚರಿಕೆ ನೀಡಿದರು.

ಇದೀಗ ಆರ್ ಟಿಐ ಕಾರ್ಯಕರ್ತ ಲಿಂಗರಾಜು 50 ಸಾವಿರ ರೂ ಹಣವನ್ನು ಸರ್ಕಾರಕ್ಕೆ ವಾಪಸ್ ಜಮಾ ಮಾಡಿ ‘ಇನ್ನು ಮುಂದೆ ಸರ್ಕಾರಿ ಇಲಾಖೆಗಳಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಹಾಕುವುದಿಲ್ಲ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.

ರಾಜ್ಯ ಹೈಕೋರ್ಟ್‌ ಗೆ ಮುಚ್ಚಳಿಕೆ ಸಲ್ಲಿಸಿದ ಲಿಂಗರಾಜು, ‘ಮಾಹಿತಿ ಹಕ್ಕು ಅರ್ಜಿ ಹಾಗೂ ಸಾಮಾನ್ಯ ಅರ್ಜಿಗಳ ಮೂಲಕ ಅಧಿಕಾರಿಗಳಿಗೆ ಅನಗತ್ಯ ಕಿರುಕುಳವನ್ನು ನೀಡುವುದಿಲ್ಲ. ಒಂದು ವೇಳೆ ತೊಂದರೆ ನೀಡಿದರೆ ಕಾನೂನು ಕ್ರಮ ಕೈಗೊಳ್ಳಬಹುದು’ ಎಂದು ಕ್ಷಮೆ ಕೋರಿ ಮುಚ್ಚಳಿಕೆಯ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಇಬ್ಬರು ವ್ಯಕ್ತಿಗಳ ಶೂರಿಟಿ ಪಡೆದು, ಎಚ್ಚರಿಕೆ ನೀಡಿ ನ್ಯಾಯಾಧೀಶರಾದ ಭಾರತಿ ಅವರು ಆದೇಶಿಸಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.